ಬಿಜೆಪಿ 25 ರಿಂದ 17ಕ್ಕೆ ಇಳಿಕೆ, ಕೈ 1 ರಿಂದ 9ಕ್ಕೇರಿಕೆ

| Published : Jun 05 2024, 06:23 AM IST

bjp congress

ಸಾರಾಂಶ

ರಾಜ್ಯದ ಸಂಸತ್‌ ಸಮರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಕ್ಕೆ ನಾಡಿನ ಮತದಾರರು ಮನ್ನಣೆ ನೀಡಿದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿಗೆ ಹಿನ್ನಡೆಯಾಗಿದೆ.

ಬೆಂಗಳೂರು :  ರಾಜ್ಯದ ಸಂಸತ್‌ ಸಮರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಕ್ಕೆ ನಾಡಿನ ಮತದಾರರು ಮನ್ನಣೆ ನೀಡಿದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿಗೆ ಹಿನ್ನಡೆಯಾಗಿದೆ.

ಕಳೆದ ಬಾರಿ ಕೇವಲ ಒಂದು ಸ್ಥಾನಕ್ಕೆ ಜಯಗಳಿಸಲು ಸೀಮಿತವಾಗಿದ್ದ ಆಡಳಿತಾರೂಢ ಕಾಂಗ್ರೆಸ್‌ ಈ ಬಾರಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಚೇತರಿಕೆ ಕಂಡಿದೆ. ಇನ್ನು, ಜೆಡಿಎಸ್‌ ಪಕ್ಷ ತಾನು ಸ್ಪರ್ಧಿಸಿದ್ದ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಜಯ ಗಳಿಸುವಲ್ಲಿ ಸಫಲವಾಗಿದೆ. ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಮತ ಎಣಿಕೆಯು ಸಂಜೆಯವರೆಗೆ ನಡೆಯಿತು. ಮಧ್ಯಾಹ್ನದ ವೇಳೆಗೆ ಕಣದಲ್ಲಿದ್ದ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಸ್ಪಷ್ಟ ಚಿತ್ರಣ ಲಭ್ಯವಾಗಿತ್ತಾದರೂ, ಸಂಜೆಯ ಹೊತ್ತಿಗೆ ಖಚಿತವಾಯಿತು. ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಜಯಗಳಿಸಿದರೆ, ಬಿಜೆಪಿ 17 ಮತ್ತು ಜೆಡಿಎಸ್‌ 2 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿ ಸಂಪೂರ್ಣವಾಗಿ ಮುದುಡಿದೆ. ಆ ಭಾಗದ ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಬೀದರ್ ಸೇರಿ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ. ಇನ್ನು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿದ್ದರೆ, ಉತ್ತರ ಭಾಗದಲ್ಲಿ ಕಾಂಗ್ರೆಸ್ ಬಹಳ ಚೇತರಿಕೆ ಕಂಡಿದೆ.

ಬಾಗಲಕೋಟೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಬೆಳಗಾವಿ, ಬಿಜಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡಗಳಲ್ಲಿ ಬಿಜೆಪಿ ಜಯಗಳಿಸಿದರೆ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿದೆ. ಇನ್ನು, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಕಲಬುರಗಿ, ಹಾಸನ, ಕೊಪ್ಪಳ ಮತ್ತು ರಾಯಚೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 3.37 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ದಾಖಲೆ ಗೆಲುವು ಸಾಧಿಸಿದ್ದಾರೆ. ಇವರು ರಾಜ್ಯದಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವರಾದ ವಿ.ಸೋಮಣ್ಣ, ಡಾ.ಕೆ.ಸುಧಾಕರ್‌, ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಜಯಗಳಿಸಿದ್ದಾರೆ. ಯದುವೀರ್‌ ಒಡೆಯರ್, ಪ್ರಿಯಾಂಕಾ ಜಾರಕಿಹೊಳಿ, ರಾಧಾಕೃಷ್ಣ ದೊಡ್ಡಮನಿ, ಜಿ.ಕುಮಾರನಾಯಕ್‌, ಸಾಗರ್‌ ಈಶ್ವರ್‌ ಖಂಡ್ರೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಪ್ರಭಾ ಮಲ್ಲಿಕಾರ್ಜುನ್‌, ಶ್ರೇಯಸ್‌ ಪಟೇಲ್‌, ಗೋವಿಂದ್‌ ಕಾರಜೋಳ, ವಿ.ಸೋಮಣ್ಣ ಮೊದಲ ಬಾರಿಗೆ ಗೆಲುವು ಸಾಧಿಸಿ ಸಂಸತ್‌ ಪ್ರವೇಶಿಸುತ್ತಿದ್ದಾರೆ.

 ಸಚಿವರ ಮಕ್ಕಳಲ್ಲಿ ಮೂವರಿಗೆ ಸಿಹಿ:  

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಆರು ಸಚಿವರ ಮಕ್ಕಳನ್ನು ಅಭ್ಯರ್ಥಿಗಳಾಗಿ ಅಖಾಡಕ್ಕಿಳಿಸಲಾಗಿತ್ತು. ಈ ಪೈಕಿ ಮೂವರಿಗೆ ಸಿಹಿ ಸಿಕ್ಕರೆ, ಮೂವರಿಗೆ ಕಹಿ ಅನುಭವವಾಗಿದೆ. ಚಿಕ್ಕೋಡಿಯಿಂದ ಕಣಕ್ಕಿಳಿದಿದ್ದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ಜಯ ಸಾಧಿಸಿದ್ದಾರೆ. ಬೀದರ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಸಚಿವ ಈಶ್ವರ್‌ ಖಂಡ್ರೆ ಮಗ ಸಾಗರ್ ಖಂಡ್ರೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇನ್ನು, ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಸೋಲನುಭವಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಪರಾಭವಗೊಂಡಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲನುಭವಿಸಿದ್ದಾರೆ.

 ಹಾಲಿ ಸಂಸದರ ಸೋಲು 

ಈ ಬಾರಿಯ ಚುನಾವಣಾ ಫಲಿತಾಂಶವು ಅಚ್ಚರಿಗೂ ಕಾರಣವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರು ಮಂದಿ ಹಾಲಿ ಸಂಸದರಿಗೆ ಮತದಾರರು ಸೋಲಿನ ರುಚಿ ತೋರಿಸಿರುವುದು ಗಮನಾರ್ಹ. ಬಿಜೆಪಿ ಸಂಸದರಾದ ಭಗವಂತ್ ಖೂಬಾ, ಡಾ.ಉಮೇಶ್ ಜಾಧವ್, ರಾಜಾ ಅಮರೇಶ್ವರ ನಾಯಕ್, ಅಣ್ಣಾಸಾಹೇಬ್ ಜೊಲ್ಲೆ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್ ಪರಾಭವಗೊಂಡಿದ್ದಾರೆ.