ಸಾರಾಂಶ
ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ನಿವಾರಿಸುವ ಹಾಗೂ ಮನವೊಲಿಸುವ ಪ್ರಯತ್ನ ಅಧಿಕೃತವಾಗಿ ಆರಂಭ
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ನಿವಾರಿಸುವ ಹಾಗೂ ಮನವೊಲಿಸುವ ಪ್ರಯತ್ನ ಅಧಿಕೃತವಾಗಿ ಆರಂಭವಾಗಿದ್ದು, ಅತೃಪ್ತರ ಬಣಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ.ಹರೀಶ್ ಅವರೊಂದಿಗೆ ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸಿದರು.
ಇತ್ತೀಚೆಗಷ್ಟೇ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿದಿರುವುದರಿಂದ ಹಲವು ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ಅಸಮಾಧಾನ ತಲೆದೋರಿದೆ. ಜತೆಗೆ ಶೀಘ್ರದಲ್ಲೇ ಜಿಲ್ಲಾ ಪದಾಧಿಕಾರಿಗಳನ್ನು ನೇಮಿಸಬೇಕಾಗಿದೆ. ಹೀಗಾಗಿ, ಜಿಲ್ಲಾ ಮಟ್ಟದಲ್ಲಿ ಒಂದು ಸಮರ್ಥ ತಂಡ ರಚಿಸುವ ಉದ್ದೇಶದಿಂದ ಅಡೆತಡೆಗಳನ್ನು ನಿವಾರಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಗುರುವಾರ ಸಿದ್ದೇಶ್ವರ್ ಮತ್ತು ಹರೀಶ್ ಅವರನ್ನು ಪಕ್ಷದ ಕಚೇರಿಗೆ ಆಹ್ವಾನಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವರೂ ಆಗಿರುವ ಶಾಸಕರಾದ ಸಿ.ಟಿ.ರವಿ, ವಿ.ಸುನೀಲ್‌ಕುಮಾರ್ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಚರ್ಚಿಸಿದರು.
ಸಿದ್ದೇಶ್ವರ್ ಹಾಗೂ ಹರೀಶ್ ಅವರು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂಬ ಬೇಡಿಕೆಯೊಂದಿಗೆ ಪಕ್ಷದಿಂದ ಉಚ್ಚಾಟಿತವಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಯತ್ನಾಳ್ ಉಚ್ಚಾಟನೆ ಬಳಿಕ ತುಸು ಮೆತ್ತಗಾಗಿರುವ ಉಭಯ ಮುಖಂಡರು ಇದೀಗ ಮಾತುಕತೆ ಹಂತಕ್ಕೆ ಬಂದು ನಿಂತಿದ್ದಾರೆ.
ಈ ಮಾತುಕತೆ ವೇಳೆ ದಾವಣಗೆರೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸಿ ತಾವು ಹೇಳಿದವರನ್ನು ನೇಮಿಸಬೇಕು. ಜತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೂ ಕಾರಣಕರ್ತರಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೇಡಿಕೆಗಳನ್ನು ಆಲಿಸಿದ ರಾಜ್ಯ ನಾಯಕರು ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿದ ಬಳಿಕ ಬದಲಾವಣೆ ಮಾಡುವುದು ಸರಿಯಲ್ಲ. ಇತರ ಪದಾಧಿಕಾರಿಗಳ ನೇಮಕದಲ್ಲಿ ನಿಮ್ಮ ಅಭಿಪ್ರಾಯ ಪರಿಗಣಿಸಲಾಗುವುದು ಎಂಬ ಮಾತು ಹೇಳಿದ್ದಾರೆ. ಜತೆಗೆ ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವುದು ಕೂಡ ಕಷ್ಟ. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂಬರ್ಥದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನುಳಿದ ಜಿಲ್ಲೆಗಳ ಅಸಮಾಧಾನಿತ ಮುಖಂಡರನ್ನು ಕರೆದು ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.
;Resize=(690,390))
)
;Resize=(128,128))
;Resize=(128,128))
;Resize=(128,128))