ಸಾರಾಂಶ
ದಕ್ಷಿಣ ರಾಜ್ಯಗಳಿಗೆ ಅನುದಾನ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಷ್ಟೇ ಒತ್ತು ಕರ್ನಾಟಕಕ್ಕೂ ನೀಡಬೇಕು. ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಿ ಸಮ್ಮುಖದಲ್ಲೇ ಒತ್ತಾಯಿಸಿದ್ದಾರೆ.
ಬೆಂಗಳೂರು : ದಕ್ಷಿಣ ರಾಜ್ಯಗಳಿಗೆ ಅನುದಾನ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ, ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಷ್ಟೇ ಒತ್ತು ಕರ್ನಾಟಕಕ್ಕೂ ನೀಡಬೇಕು. ಉತ್ತರ ರಾಜ್ಯಗಳಂತೆ ಕರ್ನಾಟಕ್ಕೂ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರಧಾನಿ ಮೋದಿ ಸಮ್ಮುಖದಲ್ಲೇ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ಭಾನುವಾರ ನಡೆದ ಮೆಟ್ರೋ ಹಂತ-3ರ ಶಂಕುಸ್ಥಾಪನೆ, ಮೆಟ್ರೋ ಹಂತ- 2ರ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದ ಉದ್ಘಾಟನೆ ಮತ್ತು ಬೆಂಗಳೂರಿನಿಂದ ಬೆಳಗಾವಿ ಸೇರಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಅಭಿವೃದ್ಧಿ ವಿಚಾರವಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಅದೇ ರೀತಿ ಅಭಿವೃದ್ಧಿ ಕಾಮಗಾರಿ, ಯೋಜನೆ, ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೂ ಒತ್ತು ನೀಡಬೇಕು ಎಂದು ಪ್ರಧಾನಿ ಅವರನ್ನು ಒತ್ತಾಯಿಸಿದರು.
ಮನಮೋಹನ್ ಸಿಂಗ್ ಅವರು 2005ರಲ್ಲಿ ಪ್ರಧಾನಿಯಾಗಿದ್ದ ವೇಳೆ ನಮ್ಮ ಮೆಟ್ರೋಗೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನಲ್ಲಿ 96.10 ಕಿ.ಮೀ. ನಮ್ಮ ಮೆಟ್ರೋ ಜಾಲ ಇದೆ. ಇದಕ್ಕೆ ₹25,387 ಕೋಟಿ ರಾಜ್ಯ ಸರ್ಕಾರ ಖರ್ಚು ಮಾಡಿದ್ದರೆ, ಕೇಂದ್ರ ಸರ್ಕಾರ ₹7468.86 ಕೋಟಿ ವೆಚ್ಚ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಮ್ಮ ಮೆಟ್ರೋ ಯೋಜನೆ ನಿರ್ಮಿಸಲಾಗುತ್ತಿದೆ. ಯೋಜನೆಗೆ 50:50ರ ಅನುಪಾತದಲ್ಲಿ ವೆಚ್ಚ ಭರಿಸಬೇಕು. ಆದರೆ ರಾಜ್ಯ ಸರ್ಕಾರವೇ ಹೆಚ್ಚು ವೆಚ್ಚ ಮಾಡುತ್ತಿದೆ ಎಂದರು.
