ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಮತ್ತು ಕಾರ್ಯದರ್ಶಿಯಾಗಿ ಪಿ. ರಾಜೇಂದ್ರ ಚೋಳನ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ತುಷಾರ್ ಗಿರಿನಾಥ್ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಜತೆಗೆ ತುಷಾರ್ ಗಿರಿನಾಥ್ ಅವರಿಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪಿ. ರಾಜೇಂದ್ರ ಚೋಳನ್ ಅವರಿಗೆ ಕೆಪಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಸಲಹೆಗಾರರನ್ನಾಗಿ ಮುಂದುವರಿಸಿ ಆದೇಶಿಸಲಾಗಿದೆ. ಅದರೊಂದಿಗೆ ಎಲ್.ಕೆ. ಅತೀಕ್ ಅವರನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ನ ಅಧ್ಯಕ್ಷ ಸ್ಥಾನದಲ್ಲೂ ಮುಂದುವರಿಸಲಾಗಿದೆ.
ಸಿಎಂ ಕಚೇರಿ ಸಿಬ್ಬಂದಿ ಕಾರ್ಯಮುಕ್ತ:
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಸಚಿವಾಲಯದಲ್ಲಿ ನೇಮಕವಾಗಿದ್ದ ಸಿಬ್ಬಂದಿಯನ್ನು ಕಾರ್ಯಮುಕ್ತಗೊಳಿಸಿ ಸರ್ಕಾರ ಆದೇಶಿಸಿದೆ. ಸಚಿವಾಲಯ, ಸಲಹೆಗಾರರು, ನವದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿಗಳ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಯನ್ನೂ ಕಾರ್ಯಮುಕ್ತಗೊಳಿಸಿ ಆದೇಶಿಸಲಾಗಿದೆ.
