ಸಾರಾಂಶ
ಬೆಂಗಳೂರು : ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದೆ ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಸೇವೆ ಮತ್ತು ಬದ್ಧತೆಗೆ ಹೆಸರಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಬಡವಾಗಿಸಿದೆ. ಸಂಸ್ಥೆಯ ನೌಕರರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಕಿಡಿಕಾರಿದ್ದಾರೆ.
ಸಾರಿಗೆ ನಿಗಮಗಳ ನೌಕರರು ಸಂಕಷ್ಟಗಳ ನಡುವೆ ತಮ್ಮ ಸೇವಾ ನಿಷ್ಠೆಯನ್ನು ಸಂಯಮದಿಂದ ಮುಂದುವರೆಸಿಕೊಂಡು ಬಂದಿದ್ದರೂ ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕಾದ ಸರ್ಕಾರ ವೇತನ ಪರಿಷ್ಕರಣೆ ಮಾಡದೆ, ಬರೋಬ್ಬರಿ 38 ತಿಂಗಳ ಬಾಕಿ ವೇತನವನ್ನೂ ಬಿಡುಗಡೆ ಮಾಡಿಲ್ಲವೆಂದರೆ ಸಂಬಳವನ್ನೇ ನಂಬಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳ ಸ್ಥಿತಿ ಹೇಳತೀರದಾಗಿದೆ ಎಂದು ಹೇಳಿದ್ದಾರೆ.
ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡದೇ ನೌಕರರ ಹಿತಾಸಕ್ತಿಯನ್ನು ತಾತ್ಸಾರದಿಂದ ನೋಡುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಳ್ಳದೆ ಹೋದರೆ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಿಂದ ಉಂಟಾಗುವ ಅನಾನುಕೂಲ ಪರಿಸ್ಥಿತಿ ಹಾಗೂ ಜನರಿಗೆ ಉಂಟಾಗುವ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.