ಸಾರಾಂಶ
ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಅಂಬರೀಶ್ ಓಟುಗಳು ಕಾರಣ ಎಂದು ಸಂಸದೆ ಸುಮಲತಾ ಅಂಬರೀಶ್ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಅಂಬರೀಶ್ ಓಟುಗಳು ಕಾರಣ ಎಂದು ಸಂಸದೆ ಸುಮಲತಾ ಅಂಬರೀಶ್ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಅಂದಿನ ಚುನಾವಣಾ ಸಮಯದಲ್ಲಿ ನನಗೆ ಕಾಂಗ್ರೆಸ್, ರೈತಸಂಘ, ಪಕ್ಷದಲ್ಲಿ ಇಲ್ಲದಿದ್ದ ಅಂಬರೀಶ್ ಅಭಿಮಾನಿಗಳು, ಜೆಡಿಎಸ್ ಪಕ್ಷದೊಳಗಿದ್ದ ಅಂಬರೀಶ್ ಬೆಂಬಲಿಗರು, ಬಿಜೆಪಿ ಸೇರಿದಂತೆ ಎಲ್ಲರೂ ಗೆಲುವಿಗೆ ಸಹಕಾರ ನೀಡಿದ್ದಾರೆ.
ಕೇವಲ ಕಾಂಗ್ರೆಸ್ ಪಕ್ಷದ ಮತಗಳಿಂದ ಗೆದ್ದೆ ಎಂದರೆ ತಪ್ಪಾಗುತ್ತದೆ ಎಂದು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸಿದ್ದರಾಮಯ್ಯನವರು ತುಂಬಾ ಹಿರಿಯರು, ಅಂಬರೀಶ್ ಜೊತೆ ಒಡನಾಟ ಇಟ್ಟುಕೊಂಡವರು, ಅವರ ಬಗ್ಗೆ ಅಪಾರ ಗೌರವವಿದೆ. ಮಂಡ್ಯದ ಆಂತರಿಕ ರಾಜಕಾರಣದ ಬಗ್ಗೆ ಜನರಲ್ ಆಗಿ ಮಾತನಾಡುತ್ತಾರೆ.
ಚುನಾವಣೆ ವೇಳೆ ಎಲ್ಲರೂ ನನ್ನ ಪರವಾಗಿದ್ದರು. ಜೆಡಿಎಸ್‌ನಲ್ಲಿದ್ದ ಅಂಬರೀಶ್ ಅಭಿಮಾನಿಗಳು ನನ್ನ ಜೊತೆ ನಿಂತು ಕೆಲಸ ಮಾಡಿ ಓಟು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಆದೇಶ ಉಲ್ಲಂಘಿಸಿ ಕಾರ್ಯಕರ್ತರು ಅಂದು ನನ್ನ ಪರ ನಿಂತರು. ಅದರ ಲಾಭವನ್ನು ಇವರು ಹೇಗೆ ಪಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ನನ್ನ ಪರ ನಿಂತ ಕಾಂಗ್ರೆಸ್ ಕಾರ್ಯಕರ್ತರನ್ನು ವಜಾಗೊಳಿಸಿದ್ದಾರೆ. ಈಗ ಸುಮಲತಾ ಗೆಲುವಿಗೆ ನಾವೇ ಕಾರಣ ಎಂದು ಹೇಳಿದರೆ ಹೇಗೆ?, ಡಿ.ಕೆ.ಶಿವಕುಮಾರ್ ಇಲ್ಲಿಗೆ ಬಂದು ನಾವು ಜೋಡೆತ್ತುಗಳು. ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದರು.
ಹಾಗಾದರೆ ನನ್ನ ಗೆಲುವಿಗೂ ನಿಖಿಲ್ ಸೋಲಿಗೂ ಇವರೇ ಕಾರಣನಾ. ಕಾರ್ಯಕರ್ತರ ನಿಲುವೇ ಬೇರೆಯಾಗಿತ್ತು. ನಾಯಕರಿಗೆ ವಿರುದ್ಧವಾಗಿ ಅಂಬರೀಶ್ ಪರವಾಗಿ ಅವರು ನಡೆದುಕೊಂಡರು.
ನನಗೆ ದೊರಕಿದ್ದು ಅಂಬರೀಶ್ ಓಟುಗಳು. ಅದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ರೈತಸಂಘ ಸೇರಿದಂತೆ ಉಳಿದವರೆಲ್ಲರನ್ನೂ ಸೇರಿಸಿಕೊಳ್ಳಬಹುದು ಎಂದರು.
