ಸಾರಾಂಶ
ಬೆಂಗಳೂರು : ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ನಡೆದ ಗಲಭೆ ಕುರಿತ ಸತ್ಯಾಸತ್ಯತೆ ತಿಳಿಯುವ ಸಂಬಂಧ ಪ್ರಮುಖ ಪ್ರತಿಪಕ್ಷ ಬಿಜೆಪಿಯು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದೆ.ಪಕ್ಷದ ಮುಖಂಡರಾದ ಬೈರತಿ ಬಸವರಾಜ, ಕೆ.ಸಿ.ನಾರಾಯಣಗೌಡ, ಲಕ್ಷ್ಮೀ ಅಶ್ವಿನ್‌ಗೌಡ ಹಾಗೂ ಭಾಸ್ಕರ್‌ರಾವ್ ಅವರು ಈ ಸಮಿತಿಯ ತಂಡದಲ್ಲಿದ್ದಾರೆ.ಸಮಿತಿಯ ಪ್ರಮುಖರು ಘಟನಾ ಸ್ಥಳಕ್ಕೆ ತೆರಳಿ, ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಒಂದು ವಾರದೊಳಗಾಗಿ ವರದಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಬುಧವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹಿಂಸಾಚಾರ ಸಂಭವಿಸಿತ್ತು. ಪೆಟ್ರೋಲ್ ಬಾಂಬ್, ಕಲ್ಲು ತೂರಿ, ಮಚ್ಚು- ಲಾಂಗುಗಳನ್ನು ಝಳಪಡಿಸಲಾಗಿತ್ತು. 20ಕ್ಕೂ ಹೆಚ್ಚು ಅಂಗಡಿಗಳಿಗೆ ಧ್ವಂಸ ಮಾಡಿ, ಬೆಂಕಿ ಹಚ್ಚಲಾಗಿತ್ತು. ಬೈಕ್ ಶೋ ರೂಂ ಲೂಟಿ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ವಿಜಯೇಂದ್ರ, ಪ್ರತಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ನಾಗಮಂಗಲಕ್ಕೆ ಗುರುವಾರ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಸತ್ಯ ಶೋಧನಾ ಸಮಿತಿ ರಚನೆಯಾಗಿದೆ.