ಸಾರಾಂಶ
ಬಿಜೆಪಿ ಅವರಿಗೆ ಮಾಡೋಕೆ ಕೆಲಸ ಇಲ್ಲ, ಅದಕ್ಕೆ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
ಮೈಸೂರು : ಬಿಜೆಪಿ ಅವರಿಗೆ ಮಾಡೋಕೆ ಕೆಲಸ ಇಲ್ಲ, ಅದಕ್ಕೆ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕೆಂಬ ಕಾನೂನು ಇದಿಯಾ? ಬಿಜೆಪಿಯವರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರು ಎಷ್ಟು ಜನರು ಬೇಲ್ ಮೇಲ್ ಇದ್ದಾರೆ. ಬಿಜೆಪಿಯ ಎಷ್ಟೋ ಜನಕ್ಕೆ ರಾಜಕಾರಣಿ ಆಗಲು ಯೋಗ್ಯತೆ ಇದಿಯಾ? ಅವರು ರಾಜಕಾರಣ ಬಗ್ಗೆ ಮಾತನಾಡುತ್ತಾ ಇದ್ದಾರೆ ಎಂದು ವಾಗ್ದಾಳಿ ನಜೆಸಿದರು.
12 ವರ್ಷದ ಹಳೆಯ ಕೇಸನ್ನು ಬಿಜೆಪಿಯವರು ಸ್ವಾರ್ಥಕ್ಕೆ ತಂದಿದ್ದಾರೆ. ಬಿಜೆಪಿ ಅವರು ಸ್ವಂತ ಶಕ್ತಿ ಮೇಲೆ ಯಾವಾಗ ಅಧಿಕಾರಕ್ಕೆ ಬಂದಿದ್ದಾರಾ? ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ಜನರು ಅಧಿಕಾರ ಕೊಟ್ಟಿದ್ದಾರೆ. ಬಿಜೆಪಿಯವರು ಇದನ್ನು ಹಾಳು ಮಾಡ್ತಿದ್ದಾರೆ. ಬಿಜೆಪಿ ಅವರಿಗೆ ಪ್ರಜಾಪ್ರಭುತ್ವ ಅರ್ಥನೆ ಗೊತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತನಿಖೆ ಮಾಡಬೇಕಾಗಿತ್ತು ಎಂದು ಅವರು ತಿಳಿಸಿದರು.
ಬಿಜೆಪಿ ಕಪ್ಪು ವಾಷಿಂಗ್ ಮೆಷಿನ್ ಹಾಕಿ ಬೆಳ್ಳಗೆ ಮಾಡಿದ್ದಾರೆ
ಈ ಹಿಂದೆ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ರಾಜೀನಾಮೆ ಕೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಫ್ಐಆರ್ ಆಗಿ ಬೇಲ್ ತೆಗೆದುಕೊಂಡಿದ್ದಾರೆ. ಅವರನ್ನು ಮತ್ತೆ ಬಿಜೆಪಿ ಸಿಎಂ ಮಾಡಿಲ್ಲವಾ? ಎಷ್ಟು ಕಪ್ಪು ಇರೋದನ್ನು ಬಿಜೆಪಿ ವಾಷಿಂಗ್ ಮೆಷಿನ್ ಹಾಕಿ ಬೆಳ್ಳಗೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಯಾವುದೇ ಹಗರಣ ಇರಲಿ. ನಿರ್ದಾಕ್ಷಿಣ್ಯವಾಗಿ ಪಕ್ಷಾತೀತವಾಗಿ ಸರ್ಕಾರ ಆಕ್ಷನ್ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯರಿಗೆ ಇನ್ನೂ ಆಯ್ಕೆ ಇದೆ. ಕೋರ್ಟ್ ನಲ್ಲಿ ಅಪರಾಧಿ ಅಂತಾದರೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಿರಪರಾಧಿ ಅಂದರೆ ಬಿಜೆಪಿಯ ಎಲ್ಲರು ರಾಜೀನಾಮೆ ಕೊಡ್ತಾರಾ? ಬಿಜೆಪಿಯವರು ಇದೇ ರೀತಿ ನಾಲ್ಕು ವರ್ಷ ಇದನ್ನೇ ಮಾಡಿಕೊಂಡು ಕೂರಲಿ ಎಂದು ಅವರು ಕುಟುಕಿದರು.
ನಾನು ಖರ್ಗೆ ಭೇಟಿಯಾಗುತ್ತೇನೆ
ಮಲ್ಲಿಕಾರ್ಜುನ್ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೂ ಹೋಗಿ ಭೇಟಿಯಾಗುತ್ತೇನೆ. ಇದಕ್ಕೆ ಬೇರೆ ಚಿತ್ರಣ ಕೊಟ್ಟರೆ ತಪ್ಪು. ಸರ್ಕಾರ ಒಳ್ಳೆಯ ರೀತಿ ನಡೆಯುತ್ತಿದೆ. ಯಾರು ಬೇಕಾದರು ಭೇಟಿ ಮಾಡಬಹುದು. ಇದಕ್ಕೆ ಪರ್ಮಿಷನ್ ಕೇಳಬೇಕಾಗಿಲ್ಲ. ಹೈಕಾಮಾಂಡ್ ನಲ್ಲಿ ಎಲ್ಲರು ಹಕ್ಕನ್ನು ಕೇಳುತ್ತಾರೆ, ಪ್ರತಿಪಾದಿಸುತ್ತಾರೆ. ಕೊಡುವುದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸದ್ಯಕ್ಕೆ ಸಿದ್ದರಾಮಯ್ಯ ಒಳ್ಳೆಯ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇನ್ನು ಒಂದು ವರ್ಷ ಅವಕಾಶ ಕೊಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಅಧಿಕಾರದ ವಿಚಾರವಾಗಿ ಹೇಳಿಲ್ಲ. ನಿರಪರಾಧಿ ಅಂತ ಪ್ರೂವ್ ಮಾಡಲು ಒಂದು ವರ್ಷ ಅಂತ ಹೇಳಿದ್ದಾರೆ. ಅವರು ಮಾತನಾಡಿರುವುದು ಅಧಿಕಾರ ವಿಚಾರ ಅಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷ ಗೆಲ್ಲುವ ಅಭ್ಯರ್ಥಿ ನಿಲ್ಲಿಸುತ್ತೆ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಗೆಲ್ಲುವ ಅಭ್ಯರ್ಥಿ ನಿಲ್ಲಿಸುತ್ತೆ. ಇದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಇದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಿಖಿಲ್ ಸ್ಪರ್ಧೆ ಬಗ್ಗೆ ನನ್ನ ಕೇಳಿದರೆ ಹೇಗೆ? ಅವರ ವಿರುದ್ಧ ಕೌಂಟರ್ ಸ್ಪರ್ಧಿ ಅಲ್ಲ, ನಮ್ಮ ಅಭ್ಯರ್ಥಿ ಗೆಲ್ಲುವ ಕೆಲಸ ಮಾಡುತ್ತೇವೆಎಂದರು.