ಕೋಲಾರ ಜಿಲ್ಲಾ ಬಿಜೆಪಿಯಲ್ಲಿ ‘ಬಣ’ ರಾಜಕೀಯ

| Published : Mar 03 2024, 01:33 AM IST

ಸಾರಾಂಶ

ಪಕ್ಷದಲ್ಲಿನ ನಿಷ್ಠಾವಂತರನ್ನು ಸಂಸದ ಮುನಿಸ್ವಾಮಿ ಕಡೆಗಣಿಸಿ ಹಿಂದಿನ ಜಿಲ್ಲಾಧ್ಯಕ್ಷರೇ ಮುಂದುವರೆಯುವಂತೆ ಹಾಗೂ ತಮ್ಮ ವಿರೋಧಿಯಾಗಿದ್ದ ಓಂಶಕ್ತಿಚಲಪತಿರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಮೂಲಕ ಪ್ರಬಲ ಬಣವಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲಾ ಬಿಜೆಪಿ ಪಕ್ಷದಲ್ಲೂ ಭಿನ್ನಮತ ಸ್ಪೋಟಗೊಂಡಿರುವುದು ಶುಕ್ರವಾರ ನಡೆದ ಬಿಜೆಪಿ ವೀಕ್ಷಕರ ಸಭೆಯಲ್ಲಿ ಬೆಳಕಿಗೆ ಬಂದಿದೆ, ಸಭೆಯನ್ನು ಆಯೋಜಿಸಿರುವುದು ಮೂಲ ಬಿಜೆಪಿ ಪಧಾಧಿಕಾರಿಗಳಿಗೆ ಬಹುತೇಕ ಮಂದಿಗೆ ಗೊತ್ತೇ ಇರಲಿಲ್ಲ ಎನ್ನಲಾಗಿದೆ.

ಬಿಜೆಪಿ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಬೆಂಬಲಿಗರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು, ಉಳಿದವರಿಗೆ ಸಭೆಯನ್ನು ಆಯೋಜಿಸಿರುವುದೇ ತಿಳಿಸಿರಲಿಲ್ಲ ಎಂದು ದೂರಲಾಗಿದೆ.

ಜಿಲ್ಲಾ ಬಿಜೆಪಿಯಲ್ಲಿ 2 ಬಣ

ಜಿಲ್ಲೆಯ ಬಿಜೆಪಿ ಘಟಕದಲ್ಲಿ ಎರಡು ಗುಂಪುಗಳಾಗಿವೆ, ಪಕ್ಷದ ಮೂಲ ಮುಖಂಡರು ಹಾಗೂ ಹೊಸದಾಗಿ ಸೇರ್ಪಡೆಗೊಂಡವರು ಎಂದು ಎರಡು ಬಣಗಳಾಗಿ ಗುರುತಿಸಿಕೊಂಡಿದ್ದು, ಹೊಸಬರಿಗೆ ಹಾಲಿ ಸಂಸದ ಮುನಿಸ್ವಾಮಿಯೇ ನಾಯಕ ಎನ್ನಲಾಗಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲಸ್ವಾಮಿ ಹಾಗೂ ಓಂಶಕ್ತಿ ಚಲಪತಿ ಸೇರ್ಪಡೆ ಮಾಡಿಕೊಂಡಿರುವ ಸಂಸದ ಮುನಿಸ್ವಾಮಿ ಪಕ್ಷದಲ್ಲಿ ಹಳಬರಾದ ಪದಾಧಿಕಾರಿಗಳನ್ನು ಮೂಲೆಗುಂಪು ಮಾಡಿ ತಮ್ಮ ಬಣವನ್ನು ಬಲಪಡಿಸಿಕೊಂಡಿದ್ದರೆ ಎಂಬ ಆರೋಪ ಕೇಳಿಬರುತ್ತಿದೆ.

ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಲಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್.ಮುನಿಸ್ವಾಮಿ ಹೊರತುಪಡಿಸಿ ಬೇರೆ ಆಕಾಂಕ್ಷಿಗಳಿಗೆ ನೀಡಿ ಅಥವಾ ಜೆ.ಡಿ.ಎಸ್ ಪಕ್ಷದವರಿಗಾದರೂ ನೀಡಿ ಎಂಬ ಒತ್ತಾಯಗಳು ಪಕ್ಷದ ವರಿಷ್ಠರನ್ನು ತಲುಪಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಚಿಂತಿಸಿದೆ,

ಪಕ್ಷದಲ್ಲಿನ ನಿಷ್ಠಾವಂತರನ್ನು ಸಂಸದ ಮುನಿಸ್ವಾಮಿ ಕಡೆಗಣಿಸಿ ಹಿಂದಿನ ಜಿಲ್ಲಾಧ್ಯಕ್ಷರೇ ಮುಂದುವರೆಯುವಂತೆ ಹಾಗೂ ತಮ್ಮ ಪ್ರಬಲ ವಿರೋಧಿಯಾಗಿದ್ದ ಓಂಶಕ್ತಿಚಲಪತಿರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಮೂಲಕ ತ್ರಿಮೂರ್ತಿಗಳು ಪಕ್ಷದ ಹಿರಿಯರ ಗಮನಕ್ಕೆ ಬಾರದಂತೆ ರಾತ್ರೋ ರಾತ್ರಿ ಜಿಲ್ಲಾ ಪದಾಧಿಕಾರಿಗಳನ್ನು ತೆಗೆದು ತಮ್ಮ ಬೆಂಬಲಿತರಿಗೆ ಮಾತ್ರ ಪದಾಧಿಕಾರಿಗಳ ಸ್ಥಾನಮಾನ ನೀಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪ

ಇಷ್ಟೇ ಅಲ್ಲದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಸಂಸದರು ಬಿಜೆಪಿ ಅಭ್ಯರ್ಥಿಗಳ ಪರ ಕಾರ್ಯನಿರ್ವಹಿಸಿದೆ ತಮ್ಮ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಋಣ ತೀರಿಸುವ ಕೆಲಸ ಮಾಡಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಪಕ್ಷದ ವರಿಷ್ಠರಿಗೆ ಮುಖಂಡರು ದೂರಿದ್ದಾರೆ.