ಸಾರಾಂಶ
ಚಿಕ್ಕಬಳ್ಳಾಪುರ : ಗ್ಯಾರಂಟಿ ಯೋಜನೆಯ ಪರಿಣಾಮದಿಂದ ಎದುರಾದ ಹಣಕಾಸು ಕೊರತೆ ತೂಗಿಸಲು ರಾಜ್ಯ ಸರ್ಕಾರ ಹನಿ ನೀರಾವರಿ ಯೋಜನೆಯ ಸಬ್ಸಿಡಿ ಮೊತ್ತವನ್ನು ಏಕಾಎಕಿ ಖಡಿತ ಮಾಡಿದೆ. ಇದು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿ, ಅನ್ನದಾತನ ಬದುಕಿನ ಮೇಲೆ ಬರೆ ಹಾಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ವಿ. ರಾಮಲಿಂಗಪ್ಪ ಆಕ್ರೋಷ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ಸಾಮಾನ್ಯ ರೈತರಿಗೆ ಶೇ.75ರಷ್ಟು ಸಬ್ಸಿಡಿ ದೊರೆಯುತ್ತಿತ್ತು. ಈ ಪೈಕಿ, ರಾಜ್ಯ ಸರ್ಕಾರ ಶೇ.48 ಹಾಗೂ ಕೇಂದ್ರ ಸರ್ಕಾರ ಶೇ.27ರಷ್ಟು ಸಬ್ಸಿಡಿ ನೀಡುತ್ತಿತ್ತು ಎಂದರು.
ಶೇ.55ರಷ್ಟು ರೈತ ಭರಿಸಬೇಕು
ಕೇಂದ್ರ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಶೇ.27ರಷ್ಟು ಸಹಾಯಧನವನ್ನು ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಸಹಾಯಧನವನ್ನು ಶೇ.48ರ ಬದಲಿಗೆ ಶೇ.18ಕ್ಕೆ ಇಳಿಕೆ ಮಾಡಿದ್ದರಿಂದ ರೈತರಿಗೆ ಶೇ.75 ಬದಲಿಗೆ ಶೇ.45ರಷ್ಟು ಮಾತ್ರ ಸಬ್ಸಿಡಿ ದೊರೆಯುತ್ತದೆ. ಉಳಿದ ಶೇ.55ನ್ನು ಈಗ ರೈತರೇ ಭರಿಸಬೇಕಾಗಿದೆ. ಈ ಹಿಂದೆ ರೈತರು ಕೇವಲ ಶೇ.25ರಷ್ಟನ್ನು ಮಾತ್ರ ಭರಿಸುತ್ತಿದ್ದರು. ಈಗ ರೈತರಿಗೆ ದುಪ್ಪಟ್ಟು ಹೊರೆಯಾಗಿದೆ ಎಂದರು. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ ಶೇ.90ರಷ್ಟು ಸಬ್ಸಿಡಿಯನ್ನು ಮುಂದು ವರಿಸಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ಸೇರಿ ಸಾಮಾನ್ಯ ರೈತರ ಸಬ್ಸಿಡಿ ಹಣಕ್ಕೆ ಮಾತ್ರ ಕತ್ತರಿ ಹಾಕಲಾಗಿದೆ. ಇದು ಬ್ರಿಟಿಷರಂತೆ ಒಡೆದು ಆಳುವ ನೀತಿಯಾಗಿದ್ದು, ಸಿದ್ದರಾಮಯ್ಯನವರು ರೈತರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ರೈತರಿಗೆ ದೊಡ್ಡ ಪೆಟ್ಟು ಕೋಲಾರ ಮೊದಲೇ ಬರ ಪೀಡಿತ ಜಿಲ್ಲೆ, ಯಾವುದೇ ನದೀ ನಾಲೆಗಳು ಈ ಬಾಗದ ರೈತರು ಸಾಕಷ್ಟು ಸಾಲ ಸೋಲ ಮಾಡಿ ಸಾವಿರಾರು ಅಡಿಗಳ ಆಳಕ್ಕೆ ಭೂಮಿ ಕೊರೆದು ಭಗೀರಥ ಪ್ರಯತ್ನ ಪಟ್ಟು ಕೊಳವೆ ಭಾವಿಗಳ ಮುಖಾಂತರ ನೀರುತಂದು ಬೆಳೆ ಬೆಳೆದು ದೇಶಕ್ಕೆ ನೀಡುತ್ತಿದ್ದಾನೆ. ಮಳೆ ಕೊರತೆ ಮತ್ತು ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಯಿಂದಾಗಿ ಜಿಲ್ಲೆಯ ಶೇ. 