ಸಾರಾಂಶ
ರಾಮನಗರ ಜಿಲ್ಲೆಯಲ್ಲಿ ತಲೆ ಎತ್ತಲಿವೆ 2 ವೈದ್ಯಕೀಯ ಕಾಲೇಜುಗಳು । ಆರ್‌ಜಿಯುಎಚ್‌ಎಸ್ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ । ಡಿಕೆ ಸಹೋದರರು ಕನಕಪುರಕ್ಕೆ ಮೆಡಿಕಲ್ ಕಾಲೇಜು ಘೋಷಿಸಿಕೊಳ್ಳುವಲ್ಲಿ ಯಶಸ್ವಿ
ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಕೇಂದ್ರದಿಂದ ಮೆಡಿಕಲ್ ಕಾಲೇಜನ್ನು ಕೊಂಡೊಯ್ದರು ಎಂಬ ಆರೋಪದಿಂದ ಮುಕ್ತರಾಗಲು ಡಿಕೆ ಸಹೋದರರು ತಮ್ಮ ತವರು ತಾಲೂಕಾದ ಕನಕಪುರಕ್ಕೆ ಪ್ರತ್ಯೇಕ ಮೆಡಿಕಲ್ ಕಾಲೇಜು ಗಿಟ್ಟಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ತವರಾದ ಕನಕಪುರ ತಾಲೂಕಿನಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ. ಇದರೊಂದಿಗೆ ರಾಮನಗರದ ರಾಜೀವ್ ಆರೋಗ್ಯ ವಿವಿ ಕ್ಯಾಂಪಸ್ ಮತ್ತು ಕನಕಪುರ ಸೇರಿದಂತೆ ಜಿಲ್ಲೆಯಲ್ಲಿ ಎರಡು ವೈದ್ಯಕೀಯ ಕಾಲೇಜುಗಳು ತಲೆ ಎತ್ತಲಿವೆ.
ಆರೋಗ್ಯ ವಿವಿಯಲ್ಲಿ ನವೆಂಬರ್ 24ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕನಕಪುರ ತಾಲೂಕಿಗೂ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅನುಮೋದನೆ ಸಿಕ್ಕಿದೆ. ಈ ಮೂಲಕ ಜಿಲ್ಲಾ ಕೇಂದ್ರದ ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರವಾಗಿದೆ ಎಂಬ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.ರಾಮನಗರದಲ್ಲಿ ನಿರ್ಮಾಣವಾಗಬೇಕಿದ್ದ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜನ್ನು ಡಿಕೆ ಸಹೋದರರು ತಮ್ಮ ಕ್ಷೇತ್ರಕ್ಕೆ ಕೊಂಡೊಯ್ದಿದ್ದಾರೆ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ , ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರ ಭಿನ್ನ ಹೇಳಿಕೆಗಳು ಸಾಕಷ್ಟು ಗೊಂದಲಕ್ಕೂ ಕಾರಣವಾಗಿದ್ದವು. ಅಲ್ಲದೆ, ಇವರೆಲ್ಲರ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.
ವಿಪಕ್ಷಗಳು ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರವನ್ನು ಲೋಕಸಭಾ ಚುನಾವಣೆಯಲ್ಲಿಯೂ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಆಲೋಚನೆಯಲ್ಲಿತ್ತು. ಈ ಕಾರಣಕ್ಕಾಗಿಯೇ ಉಭಯ ಪಕ್ಷಗಳ ನಾಯಕರು ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿತ್ತು. ಆ ಸಮಿತಿ ನೇತೃತ್ವದಲ್ಲಿಯೇ ರಾಮನಗರ ಬಂದ್ ನಂತಹ ಚಳವಳಿಗಳನ್ನು ಯಶಸ್ವಿಗೊಳಿಸಿ ರಾಜ್ಯ ಸರ್ಕಾರಕ್ಕೆ ಗಡುವು ಕೂಡ ನೀಡಿತ್ತು.ಲೋಕಸಭಾ ಚುನಾವಣೆ ಸಮಯದಲ್ಲಿ ಮೆಡಿಕಲ್ ಕಾಲೇಜಿನ ವಿವಾದ ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಮುಂದಾಲೋಚನೆ ಹಾಗೂ ವಿಪಕ್ಷ ನಾಯಕರ ಆರೋಪಗಳಿಗೆ ಸೆಡ್ಡು ಹೊಡೆಯುವ ಉದ್ದೇಶದಿಂದಲೇ ಡಿ.ಕೆ. ಸಹೋದರರು, ಕಡೆಗೂ ತಮ್ಮ ಪ್ರಭಾವ ಬಳಸಿ ತಾಲೂಕಿಗೆ ಪ್ರತ್ಯೇಕ ವೈದ್ಯಕೀಯ ಕಾಲೇಜು ಘೋಷಣೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಹೊಸ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ತನ್ನ ಪೋರ್ಟಲ್‌ನಲ್ಲಿ ಇತ್ತೀಚೆಗಷ್ಟೇ ಅರ್ಜಿ ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿಚಾರಣಾ ಸಮಿತಿಯು ನವೆಂಬರ್ 23ರಂದು ವಿ.