ನ್ಯಾಯಾಂಗ  ಕ್ಷೇತ್ರದ ಸುಧಾರಣೆಯ ದೃಷ್ಟಿಯಿಂದ ಕಾನೂನು ಪದವೀಧರರ ವಕೀಲಿಕೆ ನೋಂದಣಿ, ವಕೀಲರ ವಿರುದ್ಧ ಬರುವ ದೂರುಗಳ ವಿಚಾರಣೆ, ವಕೀಲರ ಕಲ್ಯಾಣ ಸೇರಿ ವಿವಿಧ ವಿಚಾರಗಳ ಕುರಿತು ಕರ್ನಾಟಕ ವಕೀಲರ ಪರಿಷತ್‌ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ವಿವಿಧ ಉಪಕ್ರಮಗಳು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

 ಎಸ್‌.ಎಸ್‌.ಮಿಟ್ಟಲಕೋಡ, ಕರ್ನಾಟಕ ವಕೀಲರ ಪರಿಷತ್‌ ಅಧ್ಯಕ್ಷ

 ಸಂದರ್ಶನ: ವೆಂಕಟೇಶ್ ಕಲಿಪಿ

ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಲ್ಲಿ ನ್ಯಾಯಾಂಗ ಕೂಡಾ ಒಂದು. ಇಂಥ ಕ್ಷೇತ್ರದ ಸುಧಾರಣೆಯ ದೃಷ್ಟಿಯಿಂದ ಕಾನೂನು ಪದವೀಧರರ ವಕೀಲಿಕೆ ನೋಂದಣಿ, ವಕೀಲರ ವಿರುದ್ಧ ಬರುವ ದೂರುಗಳ ವಿಚಾರಣೆ, ವಕೀಲರ ಕಲ್ಯಾಣ ಸೇರಿ ವಿವಿಧ ವಿಚಾರಗಳ ಕುರಿತು ಕರ್ನಾಟಕ ವಕೀಲರ ಪರಿಷತ್‌ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ವಿವಿಧ ಉಪಕ್ರಮಗಳು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಸನ್ನದು ಪಡೆದರೂ ವಕೀಲಿಕೆ ಮಾಡದೆ ಅನ್ಯ ಉದ್ಯೋಗ, ವ್ಯವಹಾರ ಮಾಡುವವರ ಸನ್ನದು ರದ್ದುಗೊಳಿಸಲು ಮುಂದಾಗಿರುವುದು, ನಕಲಿ ಶೈಕ್ಷಣಿಕ ದಾಖಲೆ ಸಲ್ಲಿಸಿ ವಕೀಲಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಿರುವ ಕುರಿತ ಪರ-ವಿರೋಧ ಚರ್ಚೆ, ಪರಿಷತ್‌ ಚುನಾವಣೆ, ವಕೀಲರ ಹೆಸರು ದುರುಪಯೋಗ, ವಕೀಲರ ಕಲ್ಯಾಣ ಮತ್ತು ಪ್ರೋತ್ಸಾಹ ನಿಧಿ ಬಿಡುಗಡೆಯಾಗದಿರುವುದು, ಕನ್ನಡದ ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವುದರಿಂದ ಆಗುವ ತೊಂದರೆಗಳ ಕುರಿತು ಕರ್ನಾಟಕ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲಕೋಡ ಅವರು ಕನ್ನಡಪ್ರಭಕ್ಕೆ ಮುಖಾಮುಖಿಯಾಗಿ ಮಾತನಾಡಿದ್ದಾರೆ.

ಇದೇನಿದು ನಕಲಿ ಅಂಕ ಪಟ್ಟಿ ಅವಾಂತರ? 

ನಾನು ಅಧ್ಯಕ್ಷನಾದ ನಂತರ ಸನ್ನದು ಕೋರಿದವರ ಪೈಕಿ ಹೊರ ರಾಜ್ಯದ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದೇವೆಂದು ಹೇಳಿಕೊಂಡು ಅಂದಾಜು 400 ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಗೊತ್ತಾಗಿದೆ. ಐವರ ಅಂಕಪಟ್ಟಿಗಳನ್ನು ಅವರು ಓದಿರುವ ಕಾನೂನು ವಿಶ್ವವಿದ್ಯಾಲಯಗಳ ಪರಿಶೀಲನೆಗೆ ಕಳುಹಿಸಿಕೊಡಲಾಗಿತ್ತು. ಈಗಾಗಲೇ ಮೂವರದು ನಕಲಿ ಎಂದು ವಿವಿಗಳು ದೃಢಪಡಿಸಿವೆ. ಇದರಿಂದ ಅಂಕಪಟ್ಟಿ ಪರಿಶೀಲಿಸಿದ ನಂತರವೇ ಸನ್ನದು ನೋಂದಣಿ ಮಾಡಲು ಪರಿಷತ್‌ನ ಸನ್ನದು ನೋಂದಣಿ ಸಮಿತಿ ತೀರ್ಮಾನಿಸಿದೆ.