60ರಷ್ಟು ರೈತರು ಕೊಳವೆ ಭಾವಿ ಆಧಾರಿತ ರೈತರು ಹನಿ ನೀರಾವರಿಯಿಂದ ಹೆಚ್ಚಿನ ನೀರು ಪೋಲಾಗದಂತೆ ಬೆಳೆ ತೆಗೆಯುತ್ತಿದ್ದಾನೆ. ಇಂತಹುದರಲ್ಲಿ ರಾಜ್ಯ ಸರ್ಕಾರ ದಿಢೀರನೇ ಹನಿ ನೀರಾವರಿಗೆ ನೀಡುತ್ತಿದ್ದ ಸಾಮಾನ್ಯ ರೈತರಿಗೆ ಶೇ.75 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು ಸಬ್ಸಿಡಿ ನೀಡುತ್ತಿದ್ದುದರಿಂದಲೇ ಅವರು ಹನಿ ನೀರಾವರಿ ಅಳವಡಿಸಿ ಕೊಳ್ಳಲು ಶಕ್ತರಾಗಿದ್ದರು. ಆದರೆ, ಈಗ ರಾಜ್ಯ ಸರ್ಕಾರ ತನ್ನ ಪಾಲಿನ ಸಬ್ಸಿಡಿಯಲ್ಲಿ ಕಡಿತ ಮಾಡಿದ್ದರಿಂದ ರೈತರ ಸಮುದಾಯಕ್ಕೆ ಬರೆ ಎಳೆದಂತೆ ಆಗಿದ್ದು, ಹನಿ ನೀರಾವರಿಯಿಂದ ವಿಮುಖರಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ತೈಲ ಬೆಲೆ ಏಕಾಏಕಿ ಏರಿಕೆ ಮಾಡಲಾಗಿತ್ತು. ಹಾಲು ಖರೀದಿ ದರವನ್ನೂ ಖಡಿತ ಮಾಡಲಾಗಿದೆ. ಜೊತೆಗೆ ಹನಿ ನೀರಾವರಿಗೆ ಇರುವ ರಾಜ್ಯದ ಪಾಲಿನ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಇಳಿಕೆ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಹೋರಾಟ ನಡೆಸುವ ಎಚ್ಚರಿಕೆ
ತೋಟಗಾರಿಕೆ, ರೇಷ್ಮೆ, ಕೃಷಿ ಬೆಳೆಗಳ ಉತ್ತೇಜನಕ್ಕೆ ಹನಿ ನೀರಾವರಿ ಪದ್ಧತಿಯನ್ನು ಕೇಂದ್ರ-ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಾ ಬಂದಿವೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ),ಕೃಷಿ ಯಾಂತ್ರೀಕರಣ ಉಪ ಅಭಿಯಾನ (ಎಸ್‌ಎಂಎಎಂ), ರಾಷ್ಟ್ರೀಯ ತೋಟಗಾರಿಕಾ ಅಭಿಯಾನ (ಎನ್‌ಎಚ್‌ಎಂ) ಯೋಜನೆಗಳಡಿ ರೈತರಿಗೆ ಹನಿ ನೀರಾವರಿ ಸೌಲಭ್ಯ (ಡ್ರಿಪ್ ಇರಿಗೇಷನ್) ನೀಡುತ್ತಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರೆಸದಿದ್ದಲ್ಲಿ ಅನ್ನದಾತರ ಪರವಾಗಿ ಹೋರಾಟ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.