ಇಂದು ಬೆಳಗ್ಗೆ ಮಹತ್ವಾಕಾಂಕ್ಷಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

| Published : Apr 14 2024, 01:53 AM IST / Updated: Apr 14 2024, 05:24 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಬಿಜೆಪಿ ಭಾನುವಾರ ಬೆಳಗ್ಗೆ 8.30ಕ್ಕೆ ಬಹುನಿರೀಕ್ಷಿತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ವಿಕಸಿತ ಭಾರತ ಹಾಗೂ ಮೋದಿ ಕಿ ಗ್ಯಾರಂಟಿ ಪರಿಕಲ್ಪನೆಗಳು ಪ್ರಮುಖವಾಗಿ ಪ್ರಣಾಳಿಕೆಯಲ್ಲಿ ಬಿಂಬಿತ ಆಗುವ ಸಾಧ್ಯತೆ ಇದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಭಾನುವಾರ ಬೆಳಗ್ಗೆ 8.30ಕ್ಕೆ ಬಹುನಿರೀಕ್ಷಿತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ವಿಕಸಿತ ಭಾರತ ಹಾಗೂ ಮೋದಿ ಕಿ ಗ್ಯಾರಂಟಿ ಪರಿಕಲ್ಪನೆಗಳು ಪ್ರಮುಖವಾಗಿ ಪ್ರಣಾಳಿಕೆಯಲ್ಲಿ ಬಿಂಬಿತ ಆಗುವ ಸಾಧ್ಯತೆ ಇದೆ.

ಅಂಬೇಡ್ಕರ್‌ ಜಯಂತಿಯಂದೇ ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಖುದ್ದು ಹಾಜರಾಗುವ ನಿರೀಕ್ಷೆ ಇದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌ ನೇತೃತ್ವದ 27 ಜನರ ಪ್ರಣಾಳಿಕೆ ಸಮಿತಿ ಜನಾಭಿಪ್ರಾಯ ಸಂಗ್ರಹಿಸಿ, ಇದನ್ನು ಸಿದ್ಧಪಡಿಸಿದೆ. ಬಿಜೆಪಿಗೆ ಒಟ್ಟಾರೆ 15 ಲಕ್ಷ ಅಭಿಪ್ರಾಯಗಳು ಬಂದಿದ್ದು, ಅದರಲ್ಲಿ ನಮೋ ಆ್ಯಪ್‌ ಒಂದರಿಂದಲೇ ಬರೋಬ್ಬರಿ 4 ಲಕ್ಷ ಅಭಿಪ್ರಾಯಗಳು ಸಂಗ್ರಹವಾಗಿವೆ. ಜೊತೆಗೆ 10 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ಸಂದೇಶದ ಮೂಲಕ ಪ್ರಣಾಳಿಕೆಯ ತಯಾರಿಕೆಗೆ ತಮ್ಮ ಸಲಹೆ ನೀಡಿದ್ದಾರೆ.

ಯಾವ ವಿಷಯ ಪ್ರಮುಖ?: ಮೋದಿ ಅವರು ಬಹುವಾಗಿ ಹೇಳುವ ಮೋದಿ ಕಿ ಗ್ಯಾರಂಟಿ ಇದರಲ್ಲಿ ಪ್ರಮುಖವಾಗಿ ಪ್ರಸ್ತಾಪ ಆಗಬಹುದು. ಜತೆಗೆ ರೈತರು ಮಹಿಳೆಯರು, ಬಡವರು ಮತ್ತು ಯುವಜನರ ಏಳಿಗೆಗೆ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಪ್ರಕಟಿಸಿ, 2047ರಲ್ಲಿ ಭಾರತ ಇರಬೇಕಾದ ದೂರದೃಷ್ಟಿಯನ್ನು ಇದು ಒಳಗೊಳ್ಳಲಿದೆ ಎನ್ನಲಾಗಿದೆ.