ಕರ್ನಾಟಕ ವಕೀಲರ ಪರಿಷತ್ ಪ್ರಾಥಮಿಕ ಜವಾಬ್ದಾರಿಗಳೇನು?

 ಕಾನೂನು ಪದವಿ ಪಡೆದವರಿಗೆ ವಕೀಲಿಕೆಗೆ ಸನ್ನದು ನೋಂದಣಿ ಪ್ರಮಾಣ ಪತ್ರ ನೀಡುವುದು, ವಕೀಲರ ವಿರುದ್ಧ ದಾಖಲಾದ ದೂರುಗಳ ವಿಚಾರಣೆ ನಡೆಸಿ, ಆರೋಪ ದೃಢಪಟ್ಟರೆ ಸನ್ನದು ರದ್ದುಪಡಿಸುವ ಮೂಲಕ ಶಿಸ್ತುಕ್ರಮ ಜರುಗಿಸುವ ಕೆಲಸವನ್ನು ಪರಿಷತ್‌ ಮಾಡುತ್ತದೆ. ಜೊತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾನೂನಿಗೆ ತರುವ ತಿದ್ದುಪಡಿಗಳ ಮಾಹಿತಿಯನ್ನು ಕರ್ನಾಟಕ ಕಾನೂನು ಅಕಾಡೆಮಿ ಮೂಲಕ ನ್ಯಾಯಾಧೀಶರು, ವಕೀಲರು ಮತ್ತು ಸಾರ್ವಜನಿಕರಿಗೆ ತಿಳಿಸಿಕೊಡುತ್ತದೆ.

ಅಂಕಪಟ್ಟಿಯ ಅಸಲಿತನ ಪರಿಶೀಲಿಸುವ ಅಧಿಕಾರ ಪರಿಷತ್‌ಗೆ ಇದೆಯೇ?

ಪರಿಷತ್‌ನ ಮುಖ್ಯ ಕೆಲಸವೇ ಸನ್ನದು ನೋಂದಣಿ. ಕರ್ನಾಟಕ ವಕೀಲರ ಕಾಯ್ದೆಯಡಿ ಅಂಕಪಟ್ಟಿ/ಕಾನೂನು ಪದವಿ ಪ್ರಮಾಣ ಪತ್ರದ ಅಸಲಿತನ ಪರಿಶೀಲಿಸುವ ಅಧಿಕಾರ ಪರಿಷತ್‌ಗೆ ಇದೆ. ಅದಕ್ಕಾಗಿ ಪ್ರತ್ಯೇಕ ಸಮಿತಿ ಸಹ ರಚಿಸಲಾಗಿದೆ. 2015ರಲ್ಲಿ ಭಾರತೀಯ ವಕೀಲರ ಪರಿಷತ್‌ ಸಿಒಪಿ (ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌) ಮಾರ್ಗಸೂಚಿ ಜಾರಿಗೆ ತಂದಿದೆ. ಅದರ ಪ್ರಕಾರ ವಕೀಲರಾದವರು ವರ್ಷಕ್ಕೊಂದು ಪ್ರಕರಣವನ್ನಾದರೂ ನ್ಯಾಯಾಲಯದಲ್ಲಿ ನಿರ್ವಹಿಸಿರಬೇಕು. ಇನ್ನು ನಕಲಿ ಕಾನೂನು ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳ ಪಡೆದಿರುವವರ ಬಗ್ಗೆ ಪರಿಶೀಲನೆ ನಡೆಸುವಂತೆ ಪರಿಷತ್‌ಗೆ ಸಿಒಪಿ ಮಾರ್ಗಸೂಚಿಯೇ ಹೇಳುತ್ತದೆ.

ಸನ್ನದು ವಿತರಣೆಯಲ್ಲಿ ಅಂಕಪಟ್ಟಿ ಪರಿಶೀಲನೆ ಮಾಡುವ ಅವಶ್ಯಕತೆ ಯಾಕೆ ಬಂತು? 

