ಸಾರಾಂಶ
ಬಿಬಿಎಂಪಿ ಕಾಮಗಾರಿಗಳ ಅನುಷ್ಠಾನದಲ್ಲಾಗಿರುವ ಅಕ್ರಮಗಳ ಪತ್ತೆಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ವಿಚಾರಣಾ ಆಯೋಗದ ವರದಿಯನ್ನು ಗುರುವಾರ ಒಪ್ಪಿರುವ ಸಚಿವ ಸಂಪುಟ, ವರದಿಯಲ್ಲಿನ ಶಿಫಾರಸುಗಳನ್ನು ಆಧರಿಸಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲು ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಕಾಮಗಾರಿಗಳ ಅನುಷ್ಠಾನದಲ್ಲಾಗಿರುವ ಅಕ್ರಮಗಳ ಪತ್ತೆಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ವಿಚಾರಣಾ ಆಯೋಗದ ವರದಿಯನ್ನು ಗುರುವಾರ ಒಪ್ಪಿರುವ ಸಚಿವ ಸಂಪುಟ, ವರದಿಯಲ್ಲಿನ ಶಿಫಾರಸುಗಳನ್ನು ಆಧರಿಸಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲು ನಿರ್ಧರಿಸಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ, ಬೃಹತ್ ನೀರುಗಾಲುವೆ, ನಗರ ಯೋಜನೆ, ಕೆರೆ, ಸ್ಮಾರ್ಟ್ ಸಿಟಿ, ವಾರ್ಟ್ ಮಟ್ಟದ ಕಾಮಗಾರಿಗಳು ಸೇರಿ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಪತ್ತೆಗಾಗಿ ಸರ್ಕಾರ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ವಿಚಾರಣಾ ಆಯೋಗ ನಡೆಸಿತ್ತು. ಆಯೋಗವು 3,049 ಕೋಟಿ ರು. ಮೊತ್ತದ 761 ಕಾಮಗಾರಿಗಳ ಅನುಷ್ಠಾನ ಪರಿಶೀಲಿಸಿದೆ. ಈ ಪರಿಶೀಲನೆಯಲ್ಲಿ ಹಲವು ಕಾಮಗಾರಿಗಳು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆಯದೆ ಅನುಷ್ಠಾನಗೊಳಿಸುವುದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು, ಟೆಂಡರ್ ಪ್ರಕ್ರಿಯೆ ಪಾಲಿಸದಿರುವುದು ಸೇರಿ ಹಲವು ಅಂಶಗಳನ್ನು ಪತ್ತೆ ಮಾಡಿದೆ.
ಈ ಎಲ್ಲ ಲೋಪಗಳು, ಅಕ್ರಮದಲ್ಲಿ ಅಧಿಕಾರಿ-ಗುತ್ತಿಗೆದಾರರು ಕೈ ಜೋಡಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಅಧಿಕಾರಿಗಳು ನಿವೃತ್ತರಾಗಿದ್ದರೆ ಅಥವಾ ಬೇರೆ ಇಲಾಖೆಗೆ ವರ್ಗಾವಣೆಗೊಂಡಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.