ಗ್ಯಾರಂಟಿಗೆ ದಲಿತ ಸಮುದಾಯಗಳ ಕಲ್ಯಾಣ ನಿಗಮಗಳ ಹಣ ಬಳಕೆಗೆ ಬಿಜೆಪಿ ಕಿಡಿ : ಪ್ರತಿಭಟನೆ

| N/A | Published : Mar 01 2025, 01:03 AM IST / Updated: Mar 01 2025, 04:59 AM IST

ಸಾರಾಂಶ

ದಲಿತ ಸಮುದಾಯಗಳ ಕಲ್ಯಾಣಕ್ಕೆಂದು ಮೀಸಲಾಗಿರುವ ಎಸ್ಸಿ,ಎಸ್ಟಿ-ಟಿಎಸ್‌ಪಿ ಹಣವನ್ನು ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಶುಕ್ರವಾರ ಬಳ್ಳಾರಿ, ಉಡುಪಿ, ಚಾಮರಾಜನಗರಗಳಲ್ಲಿ ಪ್ರತಿಭಟನೆ ನಡೆಸಿದರು. 

 ಬೆಂಗಳೂರು : ದಲಿತ ಸಮುದಾಯಗಳ ಕಲ್ಯಾಣಕ್ಕೆಂದು ಮೀಸಲಾಗಿರುವ ಎಸ್ಸಿ,ಎಸ್ಟಿ-ಟಿಎಸ್‌ಪಿ ಹಣವನ್ನು ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಶುಕ್ರವಾರ ಬಳ್ಳಾರಿ, ಉಡುಪಿ, ಚಾಮರಾಜನಗರಗಳಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇದೊಂದು ದಲಿತ ವಿರೋಧಿ ಸರ್ಕಾರ ಎಂದು ಕಿಡಿ ಕಾರಿದರು.

ಬಳ್ಳಾರಿಯಲ್ಲಿ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕನಕ ದುರ್ಗಮ್ಮ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಟ ಪಕ್ಷದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮನವಿ ಪತ್ರ ಸಲ್ಲಿಸಿದರು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದರಾದ ರಮೇಶ್‌ ಜಿಗಜಿಣಗಿ, ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಪಾಲ್ಗೊಂಡಿದ್ದರು.

ಚಾಮರಾಜನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳಿಗೆ ವಿನಿಯೋಗಿಸಬೇಕಾದ ಅನುದಾನವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸುವ ಮೂಲಕ ತಾವೇ ಮಾಡಿದ ಕಾನೂನನ್ನು ಉಲ್ಲಂಘನೆ ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜನಾಂದೋಲನ ಹಮ್ಮಿಕೊಂಡಿದ್ದೇವೆ ಎಂದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಬಳಿಕ ತಾನು ನೀಡಿದ ಭರವಸೆಗಳನ್ನು ಈಡೇರಿಸಲು ಹರಸಾಹಸ ಮಾಡುತ್ತಿದೆ. ಯೋಜನೆಗಳ ಜಾರಿಗೆ ಹಣವಿಲ್ಲದೆ ದಲಿತರ ಅಭಿವೃದ್ಧಿಗೆಂದು ಮೀಸಲಾಗಿರುವ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಈಗಾಗಲೇ ಬಳಸಿಕೊಂಡಿದೆ ಎಂದು ಕಿಡಿ ಕಾರಿದರು.