ಕಾಲೇಜಿಗೆ ಹೋಗದೆ, ಕಾನೂನು ಪದವಿ ಅಧ್ಯಯನ ಮಾಡದೆ ಹಣ ನೀಡಿ ಹೊರ ರಾಜ್ಯಗಳ ವಿವಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮುದ್ರಿಸಿಕೊಂಡು ಬಂದು ಕರ್ನಾಟಕದಲ್ಲಿ ವಕೀಲಿಕೆಯಲ್ಲಿ ತೊಡಗುವುದನ್ನು ತಡೆಯುವುದು ಪರಿಷತ್‌ನ ಉದ್ದೇಶ. ಅದಕ್ಕಾಗಿ ಸನ್ನದು ವಿತರಿಸುವ ಮುನ್ನ ಕಾನೂನು ಪದವೀಧರರ ಅಂಕಪಟ್ಟಿ ಅಸಲಿಯೋ ಅಥವಾ ನಕಲಿಯೋ ಎಂದು ಪರೀಶೀಲಿಸುತ್ತಿದ್ದೇವೆ. ಕಾನೂನು ಪದವಿಯ ಅಂಕಪಟ್ಟಿ ಸಲ್ಲಿಸಿದ ಕೂಡಲೇ ಸನ್ನದು ವಿತರಣೆ ಕಡ್ಡಾಯವಲ್ಲ. ಸನ್ನದಿಗೆ ಅರ್ಜಿ ಸಲ್ಲಿಸಿದರೆ ಅಭ್ಯರ್ಥಿ ಸಂದರ್ಶನ ಮಾಡಿ, ಆತನ ಕಾನೂನು ಜ್ಞಾನ ಪರೀಕ್ಷಿಸುತ್ತೇವೆ. ನಕಲಿ ಅಂಕಪಟ್ಟಿ ತಂದವರಿಗಷ್ಟೇ ಸನ್ನದು ನಿರಾಕರಿಸುತ್ತಿದ್ದೇವೆಯೇ ಹೊರತು ಅಸಲಿ ಪದವೀಧರರಿಗೆ ಸನ್ನದು ನಿರಾಕರಿಸಿದ ಒಂದೇ ಒಂದು ಉದಾಹರಣೆ ಇಲ್ಲ.

ಕರ್ನಾಟಕದಲ್ಲಿ ಎಷ್ಟು ವಕೀಲರು ನಿಜಕ್ಕೂ ವಕೀಲಿಕೆಯಲ್ಲಿ ತೊಡಗಿದ್ದಾರೆ? 

ರಾಜ್ಯದಲ್ಲಿ 1.29 ಲಕ್ಷ ವಕೀಲರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 69 ಸಾವಿರ ವಕೀಲರು ವೃತ್ತಿಯಲ್ಲಿರುವುದನ್ನು ದೃಢಪಡಿಸಿ ಸಿಒಪಿ ಸಲ್ಲಿಸಿದ್ದಾರೆ. ಇನ್ನೂ 20 ಸಾವಿರ ವಕೀಲರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಉಳಿದವರು ಇನ್ನೂ ಸಿಒಪಿ ಸಲ್ಲಿಸಿಲ್ಲ. ಸನ್ನದು ಪಡೆದು ಬೇರೆ ಉದ್ಯೋಗದಲ್ಲಿ ತೊಡಗಿದವರ ನಾಲ್ಕೈದು ವಕೀಲರ ಸನ್ನದನ್ನು ಈಗಾಗಲೇ ರದ್ದುಪಡಿಸಲಾಗಿದೆ. 2015-16ರಲ್ಲಿ 24 ವಕೀಲರ ಸನ್ನದು ರದ್ದುಪಡಿಸಲಾಗಿತ್ತು.

ನಕಲಿ ಅಂಕಪಟ್ಟಿ ನೀಡಿದವರ ಸನ್ನದು ನಿರಾಕರಿಸಿದರಷ್ಟೇ ಸಾಕೇ?

