ಸಾರಾಂಶ
ಹುಣಸೂರು : ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ಮಹದೇವ್ ಅವರ ಪುತ್ರರಾದ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ನಡುವೆ ರಾಜಕೀಯ ಜಟಾಪಟಿ ಏರ್ಪಟ್ಟಿದೆ.
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವರಾಗಿರುವ ಪ್ರಸನ್ನ ಅವರಿಗೆ ಕಳೆದ 14 ತಿಂಗಳಲ್ಲಿ ಬರೋಬ್ಬರಿ 24 ನೋಟೀಸ್ ಜಾರಿಗೊಳಿಸಲಾಗಿದೆ.
ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಅವರು, ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಹೊಂದಿದ್ದಾರೆ. ಆದರೆ ತಮ್ಮ ಸದಸ್ಯತ್ವ ರದ್ದುಪಡಿಸುವ ಮೂಲಕ ತಮ್ಮನ್ನು ಮೈಮುಲ್ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಸಬಹುದೆಂಬ ದುರುದ್ದೇಶದಿಂದ ಸಚಿವ ಕೆ. ವೆಂಕಟೇಶ್ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಸನ್ನ ಆರೋಪಿಸಿದ್ದಾರೆ.
ನಾನು ಕಗ್ಗುಂಡಿ ಗ್ರಾಮದಲ್ಲಿ ವಾಸವಿದ್ದು, ನನ್ನ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಹುಟ್ಟೂರಾದ ಕಗ್ಗುಂಡಿ ಗ್ರಾಮದಲ್ಲೇ ಹೊಂದಿರುತ್ತೇನೆ. ಆದರೆ ನಾನು ಪಿರಿಯಾಪಟ್ಟಣದಲ್ಲಿ ವಾಸವಿದ್ದೇನೆ ಎಂಬ ನೆಪವನ್ನು ಮುಂದಿಟ್ಟುಕೊಂಡು, ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೂಲಕ ನೋಟೀಸ್ ಜಾರಿ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ನನ್ನ ವಾಸ ಸ್ಥಳ ದೃಢೀಕರಣ ಪತ್ರ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ. ಆದರೂ ನನ್ನ ಸದಸ್ಯತ್ವ ರದ್ದುಪಡಿಸುವ ಉದ್ದೇಶದಿಂದ ಮೇಲಿಂದ ಮೇಲೆ ನೋಟೀಸ್ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
ರಾಜಕೀಯ ದುರುದ್ದೇಶ ಅಡಗಿದೆ:
ಈ ಬಗ್ಗೆ ಎಂ.ಪಿ. ಪ್ರಸನ್ನ ಮಾತನಾಡಿ, 2023ರ ವಿಧಾನಸಭಾ ಚುನಾವಣೆ ನಂತರ ಪಿರಿಯಾಪಟ್ಟಣದ ಶಾಸಕ ಕೆ. ವೆಂಕಟೇಶ್ ಅವರು ಪಶುಸಂಗೋಪನಾ ಸಚಿವರಾದ ಬಳಿಕ ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ದಬ್ಬಾಳಿಕೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು ಎಂಬ ಕಾರಣಕ್ಕೆ ಹಾಗೂ ಚುನಾವಣೆಯಲ್ಲಿ ನಮ್ಮ ತಂದೆ ಅವರು, ಕೆ. ವೆಂಕಟೇಶ್ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು, ಚುನಾವಣೆಯಲ್ಲಿ ನಾನು ಸಹ ಕೆಲಸ ಮಾಡಿದ್ದೆ ಎಂಬ ವೈಯಕ್ತಿಕ ದ್ವೇಷದಿಂದ ಹಾಗೂ ಮುಂದಿನ ದಿನಗಳಲ್ಲಿ ತಮ್ಮ ಮಗನಿಗೆ ತೊಂದರೆಯಾಗಬಾರದೆಂಬ ದುರುದ್ದೇಶದಿಂದ ವೆಂಕಟೇಶ್ ಅವರು ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಸದಸ್ಯತ್ವ ರದ್ದುಪಡಿಸುವ ಹುನ್ನಾರ:
ಕಗ್ಗುಂಡಿ ಗ್ರಾಮದ ಸಣ್ಣ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದೇನೆ ಎಂಬ ಆರೋಪದ ಜೊತೆಗೆ ಸಂಘದಲ್ಲಿ ನನ್ನ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದರೆ, ಒಕ್ಕೂಟದಿಂದ ನನ್ನನ್ನು ವಜಾ ಮಾಡಬಹುದೆಂಬ ಉದ್ದೇಶದಿಂದ ಸಚಿವರು ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ.
