ಸಿಎಂ ಪತ್ನಿಯಿಂದ ಮುಡಾಗೆ ಎಲ್ಲ 14 ಸೈಟುಗಳು ವಾಪಸ್‌! - ಹಿಂಪಡೆಯಲು ಕೋರಿ ಮುಡಾಗೆ ಪತ್ರ

| Published : Oct 01 2024, 07:21 AM IST / Updated: Oct 01 2024, 07:22 AM IST

Siddaramaiah

ಸಾರಾಂಶ

ಅಚ್ಚರಿಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ವಿವಾದಕ್ಕೆ ಸಿಲುಕಿರುವ 14 ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ನಿವೇಶನಗಳನ್ನು ಹಿಂತಿರುಗಿಸಿದ್ದಾರೆ.

ಬೆಂಗಳೂರು : ಅಚ್ಚರಿಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ವಿವಾದಕ್ಕೆ ಸಿಲುಕಿರುವ 14 ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ನಿವೇಶನಗಳನ್ನು ಹಿಂತಿರುಗಿಸಿದ್ದಾರೆ. ಈ ಮೂಲಕ ಕಳೆದ ಹಲವು ತಿಂಗಳಿಂದ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದದ ತರಂಗವನ್ನೇ ಎಬ್ಬಿಸಿರುವ ‘ಮುಡಾ ಹಗರಣ’ಕ್ಕೆ ಮಹತ್ವದ ತಿರುವು ಲಭಿಸಿದಂತಾಗಿದೆ.

ಈ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನನ್ನ ಪರವಾಗಿ ಕಾರ್ಯಗತಗೊಳಿಸಿದ 14 ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸುವ ಮೂಲಕ ನಾನು ಪರಿಹಾರದ ನಿವೇಶನಗಳನ್ನು ಹಿಂತಿರುಗಿಸಲು ಬಯಸುತ್ತೇನೆ. ಈ ಹಿನ್ನೆಲೆಯಲ್ಲಿ ನಿವೇಶನಗಳ ಸ್ವಾಧೀನವನ್ನು ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ. ದಯವಿಟ್ಟು ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಿ’ ಎಂದು ಕೋರಿದ್ದಾರೆ.

ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಪಾರ್ವತಿ ಅ‍ವರು, ‘ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ.464 ರಲ್ಲಿ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದೆ. ಇದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರವಾಗಿ ವಿಜಯನಗರ 3 ಮತ್ತು 4ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳನ್ನು ಮಂಜೂರು ಮಾಡಿದೆ. ಈ ನಿವೇಶನಗಳ ಕ್ರಯಪತ್ರ ರದ್ದುಗೊಳಿಸಿ ಹಿಂತಿರುಗಿಸಲು ನಿರ್ಧರಿಸಿದ್ದು, ನಿವೇಶನಗಳ ಸ್ವಾಧೀನವನ್ನು ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ನಿವೇಶನ ಹಿಂಪಡೆದು ಸಮಗ್ರ ತನಿಖೆ ನಡೆಸಿ:

ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಪಾರ್ವತಿ ಅವರು, ‘ಈ ನಿವೇಶನಗಳನ್ನು ವಾಪಸು ನೀಡುವುದರ ಜೊತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ’ ಎಂದು ಹೇಳಿದ್ದಾರೆ.