ಸಾರಾಂಶ
‘2002ರಲ್ಲಿ ಗೋಧ್ರಾ ಹತ್ಯಾಕಾಂಡ ಸಂದರ್ಭದಲ್ಲಿ ರೈಲಿಗೆ ಬೆಂಕಿ ಹಚ್ಚಿ, 60 ಮಂದಿ ಕರಸೇವಕರ ಹತ್ಯೆಗೆ ಕಾರಣ ಆದವರನ್ನು ಲಾಲು ಪ್ರಸಾದ್ ಯಾದವ್ ಅವರು ಸೋನಿಯಾ ಮೇಡಂ (ಸೋನಿಯಾ ಗಾಂಧಿ) ಅವರ ಸೂಚನೆಯಂತೆ ರಕ್ಷಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ದರ್ಭಾಂಗ (ಬಿಹಾರ):‘2002ರಲ್ಲಿ ಗೋಧ್ರಾ ಹತ್ಯಾಕಾಂಡ ಸಂದರ್ಭದಲ್ಲಿ ರೈಲಿಗೆ ಬೆಂಕಿ ಹಚ್ಚಿ, 60 ಮಂದಿ ಕರಸೇವಕರ ಹತ್ಯೆಗೆ ಕಾರಣ ಆದವರನ್ನು ಯುಪಿಎ ಅವಧಿಯಲ್ಲಿ ರೈಲ್ವೆ ಮಂತ್ರಿ ಆಗಿದ್ದ ಲಾಲು ಪ್ರಸಾದ್ ಯಾದವ್ ಅವರು ಸೋನಿಯಾ ಮೇಡಂ (ಸೋನಿಯಾ ಗಾಂಧಿ) ಅವರ ಸೂಚನೆಯಂತೆ ರಕ್ಷಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ರ್‍ಯಾಲಿ ವೇಳೆ ಶನಿವಾರ ಮಾತನಾಡಿದ ಮೋದಿ ತಾವು ಗುಜರಾತ್ ಸಿಎಂ ಆಗಿದ್ದ ಅವಧಿಯಲ್ಲಿ ನಡೆದ ಗೋಧ್ರಾ ದುರಂತ ನೆನಪಿಸಿ ಇಂಡಿಯಾ ಕೂಟವನ್ನು ತರಾಟೆಗೆ ತೆಗೆದುಕೊಂಡರು.
‘ಸೋನಿಯಾ ಮೇಡಂ ಆಳ್ವಿಕೆಯಲ್ಲಿ (ಯುಪಿಎ ಅಧ್ಯಕ್ಷರಾಗಿದ್ದ ಅವಧಿ) 60 ಕರಸೇವಕರ ಹತ್ಯೆ ನಡೆಯಿತು. ಬಿಹಾರದ ಶೆಹಜಾದ್ (ತೇಜಸ್ವಿ ಯಾದವ್) ಅವರ ತಂದೆ (ಲಾಲು) ರೈಲು ದಹನಕ್ಕೆ ಕಾರಣ ಆದವರನ್ನು ರಕ್ಷಿಸಲು ಪ್ರಯತ್ನಿಸಿದರು. ಇದು ಸೋನಿಯಾ ಮೇಡಂ ಅವರ ಸೂಚನೆಯಂತೆ ನಡೆದಿತ್ತು ವಿಪಕ್ಷಗಳು ಯಾವಾಗಲೂ ತುಷ್ಟೀಕರಣ ರಾಜಕಾರಣವನ್ನು ಮಾಡುತ್ತಲೇ ಬಂದಿವೆ’ ಎಂದರು.
‘ಮೇವು ಹಗರಣದಲ್ಲಿ ಆರೋಪಿಯಾಗಿರುವ, ಅಂದು ರೈಲ್ವೆ ಮಂತ್ರಿಯಾಗಿದ್ದವರು. ಗೋಧ್ರಾ ದುರಂತ ಬಳಿಕ ತನಿಖೆಗೆ ತಂಡ ರಚಿಸಿದ್ದರು. ಭಯಾನಕ ದುರಂತ ನಡೆಸಿದವರನ್ನು ದೋಷಮುಕ್ತರೆಂದು ವರದಿಯಲ್ಲಿ ಹೇಳಲಾಗಿತ್ತು. ಆದರೆ ನ್ಯಾಯಾಲಯ ಅದನ್ನು ತಿರಸ್ಕಾರ ಮಾಡಿತ್ತು’ ಎಂದರು.
ಇದೇ ಸಂದರ್ಭದಲ್ಲಿ ಅಗ್ನಿಪಥ್ ಯೋಜನೆಗೆ ಚುನಾವಣಾ ಪ್ರಚಾರದ ವೇಳೆ ಹಿಂದೂ-ಮುಸ್ಲಿಂ ಅರ್ಥ ಕಟ್ಟಿದ ತೇಜಸ್ವಿ ಯಾದವ್ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದರು.‘ನಾವು ಹುತಾತ್ಮ ಕ್ಯಾಪ್ಟನ್ ಹಮೀದ್ ಬಗ್ಗೆ ಮಾತನಾಡುವಾಗ ಆತನನ್ನು ಮುಸ್ಲಿಂ ಎಂದು ಭಾವಿಸುತ್ತೆವೆಯೇ..? ದೆಹಲಿ ಮತ್ತು ಪಟನಾದಲ್ಲಿ ಇರುವ ಶೆಹಜಾದ್ (ರಾಹುಲ್ ಗಾಂಧಿ, ತೇಜಸ್ಬಿ ಯಾದವ್) ಇಬ್ಬರೂ ದೇಶವನ್ನು ತಮ್ಮ ದಡ್ಡತನದಲ್ಲಿ ಯೋಚಿಸುತ್ತಾರೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಸೇನೆ ಬಗ್ಗೆ ಹೇಳುವ ಕೀಳು ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು,‘ಇಂಡಿಯಾ ಕೂಟದವರು ಭ್ರಮನಿರಸನ ಗೊಂಡಿದ್ದಾರೆ. ಹೀಗಾಗಿ ಎಸ್‌ಸಿ, ಎಸ್‌ಟಿ ಹಾಗೂ ಬುಡಕಟ್ಟು ಸಮುದಾಯಗಳ ಮೀಸಲಾತಿ ದೋಚಲು ಪ್ರಯತ್ನಿಸುತ್ತಿವೆ. ಅದನ್ನು ಮುಸ್ಲಿಂ ಸಮುದಾಯಗಳಿಗೆ ತಿರುಗಿಸಲು ಪ್ರಯತ್ನಿಸುತ್ತಿವೆ. ನೆಹರೂ , ಅಂಬೇಡ್ಕರ್ ನಿಲುವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ವಿಪಕ್ಷಗಳ ವಿರುದ್ಧ ಮೋದಿ ಆರೋಪಿಸಿದರು.