ವಿ.ಯ ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ ಅನ್ನು ಭೇಟಿ ಮಾಡಿ, ಕನಕಪುರದಲ್ಲಿ ಕಾಲೇಜಿನ ಅಗತ್ಯ ಮತ್ತು ಕಾರ್ಯಸಾಧ್ಯತೆ ಕುರಿತು ವರದಿ ನೀಡಿತ್ತು. ಆ ವರದಿಯ ಮೇರೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ .ಇಷ್ಟೇ ಅಲ್ಲದೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತಾದರೂ ಅದು ಅನಮೋದನೆಯಾಗಲಿಲ್ಲ ಎಂದು ವಿವಿ ಮೂಲಗಳು ತಿಳಿಸಿವೆ.ಸರ್ಕಾರವು ರಾಮನಗರ ಮತ್ತು ಕನಕಪುರ ವೈದ್ಯಕೀಯ ಕಾಲೇಜಿಗೆ ತಲಾ 150 ಸೀಟುಗಳಿಗೆ ಅರ್ಜಿ ಹಾಕಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಸದ್ಯ 10 ಲಕ್ಷ ಜನಸಂಖ್ಯೆಗೆ 100 ಸೀಟುಗಳ ಮಿತಿ ಹಾಕಿದೆ. ಸರ್ಕಾರ ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಹೆಚ್ಚುವರಿ ತಲಾ 50 ಸೀಟುಗಳ ಕುರಿತು ಆಯೋಗವೇ ನಿರ್ಧಾರ ಕೈಗೊಳ್ಳಬೇಕಿದೆ.
----ಬಾಕ್ಸ್ ....
ಕಾಮಗಾರಿ ಪ್ರಗತಿಯಲ್ಲಿ ಮೆಡಿಕಲ್ ಕಾಲೇಜುಕಳೆದ ಒಂದೂವರೆ ದಶಕದಿಂದ ಜಿಲ್ಲಾ ಕೇಂದ್ರ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಐದು ಬಾರಿ ಭೂಮಿ ಪೂಜೆ ನೆರವೇರಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಆರನೇ ಬಾರಿ ಶಾಸಕ ಇಕ್ಬಾಲ್ ಹುಸೇನ್ ರವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಸದ್ಯಕ್ಕೆ ಕಾಮಗಾರಿ ಪ್ರಗತಿಯಲ್ಲಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿ ಘೋಷಣೆಯಾಗಿ 16 ವರ್ಷ ಕಳೆದಿದ್ದು, ಇಲ್ಲಿವರೆಗೆ ಐದು ಬಾರಿ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಮೊದಲು ಸಚಿವರಾಗಿದ್ದ ಬಚ್ಚೇಗೌಡ, ರಾಮಚಂದ್ರೇಗೌಡ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಶ್ರೀರಾಮುಲು ವಿವಿ ನಿರ್ಮಾಣಕ್ಕೆ ಭೂಮಿ ನೆರವೇರಿಸಿದರು. ಆರೋಗ್ಯ, ವೈದ್ಯಕೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದರು.2023ರ ಮಾರ್ಚ್ ತಿಂಗಳಲ್ಲಿ ಐದನೇ ಬಾರಿಗೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದು, ಆರೋಗ್ಯ ವಿವಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆಯಲ್ಲದೆ ವೇಗವನ್ನು ಪಡೆದುಕೊಂಡಿದೆ.--------
ಕೋಟ್ ...ಕನಕಪುರಕ್ಕೂ ವೈದ್ಯಕೀಯ ಕಾಲೇಜು ಕೋರಿ ರಾಜ್ಯ ಸರ್ಕಾರ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಅರ್ಜಿ ಹಾಕಿತ್ತು. ಆ ಮೇರೆಗೆ, ತಜ್ಞರ ತಂಡವನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಲಾಗಿತ್ತು. ವಿವಿಧ ಮಾನದಂಡಗಳಡಿ ತಂಡವು ನೀಡಿದ ವರದಿ ಮೇರೆಗೆ, ಸಿಂಡಿಕೇಟ್ ಸಭೆಯಲ್ಲಿ ಕಾಲೇಜಿಗೆ ಅನುಮೋದನೆ ಕೊಟ್ಟಿದ್ದೇವೆ. ಮುಂದಿನ ಹಂತವಾಗಿ, ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಅರ್ಜಿ ಹಾಕಬೇಕಿದೆ. ಅಲ್ಲಿ ಅಂತಿಮ ಅನುಮತಿ ದೊರೆತ ಬಳಿಕ ಕಾಲೇಜು ಸ್ಥಾಪನೆಯಾಗಲಿದೆ.
- ಡಾ.ಎಂ.ಕೆ.ರಮೇಶ್ , ಉಪಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ.-----