ಬಸ್‌ ದರ ಏರಿಕೆ ವಿರುದ್ಧ ಬಿಜೆಪಿ ‘ಗಾಂಧಿಗಿರಿ’ - ಅಶೋಕ್‌ ನೇತೃತ್ವದಲ್ಲಿ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಪ್ರತಿಭಟನೆ

| Published : Jan 04 2025, 09:56 AM IST

Siddaramaiah, R Ashok
ಬಸ್‌ ದರ ಏರಿಕೆ ವಿರುದ್ಧ ಬಿಜೆಪಿ ‘ಗಾಂಧಿಗಿರಿ’ - ಅಶೋಕ್‌ ನೇತೃತ್ವದಲ್ಲಿ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ವರ್ಷದ ಆರಂಭದಲ್ಲೇ ಸರ್ಕಾರಿ ಬಸ್‌ ಪ್ರಯಾಣ ದರ ಹೆಚ್ಚಿಸಿರುವ ಕಾಂಗ್ರೆಸ್‌ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ‘ಗಾಂಧಿಗಿರಿ’ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು : ಹೊಸ ವರ್ಷದ ಆರಂಭದಲ್ಲೇ ಸರ್ಕಾರಿ ಬಸ್‌ ಪ್ರಯಾಣ ದರ ಹೆಚ್ಚಿಸಿರುವ ಕಾಂಗ್ರೆಸ್‌ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ‘ಗಾಂಧಿಗಿರಿ’ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖವಾಡ ಧರಿಸಿ, ಗುಲಾಬಿ ಹೂವು ನೀಡಿ ಜನರಲ್ಲಿ ಕ್ಷಮೆ ಕೇಳುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಮೂಲಕ ಬಸ್ ಟಿಕೆಟ್ ದರ ಏರಿಕೆ ಖಂಡಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಸೇರಿ ಹಲವು ನಾಯಕರು, ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿ ಇತರರು ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ ಹೋಗಿ ‘ಕಾಂಗ್ರೆಸ್‌ ಸರ್ಕಾರ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದು ಮತ ನೀಡಿದ್ದೀರಿ. ಆದರೆ, ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷಕ್ಕೆ ಟಿಕೆಟ್‌ ದರ ಹೆಚ್ಚಳ ಮಾಡಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕ್ಷಮೆ ಕೇಳುತ್ತಿದ್ದೇವೆ’ ಎಂದು ಹೇಳಿ ಗುಲಾಬಿ ಹೂವು ನೀಡಿದರು.

ಹೊಸ ವರ್ಷದ ಉಡುಗೊರೆ:

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆರ್‌.ಅಶೋಕ್‌, ರಾಜ್ಯದ ಏಳು ಕೋಟಿ ಜನ ಹೊಸ ವರ್ಷದ ಉಡುಗೊರೆಗಾಗಿ ಕಾಯುತ್ತಿದ್ದರು. ಪ್ರಧಾನಿ ಮೋದಿ ಅವರು ಹೊಸ ವರ್ಷಕ್ಕೆ ರೈತರಿಗೆ ಯೋಜನೆಗಳನ್ನು ನೀಡುವ ಮೂಲಕ ನಿಜವಾದ ಕೊಡುಗೆ ಕೊಟ್ಟಿದ್ದಾರೆ. ಆದರೆ, ದಿ ಗ್ರೇಟ್ 14 ಬಜೆಟ್‌ ಚಾಂಪಿಯನ್ ಸಿದ್ದರಾಮಯ್ಯ ಬಸ್ ದರ ಏರಿಕೆಯ ಉಡುಗೊರೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಹೆಚ್ಚಳ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಶೂನ್ಯ ಸಾಧನೆ ಮಾಡಿದೆ ಎಂದು ಕಿಡಿಕಾರಿದರು.