ಅವರ ವಿರುದ್ಧ ಕ್ರಮವೇನು? ಖಂಡಿತಾ ಸಾಲದು. ನಕಲಿ ಅಂಕಪಟ್ಟಿ ಮುದ್ರಿಸುವ ವ್ಯವಸ್ಥಿತ ಜಾಲವಿದೆ. ಅದನ್ನು ಭೇದಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಈಗಾಗಲೇ ಸನ್ನದು ಪಡೆದವರ ಪತ್ತೆಗೂ ಪರಿಷತ್‌ ಮುಂದಾಗಿದೆ. ಸನ್ನದು ಪಡೆಯದೆ ವಕೀಲರು ಎಂದು ಹೇಳಿಕೊಂಡು ನ್ಯಾಯಾಲಯದಲ್ಲಿ ವಕಾಲತ್ತು ವಹಿಸುವ ಮೂಲಕ ಕಕ್ಷಿದಾರರಿಗೆ ವಂಚನೆ ಮಾಡುವವರೂ ಇದ್ದಾರೆ. ಅವರ ವಿರುದ್ಧವೂ ದೂರು ದಾಖಲಿಸಲಾಗುತ್ತಿದೆ. ಈಗಾಗಲೇ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ನಕಲಿ ವಕೀಲರ ಬಗ್ಗೆ ಮಾಹಿತಿ ಇದ್ದರೆ ಯಾರು ಬೇಕಾದರೂ ದೂರು ಸಲ್ಲಿಸಬಹುದು. ಆ ಬಗ್ಗೆ ಪರಿಷತ್‌ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಿದೆ.

ನಕಲಿ ಅಂಕಪಟ್ಟಿ ಸಲ್ಲಿಸಿ ಸನ್ನದು ಪಡೆಯುವ ಅವಕಾಶ ಸಿಕ್ಕಿದ್ದಾದರೂ ಏಕೆ? 

ಹಿಂದೆ ಕಾನೂನು ಪದವೀಧರರ ಪ್ರಮಾಣ ಪತ್ರ/ಅಂಕಪಟ್ಟಿ ಪರಿಶೀಲಿಸದೆಯೇ ಸನ್ನದು ನೋಂದಣಿ ಮಾಡುತ್ತಿದ್ದರಿಂದಲೇ ನಕಲಿ ವಕೀಲರ ಸಂಖ್ಯೆ ಹೆಚ್ಚಳವಾಗಿದೆ. ಈಗ ಪರಿಷತ್‌ ಎಚ್ಚೆತ್ತುಕೊಂಡಿದೆ. ಸನ್ನದು ನೋಂದಣಿ ಅಧಿಕಾರದ ಜತೆಗೆ ನಕಲಿ ವಕೀಲರು ಕಂಡುಬಂದಲ್ಲಿ, ಸುಳ್ಳು ದಾಖಲೆ ನೀಡಿ ಸನ್ನದು ಪಡೆದಿದ್ದಲ್ಲಿ, ವಕೀಲರು ವೃತ್ತಿಯಲ್ಲಿ ದುರ್ನತಡೆ ತೋರಿದಲ್ಲಿ ಸನ್ನದು ರದ್ದುಪಡಿಸುವ ಅಧಿಕಾರವೂ ಪರಿಷತ್‌ಗೆ ಇದೆ. ಆ ಕೆಲಸವನ್ನೂ ಪರಿಷತ್‌ ಮಾಡಲಿದೆ.

ಬೇರೆ ಉದ್ಯೋಗದಲ್ಲಿರುವ ವಕೀಲರ ಸನ್ನದು ಅಮಾನತು ಪ್ರಕ್ರಿಯೆ ಎಲ್ಲಿಗೆ ಬಂತು?

ವಕೀಲಿಕೆ ಸನ್ನದು ನೊಂದಣಿ ಮಾಡಿ, ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿರುವವರ ಸಂಖ್ಯೆ ಮೂರು ಸಾವಿರಕ್ಕೂ ಅಧಿಕವಿತ್ತು. ಕೆಲವರು ಬಾರ್‌/ರೆಸ್ಟೋರೆಂಟ್‌, ಗ್ಯಾಸ್‌ ಏಜೆನ್ಸಿ, ಪೆಟ್ರೋಲ್‌ ಬಂಕ್‌, ಸಾಫ್ಟ್‌ವೇರ್‌ ಕಂಪನಿ ನಡೆಸುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ಸನ್ನದು ಅಮಾನತು ಮಾಡಿಕೊಳ್ಳಲು ಅವರಿಗೆ ಪರಿಷತ್‌ ತಾಕೀತು ಮಾಡಿತ್ತು. ಅದರಂತೆ ಶೇ.70ರಷ್ಟು ಜನ ಸನ್ನದು ಅಮಾನತು ಮಾಡಿಕೊಂಡಿದ್ದಾರೆ. ಉಳಿದವರಿಗೆ ಸನ್ನದು ಅಮಾನತು ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಬೇಕಾಗುತ್ತದೆ.