ಹಳದಿ ಮಾರ್ಗವನ್ನು ₹7160 ಕೋಟಿ ವೆಚ್ಚದಲ್ಲಿ ರೂಪಿಸಲಾಗಿದ್ದು, 19.15 ಕಿ.ಮೀ. ವ್ಯಾಪ್ತಿ ಹೊಂದಿದೆ. ನಿತ್ಯ 3.50 ಲಕ್ಷ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆ ಇದೆ. ಈಗಾಗಲೇ ಹಸಿರು ಮತ್ತು ನೇರಳೆ ಮಾರ್ಗದ ಮೂಲಕ 9 ಲಕ್ಷ ಪ್ರಯಾಣಿಕರು ನಿತ್ಯ ಪ್ರಯಾಣಿಸುತ್ತಿದ್ದು, ಹಳದಿ ಮಾರ್ಗದ ಪ್ರಯಾಣಿಕರು ಸೇರಿ 12.50 ಲಕ್ಷ ಪ್ರಯಾಣಿಕರು ಇನ್ಮುಂದೆ ನಿತ್ಯ ನಮ್ಮ ಮೆಟ್ರೋದಲ್ಲಿ ಸಂಚರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿ ನಿತ್ಯ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಜನರು ಮೆಟ್ರೋದಲ್ಲಿ ಪ್ರಯಾಣಿಸಲಿ ಎನ್ನುವ ಸದುದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
2030ಕ್ಕೆ ಬೆಂಗಳೂರಿನಲ್ಲಿ 220 ಕಿ.ಮೀ. ಮೆಟ್ರೋ:
2030ರ ವೇಳೆಗೆ ಬೆಂಗಳೂರಿನಲ್ಲಿ 220 ಕಿ.ಮೀ. ನಮ್ಮ ಮೆಟ್ರೋ ಜಾಲ ವಿಸ್ತರಿಸುವ ಗುರಿ ಹೊಂದಲಾಗಿದೆ. ಆ ವೇಳೆಗೆ 30 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಇದರ ಪ್ರಕಾರ ಮೆಟ್ರೋ-3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮೆಟ್ರೋ-3ಎ ಮಾರ್ಗದ ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಿ ಕೇಂದ್ರಕ್ಕೆ ಅನುಮೋದನೆಗೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ವಿಸ್ತೃತ ವರದಿಗೆ ಅನುಮೋದನೆ ನೀಡಿದ ತಕ್ಷಣ ಕಾಮಗಾರಿ ಶುರುವಾಗಲಿದೆ ಎಂದರು.
ಏನ್ ನಗ್ತಾ ಇದೀಯಲ್ಲಯ್ಯಾ?
ಪ್ರಧಾನಿಯೆದುರೇ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಒತ್ತು ನೀಡಿದಷ್ಟೇ ಕರ್ನಾಟಕಕ್ಕೂ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ವೇದಿಕೆಯತ್ತ ನೋಡಿ ಏನು ನಗ್ತಿದಿಯಲ್ಲಯ್ಯಾ? ಎಂದು ಹೇಳಿ ತಾವೂ ನಕ್ಕರು. ಒಂದರೆ ಕ್ಷಣ ಯಾರಿಗೆ ಈ ಮಾತು ಹೇಳಿದ್ದಾರೆಂದು ಅರ್ಥವಾಗದಿದ್ದರೂ ಈ ಮಾತು ಒಳಾರ್ಥ ಒಳಗೊಂಡಿದೆ, ರಾಜಕೀಯ ಎದುರೇಟು ಎಂದರಿತ ಪ್ರೇಕ್ಷಕರು, ಸಭಾಸದರು ಕೂಡ ನಕ್ಕು ಸುಮ್ಮನಾದರು.
ಮೋದಿಗೆ ಗೌರವ ಕೊಡಲೆಂದು ಉದ್ಘಾಟನೆಗೆ ಕರೆದಿದ್ದೇವೆ: ಡಿಕೆ
ಬೆಂಗಳೂರು : ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ. 80 ರಷ್ಟು ಖರ್ಚು ಮಾಡಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ಶೇ.20ರಷ್ಟು ಮಾತ್ರ ವೆಚ್ಚ ಮಾಡಿದೆ. ಇನ್ನು ಕೆಲ ಕಡೆ ಖರ್ಚು ಮಾಡಿದ್ದು ಶೇ.11 ರಷ್ಟು ಮಾತ್ರ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನೀಡುವ ಸಲುವಾಗಿ ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಹಳದಿ ಮಾರ್ಗದ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಸರ್ಕಾರ ಯೋಜನೆಗೆ ಶೇ.50ರಷ್ಟು ಪಾಲು ನೀಡಬೇಕಾಗಿತ್ತು. ಆದರೆ ನೀಡಿಲ್ಲ. ಬೆಂಗಳೂರು ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ನಗರವಾದರೂ ಸಿಗುತ್ತಿರುವ ಅನುದಾನ ಮಾತ್ರ ಬಹಳ ಕಡಿಮೆ. ಬಿಜೆಪಿ ಸಂಸದರು, ಮುಖಂಡರು ಎಲ್ಲಾ ನಾವೇ ಮಾಡಿದ್ದೇವೆ ಎನ್ನುತ್ತಾರೆ. ಅವರದ್ದು ಏನೇನೂ ಸಾಧನೆಯಿಲ್ಲ. ಯಾವೊಬ್ಬ ಸಂಸದನೂ ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಹತ್ತು ರುಪಾಯಿ ಸಹಾಯ ತಂದಿಲ್ಲ. ಯಾವ ರೀತಿಯ ಸಹಕಾರವನ್ನೂ ಕೊಟ್ಟಿಲ್ಲ. ರಾಜ್ಯದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು ಎಂದರು.