ಅನುದಾನ ತಾರತಮ್ಯ, ತೆರಿಗೆ ಕಡಿತ ಖಂಡಿಸಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಕ್ಕೆ ತಿರುಗೇಟು ನೀಡಲು ಬಿಜೆಪಿಯು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ವಿಧಾನಸೌಧಕ್ಕೆ ಬೀಗ ಹಾಕುವ ವಿಫಲ ಯತ್ನ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅನುದಾನ ತಾರತಮ್ಯ, ತೆರಿಗೆ ಕಡಿತ ಖಂಡಿಸಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಕ್ಕೆ ತಿರುಗೇಟು ನೀಡಲು ಬಿಜೆಪಿಯು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ವಿಧಾನಸೌಧಕ್ಕೆ ಬೀಗ ಹಾಕುವ ವಿಫಲ ಯತ್ನ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿತು.

ಬುಧವಾರ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶಾಸಕರು ಪ್ರತಿಭಟನೆ ನಡೆಸಿದರು. ರೈತರಿಗೆ ಬರ ಪರಿಹಾರ ನೀಡದ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ಸರ್ಕಾರ ರಾಜ್ಯದಲ್ಲಿದೆ ಎಂದು ಘೋಷಣೆ ಕೂಗಲಾಯಿತು.

ಇನ್ನೇನು ಪ್ರತಿಭಟನೆ ಮುಗಿಯುವ ಹಂತಕ್ಕೆ ಬಂದಾಗ ಬಿಜೆಪಿ ನಾಯಕರು ಹಾಗೂ ಶಾಸಕರು ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕಲು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಇಡೀ ಚಿತ್ರಣವೇ ಬದಲಾಯಿತು. ಪೊಲೀಸರು ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಕಾಳಗ, ನೂಕುನುಗ್ಗಲು ನಡೆಯಿತು.

ವಿಧಾನಸೌಧದೊಳಕ್ಕೆ ಬಿಡಲು ನಿರಾಕರಿಸಿದಾಗ ದಕ್ಷಿಣ ದ್ವಾರದಲ್ಲಿಯೇ ಕುಳಿತು ಸರ್ಕಾರದ ವಿರುದ್ಧ ಬಿಜೆಪಿಗರು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಶಾಸಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಬೀಗ ತಂದಿದ್ದರು: ಬಿಜೆಪಿಗರು ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕಲು ನುಗ್ಗುವ ಸಂಬಂಧ ಮೊದಲೇ ತೀರ್ಮಾನಿಸಿದಂತೆ ಬೀಗಗಳನ್ನು ತಂದಿದ್ದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ ಬಳಿಕ ಇನ್ನೇನು ಪ್ರತಿಭಟನೆ ಮುಕ್ತಾಯವಾಯಿತು ಎನ್ನುವಷ್ಟರಲ್ಲಿ ಚಿತ್ರಣವೇ ಬದಲಾಯಿತು. 

ಬಿಜೆಪಿ ಶಾಸಕರು ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕಲು ವಿಧಾನಸೌಧದೊಳಗೆ ಮುನ್ನುಗ್ಗಿದರು. ಇದಕ್ಕೆ ಪೊಲೀಸರು ಅವಕಾಶ ನೀಡದೆ ತಡೆದರು. ಒಂದು ಹಂತಕ್ಕೆ ವಿಜಯೇಂದ್ರ, ಅಶೋಕ್‌ ಅವರು ಪೊಲೀಸರನ್ನು ತಳ್ಳಿ ಒಳ ಹೋಗಿ ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕುವುದಕ್ಕೆ ನುಗ್ಗಲು ಪ್ರಯತ್ನಿಸಿದರು. ಆದರೆ, ಪೊಲೀಸರು ತಡೆದ ಪರಿಣಾಮ ಸಾಧ್ಯವಾಗಲಿಲ್ಲ. 

ಬಿಜೆಪಿಯ ಇತರೆ ನಾಯಕರು, ಕಾರ್ಯಕರ್ತರು ದಕ್ಷಿಣ ದ್ವಾರಕ್ಕೆ ಬೀಗಹಾಕಲು ಮುಂದಾದಾಗ ಪೊಲೀಸರ ಜತೆ ಜಟಾಪಟಿ ನಡೆಯಿತು. ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.ವಿಧಾನಸೌಧದಕ್ಕೆ ಬೀಗ ಹಾಕುತ್ತೇವೆ ಎಂದು ಬಿಜೆಪಿಗರು ಪಟ್ಟು ಹಿಡಿದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಡೆಗೋಡೆಯಾಗಿ ನಿಂತಿದ್ದರು. 

ಕೇವಲ ಪ್ರತಿಭಟನೆ ನಡೆಸುವುದಾಗಿ ಅನುಮತಿ ಪಡೆದಿರುವುದರಿಂದ ಈ ರೀತಿಯ ನಡೆ ಸಮಂಜಸವಲ್ಲ ಎಂದ ಪೊಲೀಸರು ಅವಕಾಶ ನೀಡುವುದಿಲ್ಲ ಎಂದು ತಡೆದರು. ಪೊಲೀಸರ ಮಾತಿಗೂ ಪ್ರತಿಭಟನಾಕಾರರು ಜಗ್ಗದ ಕಾರಣ ಪೊಲೀಸರು ಬಿಜೆಪಿ ಶಾಸಕರು, ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದರು.

ಪ್ರತಿಭಟನೆ ವೇಳೆ ರೈತರಿಗೆ ಬರ ಪರಿಹಾರ ನೀಡದ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಶಾಸಕರಿಗೆ ಅನುದಾನ ನೀಡುವ ವಿಚಾರದಲ್ಲೂ ತಾರತಮ್ಯ ಎಸಗಿರುವ ಬೇಜವಾಬ್ದಾರಿ ಸರ್ಕಾರ ಎಂದು ಆರೋಪಿಸಲಾಯಿತು. ಬೊಕ್ಕಸ ಬರಿದು ಮಾಡಿಕೊಂಡು ವಿಧಾನಸೌಧ ಖಾಲಿ ಮಾಡಿಕೊಂಡು ದೆಹಲಿ ಚಲೋ ನಾಟಕ ಮಾಡಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕಬೇಕು ಎಂದು ಶಾಸಕರು ಆಗ್ರಹಿಸಿದರು.