ವಕೀಲರಲ್ಲದವರೂ ತಮ್ಮ ವಾಹನಗಳಿಗೆ ವಕೀಲರ ಸ್ಟಿಕ್ಕರ್‌ ಬಳಸುತ್ತಿರುವುದರ ತಡೆಗೆ ಕ್ರಮ ಏನು? 

ಈಗಾಗಲೇ ಅಂಥ ವಾಹನಗಳನ್ನು ಪತ್ತೆ ಹಚ್ಚಿ ಸ್ಟಿಕ್ಕರ್‌ ತೆರವುಗೊಳಿಸಲು ಪೊಲೀಸರಿಗೆ ಮತ್ತು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಲು ರಾಜ್ಯ ಸಾರಿಗೆ ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಪೊಲೀಸರು ಸಹ ವಕೀಲರ ವಾಹನದ ಮೇಲೆ ಸ್ಟಿಕ್ಕರ್‌ ಕಂಡುಬಂದರೆ, ಪರಿಶೀಲಿಸಿ ವಕೀಲರೇತರರ ಸ್ಟಿಕ್ಕರ್‌ ತೆಗೆಸುತ್ತಿದ್ದಾರೆ. ಹಾಗೆಯೇ, ಪರಿಷತ್‌ ವತಿಯಿಂದಲೇ ವಕೀಲರಿಗೆ ಸ್ಟಿಕ್ಕರ್‌ ವಿತರಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು.

ಪರಿಷತ್‌ ಪದಾಧಿಕಾರಿಗಳ ಚುನಾವಣೆ ಸದ್ಯ ಕೋರ್ಟ್‌ ಮೆಟ್ಟಿಲೇರಿದೆ. ಚುನಾವಣೆ ನಡೆಸದೆ ನೀವು ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದೀರಿ ಎಂಬ ಆಕ್ಷೇಪವಿದೆಯಲ್ವಾ? 

ಚುನಾವಣೆ ನಡೆಸಲು ಪರಷತ್‌ನ ಎಲ್ಲಾ ಸದಸ್ಯರು/ಪದಾಧಿಕಾರಿಗಳು ಸಿದ್ಧರಾಗಿದ್ದಾರೆ. ಬಿಸಿಐ ಉನ್ನತ ಮಟ್ಟದ ಸಮಿತಿ ಮತ್ತು ಸುಪ್ರಿಂ ಕೋರ್ಟ್‌ ನಿರ್ದೇಶಿಸದ ಹೊರತು ಪರಿಷತ್‌ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಗದು. ಚುನಾವಣೆ ನಡೆಸದೇ ಇರುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಇಲ್ಲ.

ಅಂದರೆ ದುರುದ್ದೇಶದಿಂದ ಚುನಾವಣೆ ನಡೆಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆಯೇ?

 ಖಂಡಿತ. ನಾನು ಅಧ್ಯಕ್ಷರಾಗಿರುವುದನ್ನು ಸಹಿಸದವರು, ಕಾಣದ ಕೈಗಳು ದ್ವೇಷದಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಾನು ಅಧ್ಯಕ್ಷರಾಗುವ ಎರಡು ದಿನಗಳ ಹಿಂದೆ ಪ್ರಚಾರ ಗಿಟ್ಟಿಸಲು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ನಕಲಿ ವಕೀಲರ ಪತ್ತೆ, ಸಿಓಪಿ ಅಮಾನತು ವಿಚಾರವನ್ನು ಚುನಾವಣೆಯ ಸರಕಾಗಿ ಬಳಸುತ್ತಿದ್ದೀರಿ ಎಂಬ ಮಾತಿದೆಯಲ್ವಾ?

ಚುನಾವಣೆಯೇ ಬೇರೆ, ನಕಲಿ ವಕೀಲರ ಪತ್ತೆ ವಿಚಾರವೇ ಬೇರೆ. ಎರಡಕ್ಕೂ ಸಂಬಂಧ ಕಲ್ಪಿಸುವುದು ಮೂರ್ಖತನದ ಪರಮಾವಧಿಯಷ್ಟೆ. ನಾನು ಏನೂ ಹೊಸ ಕ್ರಮಗಳನ್ನು ಕೈಗೊಂಡಿಲ್ಲ. ಕಾನೂನಿನಡಿ ಜರುಗಿಸಬೇಕಾದ ಕ್ರಮಗಳನ್ನು ನೆನಪಿಸುತ್ತಿದ್ದೇನೆ ಅಷ್ಟೆ. ಇದರಲ್ಲಿ ಚುನಾವಣೆ ಗಿಮಿಕ್‌ ಏನೂ ಇಲ್ಲ.

