ಸಾರಾಂಶ
ಕರಸೇವಕರ ಬಂಧನ ವಿರೋಧಿ ಬಿಜೆಪಿ ಪ್ರತಿಭಟನೆ; ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವ, ಮಧ್ಯಪ್ರವೇಶಕ್ಕೆ ರಾಜ್ಯಪಾಲರಿಗೆ ಮನವಿ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಮಜನ್ಮಭೂಮಿ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯೇಂದ್ರ, ಶ್ರೀನಗರದ ಲಾಲ್‍ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್ ಜೋಷಿಯವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ರಾಜ್ಯ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ಬಿಡುಗಡೆವರೆಗೂ ಈ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಮೊಘಲರ ಆಡಳಿತ, ತಾಲಿಬಾಲ್ ಆಡಳಿತ ಇದೆಯೇ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿದೆ. ಎಲ್ಲ ಕಡೆ ಉತ್ಸಾಹ, ಸಂತಸದ ವಾತಾವರಣ ಇದೆ. ರಾಜ್ಯ, ದೇಶದಲ್ಲಿ ಹಬ್ಬದ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ, ಪ್ರಭು ಶ್ರೀರಾಮಚಂದ್ರ ವಿರೋಧಿ ಸರ್ಕಾರವು ಮಂತ್ರಾಕ್ಷತೆ ಕೊಡುವುದನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.ಕೀಳುಮಟ್ಟದ ರಾಜಕಾರಣ:
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಸಿದ್ದರಾಮಯ್ಯ ಸರ್ಕಾರವು ತಮ್ಮ ಕೀಳುಮಟ್ಟದ ರಾಜಕಾರಣವನ್ನು ಬಿಡಬೇಕು ಎಂದು ತೀಕ್ಷ್ಣವಾಗಿ ಹೇಳಿದರು.ಕಾಂಗ್ರೆಸ್ ಪಕ್ಷದ ನೀತಿ ಕುಲಗೆಟ್ಟದ್ದು. ಹಿಜಾಬ್ ಪರ, ಶ್ರೀರಾಮನ ವಿರುದ್ಧ ನೀತಿಯಿಂದ ಜನತೆ ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟಾಗಿದ್ದಾರೆ. ಹಿಂದುಗಳು ತೂಕಡಿಕೆ ಬಿಡಬೇಕು. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ರಕ್ಷಿಸಲು ನಾವು ಕಟಿಬದ್ಧರಾಗಬೇಕು ಎಂದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ. 1992ರಲ್ಲಿ ಕರಸೇವಕರನ್ನು ಹತ್ಯೆ ಮಾಡಲು ಮುಂದಾಗಿತ್ತು. ಈಗ ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.ಪಕ್ಷದ ಮುಖಂಡರಾದ ಎನ್.ರವಿಕುಮಾರ್, ಪಿ.ಸಿ.ಮೋಹನ್, ಪ್ರೀತಮ್ ಗೌಡ, ರವಿಸುಬ್ರಹ್ಮಣ್ಯ, ಛಲವಾದಿ ನಾರಾಯಣಸ್ವಾಮಿ, ನಂದೀಶ್ ರೆಡ್ಡಿ, ಪಿ.ರಾಜೀವ್, ಎನ್.ಆರ್.ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.