ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್‌ ಕಾಟ ನೀಡುತ್ತಿದ್ದಾರೆ, ಕಳೆದ ಸರ್ಕಾರಕ್ಕಿಂತಲೂ ಈ ಅವಧಿಯಲ್ಲಿ ಪರ್ಸೆಂಟೇಜ್‌ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.

ಬೆಂಗಳೂರು : ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್‌ ಕಾಟ ನೀಡುತ್ತಿದ್ದಾರೆ, ಕಳೆದ ಸರ್ಕಾರಕ್ಕಿಂತಲೂ ಈ ಅವಧಿಯಲ್ಲಿ ಪರ್ಸೆಂಟೇಜ್‌ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌, ಈ ಹಿಂದೆ ಚುನಾವಣೆ ಬಂದಾಗ ಮಾತ್ರ ಶಾಸಕರು ನೆರವು ಕೇಳುತ್ತಿದ್ದರು. ಆದರೆ, ಈಗ ಪ್ರತಿ ಕಾಮಗಾರಿ, ಟೆಂಡರ್‌ ಪ್ರಕ್ರಿಯೆಯಲ್ಲೂ ಶಾಸಕರು ಮೂಗು ತೂರಿಸುತ್ತಿದ್ದಾರೆ. ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್‌ ಕೇಳುತ್ತಿದ್ದಾರೆ. ಟೆಂಡರ್‌ ಮಂಜೂರಾದ ಕೂಡಲೇ ಶಾಸಕರ ಬಳಿ ಹೋಗಿ ಮಾತನಾಡಬೇಕು. ಬಿಲ್‌ ಪಾವತಿಸಿದ ಕೂಡಲೇ ಕಮಿಷನ್‌ ನೀಡಬೇಕು. ಶಾಸಕರು ಹೇಳಿದಂತೆ ಕೇಳದಿದ್ದರೆ ಟೆಂಡರ್‌ ನಿಯಮಗಳನ್ನು ಉಲ್ಲಂಘಿಸಿ ಹಿಂಬಾಲಕರಿಗೆ ಗುತ್ತಿಗೆ ಸಿಗುವಂತೆ ಮಾಡುತ್ತದೆ. ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಮೂಲಕ ಕಮಿಷನ್‌ಗಾಗಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಲೋಕೋಪಯೋಗಿ ಮತ್ತು ಜಿಬಿಎ ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳ ಸಚಿವರಿಗೆ ಕಮಿಷನ್‌ ನೀಡಬೇಕು. ಕಳೆದ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್‌ ಇದ್ದ ಕಮಿಷನ್‌ ಈಗ ಅದಕ್ಕಿಂತ ಭಾರೀ ಹೆಚ್ಚಳವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅನುಮತಿಸಿದರೆ ಕಮಿಷನ್‌ ಪಡೆಯುತ್ತಿರುವ ಜನಪ್ರನಿಧಿಗಳ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

₹38000 ಕೋಟಿ ಬಾಕಿ:

ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ, ವಸತಿ ಇಲಾಖೆ ಸೇರಿ ಎಂಟು ಇಲಾಖೆಗಳಿಂದ ರಾಜ್ಯದ ಗುತ್ತಿಗೆದಾರರಿಗೆ 38 ಸಾವಿರ ಬಾಕಿ ಬಿಲ್‌ ಪಾವತಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ನವೆಂಬರ್‌ ಅಂತ್ಯದೊಳಗೆ ಬಾಕಿ ಬಿಡುಗಡೆ ಮಾಡದಿದ್ದರೆ ಕಮಿಷನ್‌ ಪಡೆಯುವ ಶಾಸಕರೂ ಸೇರಿ ಅಧಿಕಾರಿಗಳು, ಮಧ್ಯವರ್ತಿಗಳ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಂಜುನಾಥ್‌ ಎಚ್ಚರಿಕೆ ನೀಡಿದರು.

ಬಾಕಿ ಬಿಲ್‌ ಪಾವತಿ ಸೇರಿ ಗುತ್ತಿಗೆದಾರರ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲು ರಾಜ್ಯದ ಪ್ರತಿದಿನ ಒಂದು ಜಿಲ್ಲೆಯ ಜಿಲ್ಲಾ ಸಂಘಗಳಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮಾಡಿ ಪ್ರತಿಭಟಿಸಲಾಗುವುದು. ಕಳೆದ 4 ವರ್ಷಗಳಿಂದ ಗುತ್ತಿಗೆದಾರರು ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಹೋರಾಟದ ನಂತರವೂ ಸರ್ಕಾರ ಹಣ ನೀಡದಿದ್ದರೆ ವಿಷ ಕೊಡಲಿ, ಕುಡಿದು ಸಾಯುತ್ತೇವೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್‌, ಗೌರವಾಧ್ಯಕ್ಷ ಕೃಷ್ಣಾ ರೆಡ್ಡಿ, ಕಾರ್ಯಾಧ್ಯಕ್ಷರಾದ ದಿನೇಶ್‌, ಹನುಮಂತಯ್ಯ ಇತರರಿದ್ದರು.

ಶಾಸಕರು ಆಣೆ ಮಾಡಲಿ: ಮಂಜುನಾಥ್‌

ಕಮಿಷನ್ ಹಣ ತೆಗೆದುಕೊಂಡಿಲ್ಲ ಎಂದು ಶಾಸಕರು ಎಲ್ಲಿಗೆ ಬೇಕಾದರೂ ಬಂದು ದೇವರ ಮುಂದೆ ಆಣೆ ಮಾಡಲಿ. ನಾವೂ ಆಣೆ ಮಾಡಲು ಸಿದ್ಧರಿದ್ದೇವೆ. ಶಾಸಕರು ಇದಕ್ಕೆ ಸಿದ್ಧರಿದ್ದಾರೆಯೇ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಪ್ರಶ್ನಿಸಿದರು.

ಬಾಕಿ ಬಿಲ್‌ ಮೊತ್ತದ ವಿವರ:

ಇಲಾಖೆ ಬಾಕಿ ಮೊತ್ತ

ಜಲಸಂಪನ್ಮೂಲ 14 ಸಾವಿರ ಕೋಟಿ ರು.

ಲೋಕೋಪಯೋಗಿ 8370 ಕೋಟಿ ರು.

ಸಣ್ಣ ನೀರಾವರಿ 3600 ಕೋಟಿ ರು.

ಆರ್‌ಡಿಪಿಆರ್‌ 3000 ಕೋಟಿ ರು.

ವಸತಿ-ವಕ್ಫ್‌ 2600 ಕೋಟಿ ರು.

ಜಿಬಿಎ (ಬಿಬಿಎಂಪಿ) 2600 ಕೋಟಿ ರು.

ಕಾರ್ಮಿಕ 2000 ಕೋಟಿ ರು.

ನಗರಾಭಿವೃದ್ಧಿ 1800 ಕೋಟಿ ರು.

ಒಟ್ಟು 37980 ಕೋಟಿ ರು.