ವಕೀಲರ ಕಲ್ಯಾಣ ಮತ್ತು ಪ್ರೋತ್ಸಾಹ ನಿಧಿ ಬಿಡುಗಡೆಯನ್ನು ಸರ್ಕಾರ ಸ್ಥಗಿತಗೊಳಿಸಿದೆಯಲ್ಲವೇ?

 ವಕೀಲರ ಕಲ್ಯಾಣ ಮತ್ತು ಪ್ರೋತ್ಸಾಹ ನಿಧಿ ಬಿಡುಗಡೆ ಮಾಡುವುದಲ್ಲದೆ, ಅದರ ಪ್ರಮಾಣ ಹೆಚ್ಚಿಸಬೇಕು ಎಂಬುದು ವಕೀಲರು ಕೂಗು. ಸದ್ಯ ವಕೀಲಿಕೆ ಆರಂಭಿಸಿದ 15 ವರ್ಷದ ಒಳಗೆ ಮೃತಪಟ್ಟ ವಕೀಲರಿಗೆ 4 ಲಕ್ಷ, 15ರಿಂದ 35 ವರ್ಷದೊಳಗೆ ಸಾವಿಗೀಡಾದ ವಕೀಲರಿಗೆ 6 ಲಕ್ಷ ರು. ಮತ್ತು 35 ವರ್ಷದ ಮೇಲ್ಪಟ್ಟ ಸೇವಾನುಭವ ಹೊಂದಿದ ವಕೀಲರು ಮೃತರಾದರೆ 8 ಲಕ್ಷ ರು. ಅನ್ನು ಕಲ್ಯಾಣ ನಿಧಿಯಿಂದ ನೀಡಲಾಗುತ್ತಿದೆ. ಈ ಮೊತ್ತ ಹೆಚ್ಚಿಸಬೇಕು. ಸರ್ಕಾರವು ತನ್ನ ಪ್ರತಿ ಬಜೆಟ್‌ನಲ್ಲಿ ವಕೀಲರ ಕ್ಷೇಮಾಭಿವೃದ್ಧಿ ಹಣ ನಿಗದಿಪಡಿಸಿ ಮಜೂರು ಮಾಡಬೇಕು ಎಂಬುದು ರಾಜ್ಯದ 1.29 ಲಕ್ಷ ವಕೀಲರ ಅಭಿಮತ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಪರಿಷತ್‌ ಮಾತನಾಡಿದೆ. ಕೋವಿಡ್‌ ನಂತರ ಸ್ಥತಗೊಳಿಸಿರುವ ಯುವ ವಕೀಲರ ಪ್ರೋತ್ಸಾಹ ಧನ ಬಿಡುಗಡೆಗೂ ಕೋರಲಾಗಿದೆ. ಚೆಕ್‌, ಆರ್‌ಟಿಜಿಎಸ್‌ ಅಲ್ಲದೆ ಡಿಬಿಟಿ ವಿಧಾನದ ಮೂಲಕ ಆಗಸ್ಟ್‌ನಿಂದ ವಕೀಲರ ಕಲ್ಯಾಣ ನಿಧಿ ಬಿಡುಗಡೆಗೆ ಸರ್ಕಾರ ಒಪ್ಪಿದೆ.

ಪರಿಷತ್‌ನ ಕಾಮನ್‌ ಬೈಲಾ ಅಳವಡಿಕೆ ವಿಚಾರದಲ್ಲಿ ವಕೀಲರ ಸಂಘ ಮತ್ತು ಪರಿಷತ್‌ ನಡುವೆ ಗುದ್ದಾಟವೇಕೆ? 

