ಸಾರಾಂಶ
ಬಿಜೆಪಿಯ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ಪಕ್ಷ ಭಾರೀ ಹುಮಸ್ಸಿನಲ್ಲಿ ಇರುವ ಹೊತ್ತಿನಲ್ಲೇ ಅವರು ನೀಡಿರುವ ಈ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸಂಡೂರು : ಬಿಜೆಪಿಯ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೂರು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ಪಕ್ಷ ಭಾರೀ ಹುಮಸ್ಸಿನಲ್ಲಿ ಇರುವ ಹೊತ್ತಿನಲ್ಲೇ ಅವರು ನೀಡಿರುವ ಈ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಗೌರಿಬಿದನೂರು, ಹರಪನಹಳ್ಳಿ ಬಂಡಾಯ ಅಭ್ಯರ್ಥಿಗಳು ಹಾಗೂ ಕೆಲ ಬಿಜೆಪಿ ಸ್ನೇಹಿತರು ನಮ್ಮ ಜತೆ ಸಂಪರ್ಕದಲ್ಲಿ ಇದ್ದಾರೆ. ಆದರೆ ಅವರ ಅಗತ್ಯ ನಮಗೆ ಇಲ್ಲ’ ಎಂದು ಹೇಳಿದರು.
ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ದೇವೇಗೌಡರು, ಬಿಜೆಪಿಯವರು ಇನ್ನು 6 ತಿಂಗಳಲ್ಲಿ ನಮ್ಮ ಸರ್ಕಾರ ಕಿತ್ತೊಗೆಯುತ್ತೇವೆ ಎಂದು ಹೇಳುತ್ತಿದ್ದರು. 140ಕ್ಕೂ ಹೆಚ್ಚು ಶಾಸಕರಿರುವ ನಮ್ಮ ಸರ್ಕಾರ ಬೀಳಿಸಲು ಸಾಧ್ಯವೇ ಇಲ್ಲ ಎಂದು ಅವರು ಸವಾಲು ಹಾಕಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ ಅವರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಇತಿಹಾಸ ನಿರ್ಮಿಸಿದ್ದೀರಿ ಎಂದ ಅವರು, ಜನರು ಗ್ಯಾರಂಟಿಗೆ ಮತ ಹಾಕಿದ್ದಾರೆ. ಉಪ ಚುನಾವಣೆ ಮೂರೂ ಕ್ಷೇತ್ರದಲ್ಲಿನ ಗೆಲುವು ನಮ್ಮ ವಿಶ್ವಾಸ ಹೆಚ್ಚಿಸಿದೆ ಎಂದರು.
ಡಿಕೆಶಿ ಹೇಳಿದ್ದೇನು?
ದೇವೇಗೌಡರು, ಬಿಜೆಪಿ ಇನ್ನು 6 ತಿಂಗಳಲ್ಲಿ ಸರ್ಕಾರ ಪತನ ಅಂತಿದ್ದಾರೆ
140 ಸ್ಥಾನ ಗೆದ್ದ ನಮ್ಮ ಸರ್ಕಾರ ಉರುಳಿಸೋ ಖಂಡಿತಾ ಸಾಧ್ಯವಿಲ್ಲ
ಬಿಜೆಪಿ ಶಾಸಕರೇ ನಮ್ಮ ಸಂಪಕದಲ್ಲಿ ಇದ್ದಾರೆ: ಆದರೆ ನಮಗೆ ಅವರ ಅಗತ್ಯವಿಲ್ಲ: ಡಿಕೆಶಿ