ಈ ಹಿಂದೆ 2015ರಲ್ಲಿ ನಾನು ಮೊದಲ ಬಾರಿಗೆ ಗೆದ್ದಾಗ ಇದೇ ಕೆ. ವೆಂಕಟೇಶ್ಅವರು ಶಾಸಕರಾಗಿದ್ದ ವೇಳೆ ವಾಸ ಸ್ಥಳ ದೃಢೀಕರಣ ಪತ್ರವನ್ನು ವಜಾಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ ನಾನು ಕಗ್ಗುಂಡಿ ಗ್ರಾಮದಲ್ಲಿ ವಾಸವಿರುವುದಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ವೋಟರ್ಕಾರ್ಡ್ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದ ಸಂದರ್ಭದಲ್ಲಿ ಹೈಕೋರ್ಟ್ನಲ್ಲಿ ತಡೆಯಾಜ್ಞೆ ನೀಡಲಾಗಿದ್ದು, ಇಂದಿಗೂ ಈ ವಿಷಯ ಕೋರ್ಟ್ನಲ್ಲಿದೆ. ಹೀಗಿದ್ದರೂ ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೋಟೀಸ್ ನೀಡುತ್ತಾ ಬಂದಿದ್ದು, ಈ ವಿಚಾರ ಕೋರ್ಟ್ನಲ್ಲಿದೆ ಎಂದರು ಯಾವುದೇ ಮನ್ನಣೆ ನೀಡದೆ ಪದೇ ಪದೇ ನೋಟೀಸ್ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಅಧಿಕಾರ ಕಸಿಯುವ ಯತ್ನ: ನಾನು ಮೈಮುಲ್ಅಧ್ಯಕ್ಷನಾಗಿದ್ದೇನೆ ಹಾಗೂ ನನ್ನ ಪ್ರಾಬಲ್ಯವನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಸಚಿವ ಕೆ. ವೆಂಕಟೇಶ್ಅವರು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಮೈಮುಲ್ ನ ಎಲ್ಲ ನಿರ್ದೇಶಕರನ್ನು ಕರೆದು ನನ್ನನ್ನು ಕೆಳಗಿಳಿಸಿ, ಇಲ್ಲವಾದರೆ ನಿಮ್ಮೆಲ್ಲರಿಗೂ ತೊಂದರೆ ಕೊಡುತ್ತೇನೆ ಎಂದು ಸಚಿವರು ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಪ್ರಸನ್ನ ಕುಮಾರ್ಗಂಭೀರ ಅವರ ಆರೋಪ.
ಮೈಮುಲ್ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸಗಳಾಗಿವೆ. ಆದರೆ ಮುಂದಿನ ದಿನಗಳಲ್ಲಿ ತಮ್ಮ ಮಗನಿಗೆ ರಾಜಕೀಯವಾಗಿ ತೊಂದರೆ ಆಗಬಾರದೆಂಬ ಕಾರಣಕ್ಕೆ ಸಿಎಂ ಹೆಸರು ದುರ್ಬಳಕೆ ಮಾಡಿಕೊಂಡು, ಅಧಿಕಾರಿಗಳ ಮೂಲಕ ಸಚಿವ ಕೆ. ವೆಂಕಟೇಶ್ಅವರು ಕಿರುಕುಳ ನೀಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತೇನೆ.
- ಪಿ.ಎಂ. ಪ್ರಸನ್ನ, ಮೈಮುಲ್ಅಧ್ಯಕ್ಷ
ಸಚಿವ ಕೆ. ವೆಂಕಟೇಶ್ ಅವರು ದ್ವೇಷದ ರಾಜಕಾರಣ ಮಾಡುವ ದುರುದ್ದೇಶದಿಂದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ದೊಡ್ಡಬೇಲಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷನಾದ ನನಗೆ ಹಾಗೂ ಉಪಾಧ್ಯಕ್ಷರ ವಿರುದ್ಧ ಎಫ್ಐಆರ್ಮಾಡಿಸುತ್ತಾರೆ. ನಾವು ಜೆಡಿಎಸ್ಪಕ್ಷದವರು ಹಾಗೂ ಮಾಜಿ ಶಾಸಕ ಕೆ. ಮಹದೇವ್ಹಾಗೂ ಎಂ.ಪಿ. ಪ್ರಸನ್ನ ಕುಮಾರ್ಬೆಂಬಲಿಗರು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ.
- ಶಿವಣ್ಣ, ಮಾಜಿ ಅಧ್ಯಕ್ಷ, ದೊಡ್ಡಬೇಲಾಳು ಸಹಕಾರ ಸಂಘ