ಬಿಜೆಪಿಯಿಂದ ‘ಎತ್ನಾಳ್‌’ : ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ಯತ್ನಾಳ್‌ಗೆ ಶಿಕ್ಷೆ

| N/A | Published : Mar 27 2025, 06:06 AM IST

BasavanaGowda Patel Yatnal
ಬಿಜೆಪಿಯಿಂದ ‘ಎತ್ನಾಳ್‌’ : ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ಯತ್ನಾಳ್‌ಗೆ ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ. ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಿರುವುದು ಇದು ಮೂರನೇ ಬಾರಿ.

ಬೆಂಗಳೂರು :  ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ. ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಿರುವುದು ಇದು ಮೂರನೇ ಬಾರಿ.

ಪದೇ ಪದೇ ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ ಯತ್ನಾಳ್ ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಕಳೆದ ಫೆ.10ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನೀಡಿದ ವಿವರಣೆಯನ್ನು ಪರಿಗಣಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಶಿಸ್ತನ್ನು ಪದೇ ಪದೆ ಉಲ್ಲಂಘಿಸಿರುವುದು, ಹಿಂದೆ ಶೋಕಾಸ್ ನೋಟಿಸ್ ನೀಡಿದ ಬಳಿಕವೂ ಉತ್ತಮ ನಡವಳಿಕೆ ಪ್ರದರ್ಶಿಸದೇ ಇರುವುದನ್ನು ಉಲ್ಲೇಖಿಸಲಾಗಿದೆ.

ಕಾಕತಾಳೀಯ ಎಂಬಂತೆ ಬುಧವಾರ ಯತ್ನಾಳ್ ಮತ್ತು ವಿಜಯೇಂದ್ರ ಇಬ್ಬರೂ ನಾಯಕರು ಅನ್ಯ ಕಾರ್ಯದ ನಿಮಿತ್ತ ದೆಹಲಿಯಲ್ಲೇ ಇದ್ದರು.

ಕಳೆದ ಬಾರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೆಲದಿನಗಳಲ್ಲೇ ಅವರ ವಿರುದ್ಧ ಹೇಳಿಕೆ ನೀಡತೊಡಗಿದ ಯತ್ನಾಳ್ ಅವರು ಮುಂದೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮತ್ತಷ್ಟು ಕಿಡಿಕಾರತೊಡಗಿದರು. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಚಾಮಗೋಚರವಾಗಿ ಟೀಕಿಸುತ್ತಿದ್ದ ಅವರಿಗೆ ಪಕ್ಷದ ವರಿಷ್ಠರು ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಿದರೂ ಅದಕ್ಕೆ ಕ್ಯಾರೆ ಎನ್ನಲಿಲ್ಲ.

ಕೆಲದಿನಗಳ ಕಾಲ ಮೌನವಾಗಿರುತ್ತಿದ್ದ ಯತ್ನಾಳ್ ಅವರು ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸುತ್ತಿದ್ದರು. ಲೋಕಸಭಾ ಚುನಾವಣೆ ಬಳಿಕ ಬಹಿರಂಗ ಹೇಳಿಕೆಗಳನ್ನು ತೀವ್ರಗೊಳಿಸಿದ ಯತ್ನಾಳ್‌ ಅವರು ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸತೊಡಗಿದರು.

ಇದಕ್ಕೆ ಪೂರಕ ಎಂಬಂತೆ ವಕ್ಫ್ ಆಸ್ತಿ ವಿವಾದದ ವೇಳೆ ಅವರಿಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್‌, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ಬಿ.ವಿ.ನಾಯಕ್‌, ಬಿ.ಪಿ.ಹರೀಶ್‌ ಮೊದವಲಾದವರು ಸಕ್ರಿಯವಾಗಿ ಜತೆಗೂಡಿದರು. ರಾಜ್ಯ ಪ್ರವಾಸ ಕೈಗೊಂಡರು. ಹೋದಲ್ಲೆಲ್ಲ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡಿದರು.

ಇದೆಲ್ಲವನ್ನೂ ವರಿಷ್ಠರ ಗಮನಕ್ಕೆ ಬಂದ ಬಳಿಕ ಕಳೆದ ತಿಂಗಳು ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದೀಗ ಅಂತಿಮವಾಗಿ ಉಚ್ಚಾಟನೆಯಾಗಿದೆ.

