ಮುಡಾ ಹೋರಾಟಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿಂದಲೇ ಒತ್ತಡ

| Published : Jul 25 2024, 01:17 AM IST

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಮಾಡಬೇಕು ಎಂದು ಕಾಂಗ್ರೆಸ್‌ನಿಂದಲೇ ಒತ್ತಾಯ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಮಾಡಬೇಕು ಎಂದು ಕಾಂಗ್ರೆಸ್‌ನಿಂದಲೇ ಒತ್ತಾಯ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಡಾ ಹಗರಣ ನಡೆದಿಲ್ಲ ಎನ್ನುವ ಧೈರ್ಯವಿದ್ದರೆ ಮುಖ್ಯಮಂತ್ರಿಗಳು ಚರ್ಚೆಗೆ ಅವಕಾಶ ನೀಡಬೇಕಿತ್ತು. ಆದರೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಮುಖ್ಯಮಂತ್ರಿಗಳ ಕುಟುಂಬಕ್ಕೆ ಮೈಸೂರಿನಲ್ಲಿ ಮುಡಾದಿಂದ ಕೊಟ್ಟ 14 ನಿವೇಶನಗಳನ್ನು ವಾಪಸ್ ನೀಡಬೇಕು ಮತ್ತು ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಬಡವರ ನಿವೇಶನಗಳನ್ನು ಮನಸೋ ಇಚ್ಛೆ ಹಂಚಿಕೆ ಮಾಡಿರುವ ಕುರಿತು ಜನರು ನಮ್ಮನ್ನು ಕೇಳುತ್ತಿದ್ದಾರೆ. ಮುಡಾದಲ್ಲಿ ಮುಖ್ಯಮಂತ್ರಿಗಳ ಕುಟುಂಬವು ನಿವೇಶನ ಪಡೆದ ಕುರಿತು ಚರ್ಚಿಸಲು ಮುಂದಾದರೆ, ತನಿಖಾ ಆಯೋಗದ ಮುಂದೆ ಹೋಗಿ ಎಂದು ಕಾನೂನು ಸಚಿವರು ಹೇಳುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಯಾವ ತನಿಖಾ ಆಯೋಗದ ಪರಿಸ್ಥಿತಿ ಏನಾಗಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಕಿಡಿಕಾರಿದರು.

ಮೂಡ ಹಗರಣದ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಿದರೂ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ದಲಿತರು, ಬಡವರಿಗೆ ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಇನ್ನು, ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ವಿರುದ್ಧ ಎಫ್ಐಆರ್ ದಾಖಲಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಕೋರ್ಟ್ ಛೀಮಾರಿ ಹಾಕಿದ್ದು, ಸರ್ಕಾರಕ್ಕೆ ಮುಖಭಂಗವಾಗಿದೆ ಎಂದರು.