ರಾಜ್ಯದ 196 ವಕೀಲರ ಸಂಘಗಳು ಒಂದೇ ನೀತಿ-ನಿಯಮಗಳ ಅಡಿ ಕಾರ್ಯ ನಿರ್ವಹಿಸಬೇಕು ಎಂಬುದೇ ಕಾಮನ್‌ ಬೈಲಾ ಜಾರಿಯ ಉದ್ದೇಶ. ಅದನ್ನು 2008ರಲ್ಲಿ ಜಾರಿಗೆ ತರಲಾಗಿದೆ. ರಾಜ್ಯದಲ್ಲಿರುವ 170 ವಕೀಲರ ಸಂಘಗಳಷ್ಟೇ ಕಾಮನ್‌ ಬೈಲಾ ಅಳವಡಿಕೊಂಡಿವೆ. ಬೆಂಗಳೂರು ವಕೀಲರ ಸಂಘ ಸೇರಿ ಉಳಿದ 25-26 ಸಂಘಗಳು ಅಳವಡಿಸಿಕೊಂಡಿಲ್ಲ. ಆ ಬಗ್ಗೆ ವಿವರಣೆ ಕೋರಿ 2008 ರಿಂದ 22 ನೋಟಿಸ್‌ ನೀಡಲಾಗಿದೆ. 15 ಸಂಘಗಳು ಸಮಯಾವಕಾಶ ಕೋರಿದ್ದರೆ, ಇನ್ನುಳಿದ 10 ಸಂಘಗಳು ಸ್ಪಂದಿಸುತ್ತಿಲ್ಲ. ಅವುಗಳಿಗೆ 1 ತಿಂಗಳ ಅವಕಾಶ ನೀಡಲಾಗುವುದು. ನಂತರವೂ ಕಾಮನ್‌ ಬೈಲಾ ಅಳವಡಿಸಿಕೊಳ್ಳತ್ತಿದ್ದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಕರ್ನಾಟಕ ವಕೀಲರ ಕಾಯ್ದೆ, ವಕೀಲರ ಕಲ್ಯಾಣ ಕಾಯ್ದೆಯಡಿ ನೀಡುತ್ತಿರುವ ಸೌಲಭ್ಯ ಸ್ಥಗಿತಗೊಳಿಸಲಾಗುವುದು.

ವಕೀಲರ ಪರಿಷತ್‌ಗೆ ಸ್ವಂತ ಕಟ್ಟಡವಿಲ್ಲವೇಕೆ? ಪರಿಷತ್‌ ಕಚೇರಿಗೆ ಸ್ವಂತ ಕಟ್ಟಡ ಮತ್ತು ಕಾನೂನು ಅಕಾಡೆಮಿ ಕಟ್ಟಡಕ್ಕಾಗಿ ಎರಡು ಎಕರೆ ಮಂಜೂರು ಮಾಡಲು ಎಚ್‌.ಡಿ.ದೇವೇಗೌಡ ಮುಖ್ಯಮಂತ್ರಿಗಳಾದ ದಿನದಿಂದಲೂ ಪರಿಷತ್‌ ಕೋರುತ್ತಿದೆ. ಹಿಂದಿನ ಮುಖ್ಯಮಂತ್ರಿಗಳು ಬೆಂಗಳೂರು ನಗರದ ಹೊರಭಾಗದಲ್ಲಿ ಸ್ಥಳ ನೀಡುವುದಾಗಿ ಹೇಳಿದ್ದರು. ಅದಕ್ಕೆ ಪರಿಷತ್‌ ಒಪ್ಪಲಿಲ್ಲ. ಸದ್ಯ 17 ಜಾಗಗಳನ್ನು ಗುರುತಿಸಿ ಮಂಜೂರಾತಿಗೆ ಕೋರಲಾಗಿದೆ. ಪರಿಷತ್‌ ಶಿಸ್ತು ಸಮಿತಿ ಮತ್ತು ಸನ್ನದು ನೋಂದಣಿ ಸಮಿತಿಗೆ ವಿಧಾನಸೌಧ ಮತ್ತು ಹೈಕೋರ್ಟ್‌ ಸಮೀಪವೇ ಜಾಗ ಹಾಗೂ ಕಾನೂನು ಅಕಾಡೆಮಿಗಾಗಿ ಕಲಬುರಗಿಯಲ್ಲಿ ಜಾಗ ಒದಗಿಸಲು ಕೋರಲಾಗಿದೆ.

ವಕೀಲರ ವಿರುದ್ಧದ ದೂರುಗಳ ನಿರ್ವಹಣೆಗೆ ಇರುವ ವ್ಯವಸ್ಥೆ ಏನು? 

