ಸಾರಾಂಶ
ಮಂಡ್ಯ : ಮಂಡ್ಯ ನೆಲದಲ್ಲಿ ಮಗನನ್ನು ಸೋಲಿಸಿದ ರೀತಿಯಲ್ಲೇ ಈ ಬಾರಿ ಅಪ್ಪನನ್ನೂ ಸೋಲಿಸಿ ಮನೆಗೆ ಕಳುಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ-೨ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಚುನಾವಣೆ ವೇಳೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ಮಗ ನಿಖಿಲ್‌ನನ್ನು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕರೆತಂದು ನಿಲ್ಲಿಸಿದ್ದರು. ಆದರೆ, ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ವಿರುದ್ಧ ಮಗ ಸೋತರು. ಈಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಅವರನ್ನ ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಜನರನ್ನು ಕೋರಿದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಕೊಟ್ಟ ಯಾವುದೇ ಭರವಸೆ ಈಡೇರಿಲ್ಲ. ತೈಲ ಬೆಲೆಗಳು ಹೆಚ್ಚಾದವು. ಒಳ್ಳೆಯ ದಿನ ಬರುತ್ತೆ ಎಂದರು. ಇಲ್ಲಿವರೆಗೂ ಬರಲಿಲ್ಲ. ರೈತರ ಸಾಲಮನ್ನಾ ಮಾಡಲಿಲ್ಲ, ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದೆಲ್ಲಾ ಜರಿದರು.
ಬಿಜೆಪಿ-ಜೆಡಿಎಸ್‌ನವರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಯಾರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ, ಯಾರು ನಡೆದುಕೊಂಡಿಲ್ಲ ಎನ್ನುವುದನ್ನು ನೋಡಿ ಜನರು ಮತಹಾಕಬೇಕು. ಕೊಟ್ಟ ಮಾತಿನಂತೆ ನಡೆದುಕೊಂಡಿರುವವರಿಗೆ ಮತ ನೀಡಬೇಕು ಎಂದರು.
ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ೨೭ ಸಂಸದರು ಒಂದು ದಿನವೂ ಮಾತನಾಡಿಲ್ಲ. ನಾವು ಮೈಷುಗರ್ ಕಾರ್ಖಾನೆಗೆ ೫೦ ಕೋಟಿ ರು. ಬಿಡುಗಡೆ ಮಾಡಿದ್ದೇವೆ.. ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ. ಈಗ ಕಾರ್ಖಾನೆ ಇರುವ ಜಾಗದಲ್ಲೇ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.