ಸಾರಾಂಶ
ಕೋಲಾರ : ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ ಅನುದಾನ ನೇರವಾಗಿ ಚೆಕ್‌ಗಳ ಮೂಲಕ ದುರ್ಬಳಕೆಯಾಗಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯರ ಗಮನಕ್ಕೆ ಬಾರದೆ ನಡೆದಿರಲು ಸಾಧ್ಯವಿಲ್ಲ. ಹಾಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜು.೧೫ರಂದು ವಿಧಾನಸೌಧ ಮುತ್ತಿಗೆ ಹಾಕಿ ಸಿಎಂ ರಾಜೀನಾಮೆಗೆ ಒತ್ತಾಯಿಸುವುದಾಗಿ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಹಾಗೂ ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಬಳ್ಳಾರಿವರೆಗೆ ಪಾದಯಾತ್ರೆಯ ಮಾಡಿದ್ದ ಇದೇ ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ಮಾಡುತ್ತಿರುವುದು ಏನೆಂದು ಪ್ರಶ್ನಿಸಿದರು.
ಉಳಿದ ಹಣ ಎಲ್ಲಿ ಹೋಯ್ತು?
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ ನೇರವಾಗಿ ತಮಗೆ ಬೇಕಾದವರಿಗೆ ಚೆಕ್‌ಗಳನ್ನು ನೀಡಿದೆ, ಫೈನಾನ್ಸ್ ಹೆಸರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಹಾಗೂ ಜ್ಯೂವೆಲರಿ ಶಾಪ್‌ಗಳಿಗೆ ಚೆಕ್ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ, ಇದು ಕೇವಲ ೨೦ ಕೋಟಿ ರೂ. ಮಾತ್ರವಾಗಿದೆ ಉಳಿದ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ಮೈಸೂರಿನ ಮುಡಾದಲ್ಲಿನ ನಿವೇಶ ಹಂಚಿಕೆಯಲ್ಲಿ ಸಿದ್ದರಾಮಯ್ಯರ ಕುಟುಂಬದವರು ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಈಗ ನಿವೇಶನಗಳನ್ನು ಬಿಟ್ಟು ಕೊಡಲು ೬೮ ಕೋಟಿ ಸರ್ಕಾರ ಕೊಟ್ಟರೆ ಬಿಟ್ಟು ಕೊಡುವುದಾಗಿ ಹೇಳುವುದಕ್ಕೆ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು.
ಪರಿಶಿಷ್ಟರ ಹಣವೂ ದುರ್ಬಳಕೆ
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಡೆತ್ ನೋಟ್‌ನಿಂದ ಈ ಪ್ರಕರಣ ಬಹಿರಂಗವಾಯಿತು ಎಸ್.ಸಿ.ಎಸ್.ಟಿ. ಅಭಿವೃದ್ದಿ ನಿಗಮದಲ್ಲಿ ೧೪ ಸಾವಿರ ರೂ. ದುರ್ಬಳಕೆಯಾದರೂ ಸಮುದಾಯದವರು ಈ ಬಗ್ಗೆ ಯಾವುದೇ ಚಕಾರ ಎತ್ತದಿರುವುದು ಅಚ್ಚರಿಯ ಸಂಗತಿ ಎಂದರು.ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ, ರಾಜ್ಯದಲ್ಲಿ ಜನ ವಿರೋಧಿ ಸರ್ಕಾರವಾಗಿ ಮಾರ್ಪಾಡಾಗಿದೆ. ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್ ಚುನಾವಣೆಯ ನಂತರ ಸ್ಥಗಿತಗೊಳಿಸಿದೆ, ಸಂವಿಧಾನಕ್ಕೆ ಧಕ್ಕೆಯಾಗುವ ರೀತಿ ಹೇಳಿಕೆ ನೀಡಿದವರಿಗೆ ನಾವು ಟಿಕೆಟ್ ನೀಡಲಿಲ್ಲ, ಆದರೆ ಇವರು ರೈತರಿಗೆ, ದಲಿತರಿಗೆ ಸಾಮಾನ್ಯ ಬಡ ಜನತೆಗೆ ಅನ್ಯಾಯ ವಂಚನೆಗಳನ್ನು ಮಾಡುತ್ತಾ ಜನವಿರೋಧಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಮುತ್ತಿಗೆಗೆ ಕೈಜೋಡಿಸಲು ಮನವಿ
ಕಾಂಗ್ರೆಸ್ ದುರಾಡಳಿತ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲು ಎಲ್ಲರೂ ಧ್ವನಿ ಎತ್ತುವ ಕಾಲ ಸನ್ನಿತವಾಗಿದೆ. ಇದಕ್ಕೆ ಜು.೧೫ರಂದು ಸಾವಿರಾರು ಸಂಖ್ಯೆ ವಿಧಾನ ಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಮಾಲೂರು ವೇಮಣ್ಣ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಶಿಳ್ಳಂಗೆರೆ ಮಹೇಶ್, ತಿಮ್ಮರಾಯಪ್ಪ, ಪ್ರವೀಣಗೌಡ, ರಾಜೇಶ್ ಸಿಂಗ್, ಓಹಿಲೇಶ್ ಇದ್ದರು.