 ಒಂದೇ ದಿನಕ್ಕೆ ಕರಗಿದ ಸಂತಸ

  ಬೆಂಗಳೂರು :  ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಡಿ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಆದೇಶದ ಸುದ್ದಿ ಅವರ ಬಣದ ಮುಖಂಡರಿಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು, ನಿರಾಸೆಯ ಛಾಯೆ ಆವರಿಸುವಂತೆ ಮಾಡಿದೆ.

ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗರೂ ಆಗಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಹೈಕಮಾಂಡ್‌ನಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಯತ್ನಾಳ್ ಬಣದಲ್ಲಿ ಸಂತಸ ಉಂಟಾಗಿತ್ತು. ಇನ್ನೇನು ತಮ್ಮ ಬೇಡಿಕೆ ಈಡೇರಬಹುದು ಎಂಬ ಉತ್ಸಾಹ ಹೆಚ್ಚಿತ್ತು.

ಆದರೆ, ಆ ಉತ್ಸಾಹ ಒಂದಿನ ದಿನವೂ ಉಳಿಯಲಿಲ್ಲ. ಬುಧವಾರ ಸಂಜೆ ಹೊತ್ತಿಗೆ ತಮ್ಮ ಬಣದ ನಾಯಕ ಯತ್ನಾಳ್ ಅವರನ್ನೇ ಉಚ್ಚಾಟಿಸುವ ಆದೇಶ ಹೊರಬೀ‍ಳುತ್ತದೆ ಎಂಬ ಸಣ್ಣ ಸುಳಿವೂ ಮುಖಂಡರಿಗೆ ಸಿಕ್ಕಿರಲಿಲ್ಲ. ಹೈಕಮಾಂಡ್ ತಮ್ಮ ಪರವಾಗಿ ನಿಲ್ಲಲಿದೆ ಎಂಬ ನಿರೀಕ್ಷೆಯಲ್ಲಿದ್ದ ಯತ್ನಾಳ್ ಬಣದ ಮುಖಂಡರಿಗೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.

ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್‌, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ಬಿ.ವಿ.ನಾಯಕ್‌, ಬಿ.ಪಿ.ಹರೀಶ್‌ ಮತ್ತಿತರರಿಗೂ ಇದೀಗ ಆತಂಕ ಶುರುವಾಗಿದೆ. ಒಂದು ವೇಳೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವ ನಿರ್ಧಾರ ಹೊರಬಿದ್ದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಅವರು ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ದೂರವಾಣಿ ಮೂಲಕ ಪರಸ್ಪರ ಸಮಾಲೋಚನೆ ನಡೆಸಿರುವ ಮುಖಂಡರು ಯತ್ನಾಳ್ ಬೆಂಗಳೂರಿಗೆ ವಾಪಸಾದ ಬಳಿಕ ಒಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ. ಆದರೆ, ಮಾಧ್ಯಮಗಳಿಂದ ದೂರ ಉಳಿದು ತಂತ್ರಗಾರಿಕೆ ಮುಂದುವರೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಯತ್ನಾಳ್‌ ಬಂಡಾಯದ ಹಾದಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಅವರ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದ ಯತ್ನಾಳ್‌

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸತತವಾಗಿ ಅವರ ವಿರುದ್ಧ ಬಹಿರಂಗ ಹೇಳಿಕೆ, ಭಿನ್ನಮತೀಯ ಚಟುವಟಿಕೆ ಮೂಲಕ ಸಕ್ರಿಯ

ಪಕ್ಷದ ವಿಷಯ ಆಂತರಿಕ ಚರ್ಚಿಸಿ. ಬಹಿರಂಗ ಚರ್ಚೆ ಮೂಲಕ ಪಕ್ಷಕ್ಕೆ ಮುಜುಗರ ತರಬೇಡಿ ಎಂದು ಹೈಕಮಾಂಡ್‌ ಸೂಚಿಸಿದರೂ ಮಾತು ಕೇಳದೇ ಮೊಂಡಾಟ

ಈ ಬಗ್ಗೆ ನೀಡಿದ ನೋಟಿಸ್‌ನಲ್ಲೂ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡು ಪಕ್ಷದ ಹೈಕಮಾಂಡ್‌ಗೆ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರದ ಮಾಜಿ ಸಚಿವ

