ಸಾರಾಂಶ
ಎನ್‌ಡಿಎ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮತ್ತು ಇತರೆ ಹಲವು ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರನ್ನು ಸೆಳೆಯಲು ಯೋಜಿಸಿದೆ ಎನ್ನಲಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಪಡೆಯಲು ವಿಫಲವಾಗುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಟಿಡಿಪಿ ಮತ್ತು ಜೆಡಿಯು ಮೇಲೆ ಪೂರ್ಣ ಅವಲಂಬನೆ ಅನಿವಾರ್ಯ ಎಂಬುದು ಖಚಿತವಾಗುತ್ತಲೇ, ಎನ್‌ಡಿಎ ಮೈತ್ರಿಕೂಟ ವಿಸ್ತರಣೆಗೆ ಬಿಜೆಪಿ ಮುಂದಾಗಿದೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮತ್ತು ಇತರೆ ಹಲವು ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರನ್ನು ಸೆಳೆಯಲು ಬಿಜೆಪಿ ಯೋಜಿಸಿದೆ ಎನ್ನಲಾಗಿದೆ.ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನ ಅಗತ್ಯ. ಬಿಜೆಪಿ ಗೆದ್ದಿರುವುದು 240 ಸ್ಥಾನ. ಸರಳ ಬಹುಮತಕ್ಕೆ ಅಗತ್ಯವಾದ ಉಳಿದ 32 ಸ್ಥಾನಕ್ಕಾಗಿ 16 ಸ್ಥಾನ ಗೆದ್ದಿರುವ ಟಿಡಿಪಿ ಮತ್ತು 12 ಸ್ಥಾನ ಗೆದ್ದ ಜೆಡಿಯು ಬೆಂಬಲ ಅತ್ಯಗತ್ಯ.
ಈ ಎರಡೂ ಪಕ್ಷಗಳು ನಮ್ಮ ಬೆಂಬಲ ಎನ್‌ಡಿಎಗೆ ಎಂದು ಈಗಾಗಲೇ ಘೋಷಣೆ ಮಾಡಿವೆಯಾದರೂ ಉಭಯ ಪಕ್ಷಗಳ ಇತಿಹಾಸ ಇಂಥ ಮಾತಿನ ಮೇಲೆ ಬಿಜೆಪಿ ವಿಶ್ವಾಸ ಇಡುವುದು ಕಷ್ಟ ಎನ್ನುವಂತಿದೆ.ಹೀಗಾಗಿಯೇ 9 ಸ್ಥಾನಗಳನ್ನು ಗೆದ್ದಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಮರಳಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ನಡುವೆ ಸಂಪರ್ಕ ಇರುವ ವ್ಯಕ್ತಿಯ ಮೂಲಕ ಈಗಾಗಲೇ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ. ವಿಶೇಷವೆಂದರೆ ಬುಧವಾರ ನಡೆದ ಇಂಡಿಯಾ ಮೈತ್ರಿಕೂಟದ ಸಭೆಗೆ ಉದ್ಧವ್ ಗೈರಾಗಿದ್ದಾರು. ಇನ್ನು ರಾಜಸ್ಥಾನದ ಹನುಮಾನ್ ಬೇನಿವಾಲ್ ಕೂಡಾ ಬುಧವಾರದ ಸಭೆಗೆ ಗೈರಾಗಿದ್ದರು ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ.ಉಳಿದಂತೆ ಸಣ್ಣಪುಟ್ಟ ಪಕ್ಷಗಳು, ಕೆಲ ಪಕ್ಷೇತರರ ಜೊತೆಗೂ ಬಿಜೆಪಿ ಸಂಪರ್ಕ ಬೆಳೆಸಿದೆ ಎಂದು ವರದಿಗಳು ಹೇಳಿವೆ.