ಐದು ವರ್ಷ ಕಾಂಗ್ರೆಸ್‌ನವರು ಅಂಬರೀಶ್ ಹೆಸರನ್ನೇ ಮರೆತಿದ್ದರು. ಲೋಕಸಭಾ ಚುನಾವಣೆ ವೇಳೆ ಅಂಬರೀಶ್ ಹೆಸರನ್ನು ವೃತ್ತಕ್ಕೋ, ರಸ್ತೆಗೆ ಹೆಸರಿಡುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಘೋಷಣೆ ಮಾಡುತ್ತಾರೆ. ಅನುಷ್ಠಾನ ಮಾಡುವುದು ಮುಖ್ಯವಲ್ಲವೇ. ಅವರ ಅಭ್ಯರ್ಥಿ ಸೋತರೂ ಅದನ್ನು ಜಾರಿಗೆ ತರುತ್ತಾರಾ ಅನ್ನೋದನ್ನು ನೋಡಬೇಕು. ಮಂಡ್ಯದ ಜನರೇನು ಅಷ್ಟು ದಡ್ಡರಲ್ಲ ಎಂದರು.
ಟಿಕೆಟ್ ಸಿಗುವ ಬಗ್ಗೆ ಖಚಿತವಾಗಿ ಹೇಳೋಕೆ ನಾನೇನು ಜ್ಯೋತಿಷಿಯಲ್ಲ. ನಮ್ಮ ಜೀವನದ ಬಗ್ಗೆಯೇ ಖಚಿತವಾಗಿ ಹೇಳೋಕೆ ಆಗೋಲ್ಲ. ಅಂದ ಮೇಲೆ ಟಿಕೆಟ್ ಬಗ್ಗೆ ಹೇಳಲಾಗುವುದೇ. ನನಗೆ ಬಿಜೆಪಿ ಬಗ್ಗೆ ವಿಶ್ವಾಸವಿದೆ.
ಟಿಕೆಟ್ ನನಗೇ ಸಿಗಲಿದೆ ಎಂಬ ನಂಬಿಕೆ ದೃಢವಾಗಿದೆ. ವದಂತಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನೆರಡು-ಮೂರು ದಿನದಲ್ಲಿ ಎಲ್ಲವೂ ಬಹಿರಂಗವಾಗುತ್ತೆ. ಅಲ್ಲಿಯವರೆಗೆ ಕಾಯೋಣ ಎಂದು ನುಡಿದರು.
ಮಾ.೧೫ರ ಬಳಿಕ ನಾನು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಅದಕ್ಕೆ ಒಳ್ಳೆಯ ದಿನ, ಒಳ್ಳೆಯ ಮುಹೂರ್ತವನ್ನು ನೋಡುತ್ತಿದ್ದೇನೆ. ಶುಭ ದಿನದಂದು ಬಿಜೆಪಿ ಸೇರಲಿದ್ದೇನೆ ಎಂದರು.
ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ಮದ್ದೂರು ತಾಲೂಕು ಅಧ್ಯಕ್ಷ ಹೊಟ್ಟೇಗೌಡನದೊಡ್ಡಿ ನಾಗೇಶ, ಮುಟ್ಟನಹಳ್ಳಿ ಮಹೇಂದ್ರ, ಹಾಗಲಹಳ್ಳಿ ಬಸವರಾಜು, ಕೋಣಸಾಲೆ ಜಯರಾಂ, ಶಶಿಕುಮಾರ್ ಇದ್ದರು.
ಸುಮಲತಾ ಪರ ನಾಲ್ವರು ಸ್ಟಾರ್ ನಟರು ಪ್ರಚಾರ: ನಟ, ಪುತ್ರ ಅಭಿಷೇಕ್
ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಮ್ಮ ಸುಮಲತಾ ಪರ ಜೋಡೆತ್ತುಗಳ ಜೊತೆಗೆ ಇನ್ನೂ ನಾಲ್ವರು ಸ್ಟಾರ್ ನಟರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪುತ್ರ ನಟ ಅಭಿಷೇಕ್ ಅಂಬರೀಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಂಬರೀಶ್ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ ಮಾತನಾಡಿ, ಚುನಾವಣೆಯಲ್ಲಿ ಅಂಬರೀಶ್ ಅಭಿಮಾನಿಗಳು ಒಗ್ಗಟ್ಟಾಗಿ ಅಮ್ಮ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮ್ಮನ ಪರ ನಟರಾದ ದರ್ಶನ್ ಹಾಗೂ ಯಶ್ ನನ್ನೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡು ಗೆಲುವಿಗೆ ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.
ಈ ಚುನಾವಣೆಯಲ್ಲಿ ಜೋಡೆತ್ತುಗಳಾದ ದರ್ಶನ್ ಹಾಗೂ ಯಶ್ ಜೊತೆಗೆ ಕನ್ನಡ ಚಿತ್ರರಂಗದ ಇನ್ನೂ ನಾಲ್ವರು, ಸ್ಟಾರ್ ನಟರುಗಳು ಪ್ರಚಾರ ನಡೆಸಲಿದ್ದಾರೆ ಎಂದು ಅಭಿಷೇಕ್ ಸುಳಿವು ನೀಡಿದರು.
ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ನಾಲ್ವರು ನಟರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ ಅಭಿಷೇಕ ಮುಂದೆ ಗೊತ್ತಾಗುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ ಎಂದರು.
;Resize=(128,128))
;Resize=(128,128))
;Resize=(128,128))