ಭಿನ್ನಮತ ಮುಂದುವರೆಯಲು ಬಿಟ್ಟರೆ ಪಕ್ಷಕ್ಕೆ ಇನ್ನಷ್ಟು ಹಾನಿ ಎಂದು ಉಚ್ಚಾಟನೆಯ ಕಠಿಣ ಶಿಕ್ಷೆ ಪ್ರಕಟಿಸಿದ ಹೈಕಮಾಂಡ್‌. ಈ ಮೂಲಕ ಉಳಿದವರಿಗೂ ಸಂದೇಶ

ವಿಜಯೇಂದ್ರ ಆಪ್ತ ರೇಣುಕಾಚಾರ್ಯಗೆ ಶಿಸ್ತು ಸಮಿತಿ ನೋಟಿಸ್‌ ಬಳಿಕ ಸಂಭ್ರಮದಲ್ಲಿ ಭಿನ್ನಮತೀತರ ತಂಡ

ನೋಟಿಸ್‌ ತಮ್ಮ ಬೇಡಿಕೆ ಈಡೇರಿಕೆ ಭಾಗವಾಗಿರಬಹುದು. ಸಂಭ್ರಮದ ಸಮಯ ಹತ್ತಿರವಿರಬಹುದೆಂಬ ನಿರೀಕ್ಷೆ

ಆದರೆ ಬುಧವಾರ ತಮ್ಮ ನಾಯಕನನ್ನೇ ಉಚ್ಚಾಟಿಸಿದ ಹೈಕಮಾಂಡ್‌ ನಿಲುವಿನಿಂದ ಯತ್ನಾಳ್ ಬಣಕ್ಕೆ ಶಾಕ್‌

ಒಂದು ವೇಳೆ ವಿಜಯೇಂದ್ರರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ ತಮ್ಮ ಕಥೆ ಏನೆಂದು ಆಪ್ತ ವಲಯದಲ್ಲಿ ಚರ್ಚೆ]

ಯತ್ನಾಳ್‌ ಉಚ್ಚಾಟನೆ  3 ನೇ ಬಾರಿ

ಯತ್ನಾಳ್ ಅವರಿಗೆ ಬಿಜೆಪಿಯ ಉಚ್ಚಾಟನೆ ಹೊಸದೇನಲ್ಲ. ಮೊದಲ ಬಾರಿ 2009ರಲ್ಲಿ ಯಡಿಯೂರಪ್ಪ ಮತ್ತು ಅಂದಿನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ‌ ಉಚ್ಚಾಟನೆಗೊಂಡಿದ್ದರು. ಬಳಿಕ ಎರಡನೇ ಬಾರಿ 2016ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ‌ ಸ್ಪರ್ಧಿಸಿದ್ದಾಗ ಉಚ್ಚಾಟನೆಯಾದರು. ಈಗ ಮೂರನೇ ಬಾರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಪದೇ ಪದೆ ಹೇಳಿಕೆ ನೀಡಿದ ಪರಿಣಾಮ ಉಚ್ಚಾಟನೆ ಕ್ರಮ ಎದುರಿಸಬೇಕಾಗಿದೆ.

ಯತ್ನಾಳ್‌ ಸುದ್ದಿ ಕೋಟ್ಸ್‌ ಶಿಸ್ತುಕ್ರಮ ದುರದೃಷ್ಟಕರ: ರಾಜ್ಯಾಧ್ಯಕ್ಷ ವಿಜಯೇಂದ್ರ

ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ. ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಶಿಸ್ತುಬದ್ಧ ಸಂಘಟನೆಯ ವ್ಯವಸ್ಥೆಯಲ್ಲಿರುವ ನಾವು ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರ ಗೌರವಿಸುತ್ತೇನೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವರಿಷ್ಠರು ತೆಗೆದುಕೊಂಡಿರುವ ಕ್ರಮವನ್ನು ನಾನು ಸಂಭ್ರಮಿಸಲಾರೆ. ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ.

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಸತ್ಯವಂತರಿಗೆ ಕಾಲವಲ್ಲ

ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, ಪಕ್ಷದೊಳಗಿನ ಸುಧಾರಣೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆಯನ್ನು ತೆಗೆದುಹಾಕಿ ಮತ್ತು ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. ಇದ್ದಿದ್ದು ಇದ್ದ ಹಾಗೆ ನಾನು ಹೇಳಿರುವ ವಿಚಾರಕ್ಕೆ ಪಕ್ಷ ಈ ಪ್ರತಿಫಲ ನೀಡಿದೆ. ಅಮಾನತು ನಿರ್ಧಾರ ನನ್ನ ಹೋರಾಟ ನಿಲ್ಲಿಸಲ್ಲ.

- ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