ಹೆಣ ಹೂಳುವುದರಲ್ಲೂ ಬಿಜೆಪಿಗರು ಭ್ರಷ್ಟಾಚಾರ ಮಾಡಿದ್ದಾರೆ : ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Nov 10 2024, 01:50 AM IST / Updated: Nov 10 2024, 04:38 AM IST

ಸಾರಾಂಶ

ಕೋವಿಡ್ ವೇಳೆ ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ಸುಮಾರು ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಸತ್ತ ಹೆಣ ಹೂಳುವುದರಲ್ಲಿಯೂ ಬಿಜೆಪಿಯವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

  ಸಂಡೂರು : ಕೋವಿಡ್ ವೇಳೆ ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ಸುಮಾರು ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಸತ್ತ ಹೆಣ ಹೂಳುವುದರಲ್ಲಿಯೂ ಬಿಜೆಪಿಯವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತಾಲೂಕಿನ ತೋರಣಗಲ್ಲಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊರೋನಾ ಕಾಲದ ಪಿಪಿಇ ಕಿಟ್‌ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದಾರೆ. ದೇಶದಲ್ಲಿಯೇ ಈ ವಸ್ತುಗಳು ಸಿಗುತ್ತಿದ್ದವು. ಆದರೆ, ಚೀನಾದಿಂದ ಕಿಟ್ ತಂದು ಭ್ರಷ್ಟಾಚಾರ ಮಾಡಿದ್ದಾರೆ. ಕೋಟಿಗಟ್ಟಲೇ ಹಣ ಹೊಡೆದಿದ್ದು, ಅವರ ವಿರುದ್ಧ ಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿದರು.

ಪ್ರತಿಪಕ್ಷದ ನಾಯಕನಾಗಿದ್ದ ವೇಳೆ ಕೋವಿಡ್ ವೇಳೆ ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ಸುಮಾರು ₹2000 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಹಿತ ಅಧಿವೇಶನದಲ್ಲಿ ಆರೋಪ ಮಾಡಿದ್ದೆ. ಇದಾದ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರದ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. 1,700ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಮಿತಿ ಕಳೆದ ಆಗಸ್ಟ್‌ನಲ್ಲಿ ಸಲ್ಲಿಸಿದೆ. ವರದಿಯನ್ನು ಸಂಪುಟ ಉಪ ಸಮಿತಿ ಅಧ್ಯಯನ ನಡೆಸಲಿದೆ ಎಂದರು.

ಬೆದರಿಕೆಗೆ ನಾನು ಬಗ್ಗಲ್ಲ, ಜಗ್ಗಲ್ಲ

ಕೋವಿಡ್‌ ಕಾಲದ ಖರೀದಿ ಸಂಬಂಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವುದರ ಹಿಂದೆ ಕಾಂಗ್ರೆಸ್‌ನ ರಾಜಕೀಯ ದುರುದ್ದೇಶವಿದೆ. ರಾಜ್ಯ ಸರ್ಕಾರದ ಯಾವುದೇ ಬೆದರಿಕೆಗೆ ನಾನು ಬಗ್ಗುವುದು ಇಲ್ಲ, ಜಗ್ಗುವುದು ಇಲ್ಲ. ಯಾವ ತನಿಖೆ ಬೇಕಾದರೂ ಮಾಡಲಿ. ನನ್ನ ಅವಧಿಯಲ್ಲಿ ಯಾವ ಹಗರಣವೂ ನಡೆದಿಲ್ಲ.

- ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಿಎಂ