ಸಚಿವೆ ಹೆಬ್ಬಾಳಕರ ಹೇಳಿಕೆಗೆ ಖಂಡನೆ

| Published : Nov 17 2023, 06:45 PM IST

ಸಾರಾಂಶ

ಲಕ್ಷ್ಮೀ ಹೆಬ್ಬಾಳಕರ ಸಚಿವೆಯಾದ ಬಳಿಕ ಪತ್ರಕರ್ತರ ಜತೆಗೆ ನಡೆದುಕೊಳ್ಳುವ ರೀತಿ ಬದಲಾಗಿದೆ. ಪತ್ರಕರ್ತರನ್ನು ಅವಮಾನಿಸುವಂತಹ ಘಟನೆ ಪದೇ ಪದೆ ನಡೆಯುತ್ತಲೇ ಇವೆ. ಸಚಿವರಾಗಿರುವುದರಿಂದ ನಾವು ಸಹಜವಾಗಿಯೇ ಅವರ ಪ್ರತಿಕ್ರಿಯೆ ಕೇಳಲು ಅವರ ಮನೆಗೆ ತೆರಳುತ್ತೇವೆ. ಆದರೆ, ನಮ್ಮ ಜೊತೆಗೆ ಅವರು ಸರಿಯಾಗಿ ವರ್ತಿಸುವುದಿಲ್ಲ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಪತ್ರಕರ್ತರ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೀಡಿರುವ ಅವಮಾನಕರ ಹೇಳಿಕೆಯನ್ನು ಬೆಳಗಾವಿ ಪತ್ರಕರ್ತರು ತೀವ್ರವಾಗಿ ಖಂಡಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಪತ್ರಕರ್ತರ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಪ್ರಮುಖವಾಗಿ ಐದು ನಿರ್ಣಯ ಕೈಗೊಳ್ಳಲಾಯಿತು. ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲು ನಿರ್ಧರಿಸಲಾಯಿತು. ಸಚಿವೆ ಹೆಬ್ಬಾಳಕರ ಕೂಡಲೇ ತಮ್ಮ ಹೇಳಿಕೆ ವಾಪಸ್‌ ಪಡೆಯಬೇಕು, ಬೇಷರತ್ತಾಗಿ ಕ್ಷಮಾಪಣೆ ಕೇಳಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.

ಲಕ್ಷ್ಮೀ ಹೆಬ್ಬಾಳಕರ ಸಚಿವೆಯಾದ ಬಳಿಕ ಪತ್ರಕರ್ತರ ಜತೆಗೆ ನಡೆದುಕೊಳ್ಳುವ ರೀತಿ ಬದಲಾಗಿದೆ. ಪತ್ರಕರ್ತರನ್ನು ಅವಮಾನಿಸುವಂತಹ ಘಟನೆ ಪದೇ ಪದೆ ನಡೆಯುತ್ತಲೇ ಇವೆ. ಸಚಿವರಾಗಿರುವುದರಿಂದ ನಾವು ಸಹಜವಾಗಿಯೇ ಅವರ ಪ್ರತಿಕ್ರಿಯೆ ಕೇಳಲು ಅವರ ಮನೆಗೆ ತೆರಳುತ್ತೇವೆ. ಆದರೆ, ನಮ್ಮ ಜೊತೆಗೆ ಅವರು ಸರಿಯಾಗಿ ವರ್ತಿಸುವುದಿಲ್ಲ ಎಂದು ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತ ವಿಲಾಸ ಜೋಶಿ, ರವಿ ಉಪ್ಪಾರ, ಹೃಷಿಕೇಷ ಬಹಾದ್ದೂರ ದೇಸಾಯಿ, ದಿಲೀಪ ಕುಮಾರ ಕುರಂದವಾಡೆ, ರಾಜು ಗವಳಿ, ನೌಶಾದ ಬಿಜಾಪುರೆ, ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ, ಚಂದ್ರಕಾಂತ ಸುಗಂದಿ, ಶ್ರೀಧರ ಕೋಟಾರಗಸ್ತಿ, ಸಹದೇವ ಮಾನೆ, ಮೈಲಾರಿ ಪಟಾತ್‌ ಮೊದಲಾದವರು ಸಭೆಯಲ್ಲಿ ಇದ್ದರು.