ಸಾರಾಂಶ
ಬೆಂಗಳೂರು : ಗ್ರೇಟರ್ ಬೆಂಗಳೂರು ರಚನೆಗೆ ಪ್ರತಿಪಕ್ಷ ಬಿಜೆಪಿ ಬಲವಾಗಿ ವಿರೋಧಿಸಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರು ಒಡೆಯಲು ಅವಕಾಶ ನೀಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿದೆ.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಬೆಂಗಳೂರಿನ ಮುಖಂಡರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಈ ತೀರ್ಮಾನದ ಕುರಿತ ಸಾಧಕ- ಬಾಧಕಗಳ ವಿಷಯದಲ್ಲಿ ನಗರದ ಪ್ರಮುಖರ ಜೊತೆ ಚರ್ಚೆ ಮಾಡಿದ್ದೇವೆ. ಗ್ರೇಟರ್ ಬೆಂಗಳೂರು ರಚಿಸುವ ಮೂಲಕ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯ ಎಂದು ತಿಳಿಸಿದರು.
ಬೆಂಗಳೂರನ್ನು ಒಡೆಯುವುದು ನಗರದ ಅಭಿವೃದ್ಧಿಯ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಯಾವುದೇ ಕಾರಣಕ್ಕೆ ಇದಕ್ಕೆ ಅವಕಾಶ ಕೊಡಬಾರದು ಎಂದು ಸಭೆಯಲ್ಲಿ ಚರ್ಚೆ ಆಗಿದೆ ಎಂದು ವಿವರಿಸಿದರು.
ಮಾ.3ರಿಂದ ಅಧಿವೇಶನ ಆರಂಭ ಆಗಲಿದೆ. ಬಜೆಟ್ ಮಂಡನೆ ಆಗಲಿದೆ. ಸದನದಲ್ಲಿ ಯಾವ ವಿಚಾರ ಕೈಗೆತ್ತಿಕೊಳ್ಳಬೇಕು, ಯಾವ ವಿಷಯಗಳನ್ನು ಚರ್ಚಿಸಬೇಕು ಎಂಬ ನಿಟ್ಟಿನಲ್ಲಿ ಕೂಡ ನಮ್ಮೆಲ್ಲ ಶಾಸಕರು, ವಿಪಕ್ಷ ನಾಯಕರು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ನಾವು ಗ್ರೇಟರ್ ಬೆಂಗಳೂರು ಮಾಡುತ್ತೇವೆ, ಬೆಂಗಳೂರನ್ನು ಆರೇಳು ಭಾಗಗಳಾಗಿ ವಿಂಗಡಿಸುತ್ತೇವೆ. ಇನ್ನಷ್ಟು ಪ್ರದೇಶಗಳನ್ನು ಬೆಂಗಳೂರಿನ ಒಳಗಡೆ ಸೇರಿಸುವುದಾಗಿ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ಕೊಡುತ್ತಿದ್ದಾರೆ. ಇರುವ ಬೆಂಗಳೂರನ್ನೇ ನಿಮಗೆ ಉದ್ಧಾರ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.
ಬೆಂಗಳೂರನ್ನು ವಿಭಜಿಸಿದರೆ ಅದು ಕೆಂಪೇಗೌಡರಿಗೆ ಅವಮಾನ ಮಾಡಿದಂತೆ. ಕೆಂಪೇಗೌಡರ ವಿಶ್ವಾಸ ಇರುವ ಶೇ 90ರಷ್ಟು ಜನರು ಬೆಂಗಳೂರಿನಲ್ಲಿ ಇದ್ದಾರೆ. ಅವರಿಗೆಲ್ಲ ಘಾಸಿ ಮಾಡುತ್ತಿದ್ದೀರಿ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಟ್ಟಾಗಿ ಇರಬೇಕು ಎಂಬುದು ಎಲ್ಲರ ಅಭಿಲಾಷೆ. ಅದಕ್ಕೇ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದರು.