ಷೇರುಪೇಟೆಯಲ್ಲಿ ರಕ್ತಪಾತ! 4389 ಅಂಕ ಕುಸಿತ, 31 ಲಕ್ಷ ಕೋಟಿ ನಷ್ಟ

| Published : Jun 05 2024, 12:31 AM IST / Updated: Jun 05 2024, 04:31 AM IST

ಷೇರುಪೇಟೆಯಲ್ಲಿ ರಕ್ತಪಾತ! 4389 ಅಂಕ ಕುಸಿತ, 31 ಲಕ್ಷ ಕೋಟಿ ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

 ಸೋಮವಾರ 2500 ಅಂಕಗಳ ಭಾರೀ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 4389 ಅಂಕಗಳ ಭಾರೀ ಕುಸಿತ ಕಂಡು 72079ರಲ್ಲಿ ಮುಕ್ತಾಯವಾಗಿದೆ.   ಹೂಡಿಕೆದಾರರ ಸಂಪತ್ತು 31 ಲಕ್ಷ ಕೋಟಿ ರು.ನಷ್ಟು ಕರಗಿದೆ.

ಮುಂಬೈ: ಎನ್‌ಡಿಎ ಮೈತ್ರಿಕೂಟ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಸೋಮವಾರ 2500 ಅಂಕಗಳ ಭಾರೀ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 4389 ಅಂಕಗಳ ಭಾರೀ ಕುಸಿತ ಕಂಡು 72079ರಲ್ಲಿ ಮುಕ್ತಾಯವಾಗಿದೆ. 

ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 31 ಲಕ್ಷ ಕೋಟಿ ರು.ನಷ್ಟು ಕರಗಿ ಹೋಗಿದೆ. ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿ, ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಮತ್ತು ಎನ್‌ಡಿಎಗೆ ನಿರೀಕ್ಷಿತ ಸ್ಥಾನ ಸಿಗದು ಎಂಬ ಸುಳಿವು ಸಿಗುತ್ತಲೇ ಸೆನ್ಸೆಕ್ಸ್‌ ಕುಸಿತ ಆರಂಭವಾಯಿತು. 

ಒಂದು ಹಂತದಲ್ಲಿ ಸೆನ್ಸೆಕ್ಸ್‌ 6234 ಅಂಕ ಕುಸಿದು 5 ತಿಂಗಳ ಕನಿಷ್ಠ ಮಟ್ಟ ತಲುಪಿತ್ತು. ಆದರೆ ಎನ್‌ಡಿಎ ಸರ್ಕಾರ ರಚನೆ ಸಾಧ್ಯತೆ ಖಚಿತವಾದ ಬಳಿಕ ಅಲ್ಪ ಏರಿಕೆ ಕಂಡು ದಿನದಂತ್ಯಕ್ಕೆ 4389 ಅಂಕಗಳಲ್ಲಿ ಕೊನೆಗೊಂಡಿತು.

 ಇದೇ ವೇಳೆ ನಿಫ್ಟಿ ಕೂಡಾ 1982 ಅಂಕ ಇಳಿದು 21884ರಲ್ಲಿ ಕೊನೆಗೊಂಡಿತು. ಸೋಮವಾರ ಭಾರೀ ಏರಿಕೆ ಕಂಡಿದ್ದ ಸಾರ್ವಜನಿಕ ವಲಯದ ಕಂಪನಿ, ಅದಾನಿ ಸಮೂಹದ ಷೇರುಗಳು ಮಂಗಳವಾರ ಭಾರೀ ಇಳಿಕೆ ಕಂಡವು.. ಈ ಹಿಂದೆ 2020ರ ಮಾರ್ಚ್‌ನಲ್ಲಿ ಕೋವಿಡ್‌ ಲಾಕ್ಡೌನ್‌ ಘೋಷಿಸಿದ ವೇಳೆ ಸೆನ್ಸೆಕ್ಸ್‌ ಶೇ.13ರಷ್ಟು ಭಾರೀ ಕುಸಿತ ಕಂಡಿತ್ತು.