ಸಾರಾಂಶ
ಕೋಲಾರ : ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಪರವಾಗಿ ಶನಿವಾರ ಶಾಲಾ ಕಾಲೇಜುಗಳಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತಯಾಚನೆ ನಡೆಸಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಪ್ರತಿನಿಧಿಯಾಗಿ ಸ್ವತಃ ಶಿಕ್ಷಣ ಸಂಸ್ಥೆ ನಡೆಸುವ ಡಿ.ಟಿ. ಶ್ರೀನಿವಾಸ್ ಅಭ್ಯರ್ಥಿಯಾಗಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿ ಇದ್ದು ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ಹೆಚ್ಚಳ ಮಾಡಿದೆ ಎಂದರು.
ಕಾಂಗ್ರೆಸ್ ಬೆಂಬಲಿಸಲು ಮನವಿ
ಮುಂದಿನ ದಿನಗಳಲ್ಲಿ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಲಾಗುವುದು. ದಯವಿಟ್ಟು ಕಾಂಗ್ರೆಸ್‌ಗೆ ಮತ ನೀಡಿ. ಶಿಕ್ಷಕರ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ಸಮರ್ಥವಾಗಿ ಕಾಂಗ್ರೆಸ್ ಅಭ್ಯರ್ಥಿ ನಿಭಾಯಿಸಬಲ್ಲರು, ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಕರ ಪರವಾಗಿ ನಿಲ್ಲುವಂತಹ ಅಭ್ಯರ್ಥಿ ಎಂದರು.
ಈ ನಂಬಿಕೆಯ ನೆಲೆಗಟ್ಟಿನಲ್ಲಿ ಶಿಕ್ಷಕರು ಕಳೆದ ಮೂರು ಬಾರಿ ಆಯ್ಕೆ ಮಾಡಿದ್ದರೂ ಸಮಸ್ಯೆಗಳು ಪರಿಹಾರವಾಗಿಲ್ಲ. ನೂತನ ಪಿಂಚಣಿ ನೀತಿಯಿಂದ ನಿವೃತ್ತ ಶಿಕ್ಷಕರು, ನೌಕರರು ಬದುಕುವುದು ದುಸ್ತರವಾಗಿದೆ, ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಪದ್ಧತಿ ಜಾರಿಗೆ ತರಬೇಕು, ಆಳುವ ಪಕ್ಷವಿರುವ ಕಾರಣ ಶಿಕ್ಷಕರಿಗೆ ಅನುಕೂಲವಾಗುವುದರಿಂದ ಶಿಕ್ಷಕರು ಡಿ.ಟಿ ಶ್ರೀನಿವಾಸ್‌ರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಕಾರ್ಪೊರೇಟ್ ಸಂಸ್ಥೆಗಳ ಪರ
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಎನ್‌ಇಪಿ ಮೂಲಕ ನಾಶಗೊಳಿಸಲು ಹೊರಟಿದೆ ಕೇವಲ ಉಳ್ಳವರಿಗೆ ಶಿಕ್ಷಣವಾಗಿ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ, ಕೆಳವರ್ಗದ ಜನರಿಗೆ ಭವಿಷ್ಯ ಇಲ್ಲದ ರೀತಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಎಸ್‌ಇಪಿ ಮೂಲಕ ಭರವಸೆ ಮೂಡಿಸಿದೆ. ಶಿಕ್ಷಕರಿಗೆ ನೂರಾರು ಸಮಸ್ಯೆಗಳಿವೆ. ಬೋಧನೆಯನ್ನು ಮಾಡಲು ಸ್ವಾತಂತ್ರ್ಯಇಲ್ಲ. ಶಿಕ್ಷಕರಿಗೆ ಮಾನಸಿಕ ನೆಮ್ಮದಿ ಮುಖ್ಯ. ಕಳೆದ ಬಿಜೆಪಿ ಸರ್ಕಾರ ಶಿಕ್ಷಕರಿಗೆ ನೀಡಿದ್ದ ಕಾಲ್ಪನಿಕ ವೇತನ ಬಡ್ತಿಯನ್ನು ತಡೆಹಿಡಿಯಲು ಆದೇಶಿಸಿತು. ಇದನ್ನು ಸರಿಪಡಿಸಲು ಶ್ರೀನಿವಾಸ್ ಆಯ್ಕೆ ಅವಶ್ಯಕತೆಯಿದೆ ಗೆಲ್ಲಿಸಿ ಎಂದರು.ಕೋಚಿಮುಲ್ ನಿರ್ದೇಶಕ ಯೂಸುಫ್ ಷರೀಫ್, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜನಪನಹಳ್ಳಿ ನವೀನ್ ಕುಮಾರ್, ಮುಖಂಡರಾದ ವೈ.ಶಿವಕುಮಾರ್, ರಾಜಕುಮಾರ್ ಇದ್ದರು.