ಡಿಕೆಸು ವಿರುದ್ಧ ಮಂಜುನಾಥ್‌ ಕಣಕ್ಕಿಳಿಸಲು ಬಿಜೆಪಿ ಪ್ರಯತ್ನ

| Published : Feb 15 2024, 01:31 AM IST / Updated: Feb 15 2024, 02:56 PM IST

DK Suresh CN Manjunath

ಸಾರಾಂಶ

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್ ಅವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಮಿತ್ರ ಪಕ್ಷ ಬಿಜೆಪಿ ಪಾಳೆಯದಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್ ಅವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಮಿತ್ರ ಪಕ್ಷ ಬಿಜೆಪಿ ಪಾಳೆಯದಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಲ್ಲದಿದ್ದರೆ ಬಿಜೆಪಿ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯಲಿ ಎಂಬ ಪ್ರಯತ್ನವನ್ನು ಪಕ್ಷದ ನಾಯಕರು ನಡೆಸಿದ್ದಾರೆ. ಆದರೆ, ಮಂಜನಾಥ್ ಅವರು ಇನ್ನೂ ಸ್ಪರ್ಧೆಗೆ ಒಲವು ತೋರಿಲ್ಲ ಎನ್ನಲಾಗಿದೆ.

ಹಾಲಿ ಈ ಕ್ಷೇತ್ರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೋದರ ಡಿ.ಕೆ.ಸುರೇಶ್‌ ಪ್ರತಿನಿಧಿಸುತ್ತಿದ್ದು, ಈ ಬಾರಿಯೂ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ.

ಜನಪ್ರಿಯ ವ್ಯಕ್ತಿತ್ವ:

ಸುಮಾರು ಎರಡು ದಶಕಗಳ ಕಾಲ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಡಾ.ಮಂಜುನಾಥ್‌ ಅವರು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದವರು. ಹೀಗಾಗಿ, ಅವರನ್ನು ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಮುಂದುವರೆದಿದೆ.

ಈ ಮೊದಲು ಹಾಸನ ಲೋಕಸಭಾ ಕ್ಷೇತ್ರದಿಂದ ಮಂಜುನಾಥ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಹಾಸನ ಅವರ ತವರು ಜಿಲ್ಲೆ ಕೂಡ ಹೌದು. ಮೇಲಾಗಿ ಅಲ್ಲಿ ಜೆಡಿಎಸ್‌ನ ಹಾಗೂ ಮಂಜುನಾಥ್ ಅವರ ಕುಟುಂಬದ ಪ್ರಜ್ವಲ್ ರೇವಣ್ಣ ಅವರು ಹಾಲಿ ಸಂಸದರಾಗಿರುವುದರಿಂದ ಸಹಜವಾಗಿಯೇ ನಿರಾಕರಿಸಿದರು.

ರಾಜ್ಯಸಭೆ ಸಿಗದ ಹಿನ್ನೆಲೆ ಲೋಕಸಭೆ:

ಮಂಜುನಾಥ್ ಅವರು ರಾಜ್ಯಸಭೆ ಪ್ರವೇಶಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದುಂಟು. ಆದರೆ, ಈಗ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯೂ ಅಂತಿಮಗೊಂಡಿದ್ದು, ಪ್ರಕ್ರಿಯೆ ಮುಗಿದಿದೆ. ಹೀಗಾಗಿ, ಮತ್ತೆ ಲೋಕಸಭಾ ಚುನಾವಣೆಗೆ ಅವರನ್ನು ಎ‍ಳೆದು ತರುವ ಬಗ್ಗೆ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದುವರೆಗೆ ಮಂಜುನಾಥ್‌ ಅವರು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೆ, ಅವರ ಕುಟುಂಬ ಸದಸ್ಯರಲ್ಲಿ ರಾಜಕೀಯಕ್ಕೆ ಕಳುಹಿಸುವ ಇಚ್ಛೆಯಂತೂ ಇದೆ. 

ಪಕ್ಷದ ವರಿಷ್ಠ ದೇವೇಗೌಡ ಅವರ ಬಳಿ ಈ ಬಗ್ಗೆ ಮಾತುಕತೆ ಸಹ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ದೇವೇಗೌಡರ ಅಳಿಯ ಎಂಬ ವಿಚಾರ ಮಾತ್ರವಲ್ಲದೇ, ಮಂಜುನಾಥ್ ವೈಯಕ್ತಿಕವಾಗಿ ರಾಜ್ಯದ ಜನತೆಯ ಮನದಲ್ಲಿ ತಮ್ಮದೇ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. 

ಜಯದೇವ ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಮೂಲಕ ರಾಜ್ಯಕ್ಕೆ ಚಿರಪರಿಚಿತ ವ್ಯಕ್ತಿತ್ವವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್‌ ಮುಷ್ಠಿಯಲ್ಲಿದ್ದರೂ, ಕ್ಷೇತ್ರದ ಜನರನ್ನು ಸೆಳೆಯುವ ವ್ಯಕ್ತಿತ್ವ ಮಂಜುನಾಥ್‌ ಹೊಂದಿದ್ದಾರೆ. 

ಅಲ್ಲದೇ, ಕೆಲವೆಡೆ ಜೆಡಿಎಸ್‌ ಪ್ರಾಬಲ್ಯ ಇದೆ. ಇನ್ನು ಕೆಲವು ಕ್ಷೇತ್ರದಲ್ಲಿ ಬಿಜೆಪಿಯ ಮತಗಳು ಸಹ ಇವೆ. ಅವುಗಳನ್ನು ಮೈತ್ರಿಯಾಗಿ ಕ್ರೋಢೀಕರಿಸಲು ಅನುಕೂಲವಾಗಲಿದೆ ಎಂಬ ಲೆಕ್ಕಚಾರ ನಡೆದಿದೆ.

ಸದ್ಯಕ್ಕೆ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಪಿಯೋಗೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 

ಮಂಜುನಾಥ್ ಅವರು ಯೋಗೇಶ್ವರ್ ಅವರಿಗಿಂತ ಹೆಚ್ಚು ವರ್ಚಸ್ಸು ಹೊಂದಿದವರು ಮತ್ತು ಕ್ಷೇತ್ರದ ಮತದಾರರು ಇಬ್ಬರ ಪೈಕಿ ಮಂಜುನಾಥ್ ಅವರನ್ನು ಹೆಚ್ಚು ಬೆಂಬಲಿಸಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿಯೇ ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.