ಸಾರಾಂಶ
‘ಜಮೀನು ಕೊಟ್ಟವರಿಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ನಿವೇಶನ ನೀಡಬೇಕು ಎಂಬ ಕಾನೂನು ತಂದಿದ್ದೇ ಬಿಜೆಪಿ ಸರ್ಕಾರ. ಮುಡಾ ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ನಾಯಕರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರು : ‘ಜಮೀನು ಕೊಟ್ಟವರಿಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ನಿವೇಶನ ನೀಡಬೇಕು ಎಂಬ ಕಾನೂನು ತಂದಿದ್ದೇ ಬಿಜೆಪಿ ಸರ್ಕಾರ. ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ನಾಯಕರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆಗಿದ್ದರೆ ಪತ್ತೆ ಹಚ್ಚಲು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ವಹಿಸಲಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ವಹಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲವನ್ನೂ ಸಿಬಿಐಗೆ ಹಸ್ತಾಂತರಿಸಲು ಕೇಳುವುದು ಯಾಕೆ? ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ ಹಸ್ತಾಂತರ ಮಾಡಿರಲಿಲ್ಲ. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಕಾನೂನು ತಂದಿದ್ದೇ ಬಿಜೆಪಿ. ಹೀಗಿದ್ದರೂ ಯಾಕೆ ಈ ರಾಜಕೀಯ ಎಂದು ಕಿಡಿಕಾರಿದ್ದಾರೆ.
‘ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ನಿವೇಶನ ಹಂಚಿಕೆ ವೇಳೆ ಜವಾಬ್ದಾರಿಯಲ್ಲಿದ್ದ ಎಲ್ಲಾ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ. ತನಿಖಾ ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಕೊಡಿ ಅಂದರೆ ರಾಜೀನಾಮೆ ಕೊಡಲಾಗುತ್ತಾ?:
ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ತಮ್ಮ ರಾಜೀನಾಮೆಗೆ ಒತ್ತಾಯಿಸಿರುವ ಬಗ್ಗೆ ಮಾತನಾಡಿದ ಅವರು, ‘ನಾನು ಯಾಕೆ ರಾಜೀನಾಮೆ ನೀಡಬೇಕು? ನನ್ನ ಪಾತ್ರವೇನಿದೆ? ಅಶೋಕ್ ಶಾಸಕರಾಗಿದ್ದಾಗ ಭೂ ಮಂಜೂರಾತಿ ಅಕ್ರಮ ಮಾಡಿದ್ದಾರೆ ಎಂಬ ಆರೋಪ ಇದೆ. ಇದಕ್ಕೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅದಕ್ಕೆ ರಾಜೀನಾಮೆ ಕೊಡಿ ಎಂದರೆ ಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕುರಿತ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿ, ‘ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯ ಇಲ್ಲ, ಹೀಗಾಗಿ ಇದೆಲ್ಲಾ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಎಸ್‌ಐಟಿ ರಚನೆ ಮಾಡಿ ತನಿಖೆಗೆ ವಹಿಸಲಾಗಿದೆ.
ಡೆತ್‌ನೋಟ್‌ನಲ್ಲಿ ಮಂತ್ರಿಗಳು ಎಂದಿರುವ ಕಾರಣಕ್ಕೆ ಹೆಸರು ಇಲ್ಲದಿದ್ದರೂ ಬಿ.ನಾಗೇಂದ್ರ ಅವರ ರಾಜೀನಾಮೆ ತೆಗೆದುಕೊಳ್ಳಲಾಗಿದೆ. ಬಿಜೆಪಿಯವರು ಮಾಡುತ್ತಿರುವ ಆರೋಪ ನಿಜವಾಗಿದ್ದರೆ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ನೋಡೋಣ. ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಿಬಿಐ ಕೂಡ ತನಿಖೆ ಕೈಗೊಂಡಿದೆ. ಹಗರಣ ಆಗಿದ್ದರೆ ಸಾಬೀತುಪಡಿಸಲಿ ಬಿಡಿ’ ಎಂದರು.ಉತ್ತರ ಪ್ರದೇಶದಲ್ಲಿ 110 ಮಂದಿ ಸಾವನ್ನಪ್ಪಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಎಲ್ಲದಕ್ಕೂ ರಾಜೀನಾಮೆ ಕೇಳುತ್ತಾರಲ್ಲ. ಇದರಲ್ಲಿ ಯಾರು ರಾಜೀನಾಮೆ ಕೊಡಬೇಕು? ಬಿಜೆಪಿಯವರಿಗೆ ರಾಜೀನಾಮೆ ಕೇಳಲು ಹೇಳಿ’ ಎಂದು ತಿರುಗೇಟು ನೀಡಿದರು.