ಪ.ಬಂಗಾಳ ಶಾಸಕರ ಪ್ರಮಾಣವಚನ: ಭಾರಿ ವಿವಾದ

| Published : Jul 06 2024, 12:49 AM IST / Updated: Jul 06 2024, 06:24 AM IST

ಸಾರಾಂಶ

ಪ.ಬಂಗಾಳದ ಇಬ್ಬರು ಟಿಎಂಸಿ ನೂತನ ಶಾಸಕರಾದ ರಾಯತ್‌ ಸರ್ಕಾರ್‌ ಹಾಗೂ ಸಯಾಂತಿಕಾ ಬಂಡೋಧ್ಯಾಯ ಅವರ ಪ್ರಮಾಣ ವಚನ ಸ್ವೀಕಾರ ವಿವಾದಕ್ಕೆ ಕಾರಣವಾಗಿದೆ.

ಕೋಲ್ಕತಾ: ಪ.ಬಂಗಾಳದ ಇಬ್ಬರು ಟಿಎಂಸಿ ನೂತನ ಶಾಸಕರಾದ ರಾಯತ್‌ ಸರ್ಕಾರ್‌ ಹಾಗೂ ಸಯಾಂತಿಕಾ ಬಂಡೋಧ್ಯಾಯ ಅವರ ಪ್ರಮಾಣ ವಚನ ಸ್ವೀಕಾರ ವಿವಾದಕ್ಕೆ ಕಾರಣವಾಗಿದೆ. ಇವರ ಪ್ರಮಾಣವಚನ ಸಂವಿಧಾನಬಾಹಿರ ಎಂದು ಸಿಎಂ ಮಮತಾ ಬ್ಯಾನರ್ಜಿ ಜತೆ ಸದಾ ಸಂಘರ್ಷ ನಡೆಸುವ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಷ್ಟ್ರಪತಿಗೆ ಪತ್ರ ಮುಖೇನ ದೂರಿದ್ದಾರೆ.

ಕಳೆದ ತಿಂಗಳು ಉಪಚುನಾವಣೆಯಲ್ಲಿ ಆಯ್ಕೆ ಆದ ಈ ಶಾಸಕರಿಗೆ, ‘ಈಗ ವಿಧಾನಸಭೆ ಅಧಿವೇಶನ ನಡೆಯುತ್ತಿಲ್ಲ. ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿ’ ಎಂದು ಬೋಸ್ ಸೂಚಿಸಿದ್ದರು. ಆದರೆ ಬೋಸ್‌ ಜತೆ ಮಮತಾ ಸಂಘರ್ಷ ನಡೆಸಿರುವ ಕಾರಣ ರಾಜಭವನಕ್ಕೆ ತೆರಳಲು ನೂತನ ಶಾಸಕರು ನಿರಾಕರಿಸಿದ್ದರು.

ಆದರೆ ಗುರುವಾರ ರಾತ್ರಿ ಬೋಸ್‌ ಅವರು, ‘ಶುಕ್ರವಾರದ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಉಪ ಸ್ಪೀಕರ್‌ ಆಶಿಷ್‌ ಬ್ಯಾನರ್ಜಿ ಅವರಿಂದ ಪ್ರಮಾಣವಚನ ಸ್ವೀಕರಿಸಿ’ ಎಂದು ಸೂಚಿಸಿದ್ದರು. ಆದರೆ ಶುಕ್ರವಾರ ಸ್ಪೀಕರ್ ಬಿಮನ್‌ ಬ್ಯಾನರ್ಜಿ ಅವರು ಪೀಠದಲ್ಲಿದ್ದ ಕಾರಣ, ಉಪ ಸ್ಪೀಕರ್ ಅವರು ಪ್ರಮಾಣವಚನ ಬೋಧನೆಗೆ ನಿರಾಕರಿಸಿ, ಬಿಮನ್‌ ಅವರಿಗೇ ಶಪಥ ಬೋಧನೆಗೆ ಕೋರಿದ್ದರು. ಆಗ ಬಿಮನ್‌ ಪ್ರಮಾಣವಚನ ಬೋಧಿಸಿದ್ದರು.

ಇದಕ್ಕೆ ಆಕ್ಷೇಪ ಎತ್ತಿರುವ ಬೋಸ್, ‘ನನ್ನ ಸೂಚನೆಯಂತೆ ಉಪ ಸ್ಪೀಕರ್‌ ಪ್ರಮಾಣವಚನ ಬೋಧಿಸಿಲ್ಲ. ಇದು ಅಸಾಂವಿಧಾನಿಕ’ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಆದರೆ ಈ ಪತ್ರಕ್ಕೆ ಆಶಿಷ್‌ ಆಕ್ಷೇಪಿಸಿದ್ದು, ‘ಸ್ಪೀಕರ್‌ ಹಾಜರಿರುವಾಗ ಉಪ ಸ್ಪೀಕರ್‌ ಅವರು ಸದನ ನಡೆಸಕೂಡದು ಎಂದು ಸದನದ ನಿಯಮ-5 ಹೇಳುತ್ತದೆ. ಹೀಗಾಗಿ ನಾನು ಪ್ರಮಾಣ ವಚನ ಬೋಧಿಸಲಿಲ್ಲ’ ಎಂದಿದ್ದಾರೆ.