ಪ್ರತಿವರ್ಷ ವಕೀಲರ ವಿರುದ್ಧ ಕಕ್ಷಿದಾರರಿಂದ 300ರಿಂದ 400 ದೂರುಗಳು ಬರುತ್ತವೆ. ಶುಲ್ಕ ಪಡೆದರೂ ವಾದ ಮಂಡಿಸುತ್ತಿಲ್ಲ. ಕೋರ್ಟ್‌ಗೆ ಹಾಜರಾಗಿಲ್ಲ. ನಿರಾಕ್ಷೇಪಣಾ ಪತ್ರ ನೀಡುತ್ತಿಲ್ಲ ಎಂಬ ವಿಚಾರಕ್ಕೆ ಬಹುತೇಕ ದೂರುಗಳು ಸಂಬಂಧಿಸಿರುತ್ತವೆ. ಯಾವುದೇ ದೂರು ಬಂದರೂ ಪರಿಷತ್‌ ಸದಸ್ಯರ ಸಭೆಯಲ್ಲಿ ಚರ್ಚಿಸಲಾಗುತ್ತದೆ. ತಪ್ಪು ಮಾಡಿದ ವಕೀಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಾಲ್ಕು ಶಿಸ್ತು ಸಮಿತಿಗಳಿಗೆ ಶಿಫಾರಸು ಮಾಡಲಾಗುವುದು.

ಸಂಜೆ ಕೋರ್ಟ್‌ಗಳ ಆರಂಭದ ಬಗ್ಗೆ ಪರಿಷತ್‌ ನಿಲುವೇನು? 

ರಾಜ್ಯದಲ್ಲಿ ಸಂಜೆ ಕೋರ್ಟ್‌ಗಳನ್ನು ಆರಂಭಿಸುವ ಬಗ್ಗೆ ನಿಲುವು ತಿಳಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಪರಿಷತ್‌ಗೆ ಪತ್ರ ಬರೆದಿದ್ದಾರೆ. ಈ ವಿಚಾರವನ್ನು ಪರಿಷತ್ತಿನ ಪದಾಧಿಕಾರಿಗಳ ಸಭೆ ಮುಂದಿಟ್ಟು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.

ಕನ್ನಡದ ನ್ಯಾಯಮೂರ್ತಿಗಳನ್ನು ಹೊರರಾಜ್ಯಗಳ ಹೈಕೋರ್ಟ್‌ ವರ್ಗಾಯಿಸಲು ಪರಿಷತ್‌ ವಿರೋಧವೇಕೆ?

ರಾಜ್ಯ ಹೈಕೋರ್ಟ್‌ನಲ್ಲಿ ಕನ್ನಡದ ನ್ಯಾಯಮೂರ್ತಿಗಳು ಇದ್ದರೆ ಪ್ರಕರಣಗಳು ತ್ವರಿತ ವಿಲೇವಾರಿಗೆ ಸಹಾಯವಾಗುತ್ತದೆ. ಇದರಿಂದ ಕಕ್ಷಿದಾರರಿಗೆ ಅನುಕೂಲವಾಗುತ್ತದೆ. ಅನ್ಯ ರಾಜ್ಯಗಳ ನ್ಯಾಯಮೂರ್ತಿಗಳ ಕನ್ನಡ ಭಾಷೆ, ಸ್ಥಳೀಯ ಕೋರ್ಟ್‌ ನಡಾವಳಿಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಕನ್ನಡದಲ್ಲಿರುವ ದಾಖಲೆಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಆಗದು. ಕನ್ನಡದಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವುದರಲ್ಲೇ ಬಹಳಷ್ಟು ಸಮಯ ಕಳೆದು ಹೋಗುತ್ತದೆ. ಇದರಿಂದ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತದೆ. ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ನಮ್ಮ ನ್ಯಾಯಮೂರ್ತಿಗಳನ್ನು ಹೊರ ರಾಜ್ಯಕ್ಕೆ ಕಳುಹಿಸಿದರೆ, ನಮ್ಮ ನ್ಯಾಯಾಂಗಕ್ಕೇ ನಷ್ಟ.

ನ್ಯಾಯಮೂರ್ತಿ ವರ್ಮಾ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಂಗದಲ್ಲಿ ಇದೆ ಎನ್ನಲಾದ ಭ್ರಷ್ಟಾಚಾರ ನಿರ್ಮೂಲನೆಗೆ ಪರಿಷತ್‌ ಯಾವ ಪಾತ್ರ ನಿರ್ವಹಿಸಲಿದೆ? ನ್ಯಾ.ವರ್ಮಾ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಪ್ರಶ್ನೆಗೆ ಉತ್ತರಿಸಲು ಕಷ್ಟವಾಗುತ್ತದೆ. ಕಾನೂನಿನಲ್ಲಿ ಎಲ್ಲರೂ ಸಮಾನರು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ದೇಶದಲ್ಲಿ ಎಲ್ಲರೂ ಕಾನೂನು ಪಾಲಿಸಬೇಕು.