ಬಸ್‌ಗಳ ಟಿಕೆಟ್ ದರ ಮಾತ್ರವಲ್ಲದೆ, ಮುಂದಿನ ದಿನದಲ್ಲಿ ಹಾಲಿನ ದರ, ನೀರಿನ ದರವನ್ನೂ ಹೆಚ್ಚಳ ಮಾಡಲಾಗುತ್ತದೆ. ಎಲ್ಲಾ ವಸ್ತುಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಸುವ ಶಪಥ ಮಾಡಲಾಗಿದೆ. ಸಿದ್ದರಾಮಯ್ಯ ಪರವಾಗಿ ಜನರಿಗೆ ತಿಳಿಸಿದ್ದೇನೆ. ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪತ್ನಿಗೆ ಉಚಿತ ಟಿಕೆಟ್ ನೀಡಿ ಪತಿಗೆ ಎರಡುಪಟ್ಟು ಮಾಡಿದರೆ ಜನರ ಹಣವೇ ಖರ್ಚಾಗುತ್ತದೆ. 2025ರಲ್ಲಿ ಎಲ್ಲ ತೆರಿಗೆ ಜಾಸ್ತಿ ಮಾಡುತ್ತೇವೆ. ನಿಮ್ಮ ಕಾಲಿಗೆ ಬೀಳುತ್ತೇವೆ. ಕೈ ಮುಗಿಯುತ್ತೇವೆ ಕ್ಷಮಿಸಿ ಬಿಡಿ ಎಂಬುದು ಸಿದ್ದರಾಮಯ್ಯ ಹೊಸ ಸ್ಲೋಗನ್ ಎಂದು ಲೇವಡಿ ಮಾಡಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹೆಣ್ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿ, ಪುರುಷರಿಗೆ ಬರೆ ಹಾಕುವ ಸರ್ಕಾರ ಇದು. ಗ್ಯಾರಂಟಿ ಕಾರಣಗಳಿಂದ ಜನ ದುಬಾರಿ ಬೆಲೆ ತೆರಬೇಕಾಗಿದೆ. ಹಾಲಿನ ದರ, ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಸ್ಟ್ಯಾಂಪ್‌ ಡ್ಯೂಟಿ, ರಿಜಿಸ್ಟ್ರೇಶನ್ ಶುಲ್ಕ ಮಾತ್ರವಲ್ಲದೆ ವಿವಿಧ ತೆರಿಗೆಗಳನ್ನೂ ಹೆಚ್ಚಿಸಲಾಗಿದೆ ಎಂದು ಟೀಕಿಸಿದರು.

ಮುಟ್ಟಿದರೆ ಹುಷಾರ್: ಪೊಲೀಸರ ವಿರುದ್ಧ ಅಶೋಕ್‌ ಗರಂ

‘ಯಾರಾದರೂ ಮುಟ್ಟಿದರೆ ಹುಷಾರ್‌, ಕೋರ್ಟ್‌ನಲ್ಲಿ ನಿಲ್ಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಅಶೋಕ್‌ ಪೊಲೀಸರಿಗೆ ಆವಾಜ್ ಹಾಕಿದ ಪ್ರಸಂಗ ಈ ವೇಳೆ ನಡೆಯಿತು.

ಬಸ್‌ ಪ್ರಯಾಣ ದರ ಹೆಚ್ಚಳ ವಿರೋಧಿಸಿ ಮೆಜೆಸ್ಟಿಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪ್ರಯಾಣಿಕರಿಗೆ ಹೂವು ನೀಡಲು ಮುಂದಾದಾಗ ಪೊಲೀಸರು ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರ ವಿರುದ್ಧ ಗರಂ ಆದ ಆಶೋಕ್‌, ‘ನೀವು ನನ್ನ ಮುಟ್ಟಿದರೆ ನೋಡಿ. ಇಲ್ಲಿ ಯಾರಿಗೂ ತೊಂದರೆ ಕೊಡುತ್ತಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಆದರೆ ಇಲ್ಲಿ ನಾವು ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಜನರಿಗೆ ಹೂವು ನೀಡುತ್ತಿದ್ದೇವೆ. ಅದಕ್ಕೂ ಅಡ್ಡಿಪಡಿಸಿದರೆ ಹುಷಾರ್‌.. ನಿಮ್ಮ ವಿರುದ್ಧ ಕೇಸ್‌ ಹಾಕಿ ಕೋರ್ಟ್‌ನಲ್ಲಿ ನಿಲ್ಲಿಸುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೂವು ನೀಡಬಾರದು ಎಂಬುದನ್ನು ಬರವಣಿಗೆ ರೂಪದಲ್ಲಿ ಕೊಡಿ. ನೀವೇನು ಇಲ್ಲಿಯೇ ಇರುವುದಿಲ್ಲ. ನಾವು ಅಧಿಕಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ. ನಮಗೂ ರಾಜಕಾರಣ ಮಾಡಲು ಬರುತ್ತದೆ. ಪ್ರತಿಭಟನೆ ನಡೆಸುವುದು ನಮ ಹಕ್ಕು. ನಾವು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಈಗ ಯಾವ ನಿರ್ದೇಶನದ ಮೇರೆಗೆ ಅಡ್ಡಿಪಡಿಸುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.