ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಬ್ಬಾಳದಲ್ಲಿ 45 ಎಕರೆ ಪಡೆಯುವ ಬೆಂಗಳೂರು ಮೆಟ್ರೋ ರೈಲು ನಿಗಮದ ಬಯಕೆ ಕೊನೆಗೂ ಭಗ್ನವಾಗಿದೆ. ಬದಲಾಗಿ 9 ಎಕರೆಯನ್ನು ನಿಗಮಕ್ಕೆ ಉಚಿತವಾಗಿ ನೀಡುವ ಕುರಿತು ಪರಿಗಣಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಉನ್ನತಮಟ್ಟದ ಸಮಿತಿ ಸೂಚಿಸಿದೆ.ಬಿಎಂಆರ್‌ಸಿಎಲ್‌ಗೆ ಅಗತ್ಯ ಭೂಮಿ ಕೊಡದಿರುವ ಹಿಂದೆ ರಿಯಲ್ ಎಸ್ಟೇಟ್ ಲಾಬಿ, ಸ್ವಹಿತಾಸಕ್ತಿ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.
ಜುಲೈ 14ರಂದು ನಡೆದ ಬಿಎಂಅರ್‌ಸಿಎಲ್‌ನ 49ನೇ ಉನ್ನತ ಅಧಿಕಾರ ಸಮಿತಿ ಸಭೆ 9 ಎಕರೆಯನ್ನು ಬಿಎಂಆರ್‌ಸಿಎಲ್‌ಗೆ ನೀಡುವ ತೀರ್ಮಾನಕ್ಕೆ ಬಂದಿದೆ. ಈ ಸಂಬಂಧ ಮುಂದಿನ ಕ್ರಮಕ್ಕಾಗಿ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ, ಕೈಗಾರಿಕಾ ಇಲಾಖೆ, ಅರಣ್ಯ ಇಲಾಖೆಗೆ ಪತ್ರ ಬರೆದಿದೆ.ಟನಲ್ ರೋಡ್‌ನ ಪ್ರವೇಶ, ನಿರ್ಗಮನ ದ್ವಾರ, ರ್‍ಯಾಂಪ್, ಲೂಪ್ಸ್ ಕೂಡ ಇಲ್ಲೇ ನಿರ್ಮಾಣ ಆಗಬೇಕು. ಟನಲ್ ರೋಡ್‌ಗೆ ಸುರಂಗ ಕೊರೆವ ಟಿಬಿಎಂ ಯಂತ್ರಗಳು ಇಲ್ಲಿಂದಲೆ ಇಳಿಯಬೇಕು. ಮುಖ್ಯವಾಗಿ ಕೆಐಎಡಿಬಿ ಬಳಿಯಿರುವ ಹೆಬ್ಬಾಳದ ಭೂಮಿ ಇನ್ನೂ ಏಕಗವಾಕ್ಷಿ ಅಡಿಯಿದ್ದು, ಇದನ್ನು ಹಸ್ತಾಂತರ ಮಾಡಿದಲ್ಲಿ ಕಾನೂನು ತೊಡಕು ಎದುರಾಗುವ ಸಾಧ್ಯತೆಯಿದೆ ಎಂದು ಈ ಹಿಂದಿನ ಸಭೆಗಳಲ್ಲಿ ಚರ್ಚೆಯಾಗಿತ್ತು. ಇವು ಸೇರಿ ಇತರೆ ಕಾರಣ ಇಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.
ಬಾಕ್ಸ್....ಯೋಜನಾ ವಿನ್ಯಾಸ ಬದಲು:ಈ ಮೂಲಕ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ 2,3ನೇ ಹಂತದ ಮಾರ್ಗಕ್ಕಾಗಿ ಹೆಬ್ಬಾಳದಲ್ಲಿ ಕೇವಲ ಮಲ್ಟಿ ಮಾಡಲ್ ಇಂಟಿಗ್ರೆಶನ್ ನಿರ್ಮಿಸಲು ಯೋಜನಾ ವಿನ್ಯಾಸ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ. ಈ ಪ್ರಕಾರ ಡಿಪೋ, ಸ್ಟ್ಯಾಬ್ ಲೈನ್ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡಬೇಕಿದೆ. ಉಳಿದಂತೆ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣ ಮಲ್ಟಿ ಲೇವಲ್ ಕಾರ್ ಪಾರ್ಕಿಂಗ್, ಬಸ್ ನಿಲ್ದಾಣ, ಸ್ಕೈ ವಾಕ್ ನಿರ್ಮಿಸಿಕೊಳ್ಳಬೇಕಿದೆ.
ಹಿನ್ನೆಲೆ:ಹೆಬ್ಬಾಳದಲ್ಲಿ ಸರ್ಜಾಪುರ-ಹೆಬ್ಬಾಳ ಮಾರ್ಗದ ನಿಲ್ದಾಣ, ಜೆಪಿ ನಗರ 4 ನೇ ಹಂತ-ಕೆಂಪಾಪುರ ಮತ್ತು ಕೆಆರ್‌ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಗಳಲ್ಲಿನ ಇಂಟರ್‌ಚೇಂಜ್ ನಿಲ್ದಾಣದ ಭೂಮಿ ಉಪಯೋಗಿಸಲು ಉದ್ದೇಶಿಸಲಾಗಿತ್ತು. ಬೆಂಗಳೂರು ಉಪನಗರ ಯೋಜನೆಯ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮಾರ್ಗದ ನಿಲ್ದಾಣ ಹಾಗೂ ಬಿಎಂಟಿಸಿ ನಿಲ್ದಾಣಗಳು ಇಲ್ಲಿ ಸಂದಿಸಲಿವೆ.
ಹೀಗಾಗಿ 2024ರ ಜುಲೈನಲ್ಲಿ ನಮ್ಮ ಮೆಟ್ರೋ 45 ಎಕರೆ ಜಾಗವನ್ನು ಅಂದಾಜು ಒಟ್ಟು ₹ 551.15 ಕೋಟಿ ಖರೀದಿಸಲು ಮುಂದಾಗಿತ್ತು. ಹೆಬ್ಬಾಳದ ಅಮಾನಿಕೆರೆ ಗ್ರಾಮದಲ್ಲಿ 55.1 ಎಕರೆ ಖಾಸಗಿ ಭೂಮಿಯನ್ನು ಕೆಲವು ವರ್ಷಗಳ ಹಿಂದೆ ಲೇಕ್ ವ್ಯೂ ಟೂರಿಸಂ ಕಂಪನಿ ಪಡೆದಿತ್ತು. ಯೋಜನೆ ಕಾರ್ಯಗತಗೊಳಿಸಲು ಕಂಪನಿ ವಿಫಲವಾದ ಹಿನ್ನೆಲೆಯಲ್ಲಿ ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಇದರ ಪರಿಹಾರ ನೀಡಿಕೆ ಬಾಕಿಯಿತ್ತು. ಈ ಭೂಮಿ ಯಾವುದೇ ಬಳಕೆಯಾಗದೆ ಉಳಿದಿತ್ತು. ಈ ಭೂಮಿ ಕೊಡುವಂತೆ ಕಳೆದ ವರ್ಷ ಬಿಎಂಆರ್‌ಸಿಎಲ್ ಕೆಐಎಡಿಬಿಯನ್ನು ಕೇಳಿತ್ತು.