ಸಾರಾಂಶ
ಹಾವೇರಿ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಲ್ಲ. ಕಾಂಗ್ರೆಸ್ಸಿಗರು ಮೊದಲು ಬಜೆಟನ್ನು ಪೂರ್ಣವಾಗಿ ಓದಲಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಕ್ಕೆ ಕೇಂದ್ರದಿಂದ ಅನುದಾನವೇ ಬಂದಿಲ್ಲವೆಂದು ಕಾಂಗ್ರೆಸ್ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರದ ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಬಂದಿದೆ. ಅದೇ ಖಾತೆಗೆ ಈ ಹಿಂದೆ ಯುಪಿಎ ಸರ್ಕಾರ ಎಷ್ಟು ಹಣ ಹಾಕಿದೆ ಎಂಬುದನ್ನೂ ಕಾಂಗ್ರೆಸ್ಸಿನವರು ನೋಡಲಿ ಎಂದು ಕಿಡಿಕಾರಿದರು.
ಕೇಂದ್ರದಿಂದ ಇದುವರೆಗೆ ಕರ್ನಾಟಕಕ್ಕೆ ₹44,870 ಕೋಟಿ ಕೋಡಲಾಗಿದೆ. ಕಳೆದ 3 ವರ್ಷಗಳಿಂದ ರಾಜ್ಯದ ರೈಲ್ವೆ ಯೋಜನೆಗೆ ಪ್ರತಿ ವರ್ಷ ₹7000 ಕೋಟಿ ಬರುತ್ತಿದೆ. ಯುಪಿಎ ಅವಧಿಯಲ್ಲಿ ಕೇವಲ ₹700 ಕೋಟಿ ಬರುತ್ತಿತ್ತು ಎಂದರು.
ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಹಾಗೂ ಭೂಸ್ವಾಧೀನ ಮಾಡಿ ಕೊಡುತ್ತಿಲ್ಲ. ಹಾಗಾಗಿ ಕಾಮಗಾರಿ ವಿಳಂಬವಾಗುತ್ತಿವೆ. ಈ ಬಗ್ಗೆ ಸೋಮವಾರ ಎಲ್ಲ ಮಾಹಿತಿ ಬಿಡುಗಡೆ ಮಾಡುವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಪ್ರಯತ್ನ ಮಾಡಿದರೆ ಕೇಂದ್ರದಿಂದ ಹಣ ಬರುತ್ತದೆ. ಆದರೆ, ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ಆಪಾದನೆ ಮಾಡಿಕೊಂಡು ಕೂತಿದ್ದಾರೆ ಎಂದರು.