ಸಾರಾಂಶ
ಬೆಂಗಳೂರು/ದಾವಣಗೆರೆ : ವಕ್ಫ್ ಹೋರಾಟ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತ್ಯೇಕ ಹೋರಾಟ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸ್ವಪ್ರತಿಷ್ಠೆಗಾಗಿ ನಡೆಸುತ್ತಿರುವ ಹೋರಾಟ ಶಾಸಕ ಯತ್ನಾಳ ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೋರಾಟ ಕೈಬಿಟ್ಟು ನಮ್ಮ ಜತೆ ಸೇರಿ ಕೆಲಸ ಮಾಡುವಂತೆ ಶಾಸಕ ಬಸನಗೌಡ ಯತ್ನಾಳ್‌ಗೆ ಮನವಿ ಮಾಡಿದ್ದಾರೆ. ಆದರೆ ಯತ್ನಾಳ್ ಸ್ವಪ್ರತಿಷ್ಠೆಯಿಂದ ವಕ್ಫ್ ಹೋರಾಟ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಅವರು ಜಾಗೃತರಾಗಿ ಒಟ್ಟಾಗಿ ಪಕ್ಷ ಬಲಪಡಿಸಲು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.
ವಕ್ಫ್ ಹೋರಾಟ ಕೈಬಿಡುವುದಿಲ್ಲ ಎಂಬ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ಪಕ್ಷದ ಕೇಂದ್ರದ ನಾಯಕರಿಗೆ ಬಿಟ್ಟದ್ದು. ಬಿಜೆಪಿಯಲ್ಲಿ ಕೆಲವರು ಒಡಕುಂಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರ ಕೇಂದ್ರದ ವರಿಷ್ಠರಿಗೂ ಗೊತ್ತಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಟ್ಟುಕೊಂಡವರಿಗೆ ಈಗಲೂ ವಿನಂತಿಸುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಚರ್ಚೆ ಮಾಡೋಣ ಬನ್ನಿ. ಏನಾದರೂ ಕೊರತೆ ಇದ್ದರೆ ಸರಿಪಡಿಸಿಕೊಂಡು, ಪಕ್ಷವನ್ನು ಬಲಪಡಿಸಿಕೊಂಡು ಮುಂದೆ ಸಾಗೋಣ ಎಂದು ಇದೇ ವೇಳೆ ಅವರು ಮನವಿ ಮಾಡಿದರು.
ಉಪ ಚುನಾವಣೆಯಲ್ಲಿ ಹಿನ್ನಡೆ:
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಹಿನ್ನಡೆಗೆ ಕಾರಣ ಕುರಿತು ಚರ್ಚೆ ನಡೆಯುತ್ತಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು. ಇಲ್ಲಿ ವಿಜಯೇಂದ್ರ ಅಥವಾ ಯಡಿಯೂರಪ್ಪ ಎಂಬ ಪ್ರಶ್ನೆ ಇಲ್ಲ. ಪಕ್ಷದ ಹಿನ್ನಡೆಗೆ ಎಲ್ಲರೂ ಜವಾಬ್ದಾರರು ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು.
--2ನೇ ದಿನವೂ ಯತ್ನಾಳ್ ಟೀಮ್ ವಕ್ಫ್ ಹೋರಾಟ
- ಕಲಬುರಗಿ ಸ್ಥಳೀಯ ಬಿಜೆಪಿಗರು ಗೈರು- ಪ್ರವಾಸ ಪಕ್ಷವಿರೋಧಿ ಅಲ್ಲ: ಯತ್ನಾಳ್
- ವಕ್ಫ್ ನೋಟಿಸ್ ಬಗ್ಗೆ ಜನಜಾಗೃತಿ ಮೂಡಿಸಲು ಯತ್ನಾಳ್ ತಂಡ ನಡೆಸುತ್ತಿರುವ ಪ್ರವಾಸ- ಬೀದರ್ ಜಿಲ್ಲೆಯ ಬಳಿಕ ನಿನ್ನೆ ಕಲಬುರಗಿ ಜಿಲ್ಲೆಯಲ್ಲಿ ಸಂಚಾರ
- ನಮ್ಮ ಹೋರಾಟ ಪಕ್ಷವಿರೋಧಿ ಅಲ್ಲ, ನಾನೇನೂ ಸಿಎಂ ಅಥವಾ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ: ಯತ್ನಾಳ್- ನಮ್ಮ ಹೋರಾಟಕ್ಕೆ ಬೆಂಬಲ ಹೆಚ್ಚಾಗುತ್ತಿದೆ, ಇದು ಪಕ್ಷ ಬಲಪಡಿಸುವ ಕೆಲಸವಲ್ಲವೇ?
ಕಲಬುರಗಿ : ಬೀದರ್ ಜಿಲ್ಲೆಯಿಂದ ಸೋಮವಾರ ಆರಂಭವಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ತಂಡದ ವಕ್ಫ್ ವಿರುದ್ಧದ ಹೋರಾಟ ಎರಡನೇ ದಿನವಾದ ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸಲೆತ್ನಿಸಿತು. ಮೊದಲ ದಿನದಂತೆ ಕಲಬುರಗಿಯಲ್ಲೂ ಸ್ಥಳೀಯ ಬಿಜೆಪಿ ಶಾಸಕರು, ಮುಖಂಡರು ಯತ್ನಾಳ್ ಹೋರಾಟದಿಂದ ದೂರವುಳಿಯುವ ಮೂಲಕ ಅತೃಪ್ತಿ ಹೊರಹಾಕಿದರು.ವಕ್ಫ್ ವಿರುದ್ಧದ ಜನಾಂದೋಲನದ ಭಾಗವಾಗಿ ಕಲಬುರಗಿ ನಗರ ಮತ್ತು ಚಿಂಚೋಳಿಯಲ್ಲಿ ಪ್ರತಿಭಟನಾ ಯಾತ್ರೆ, ಸಮಾವೇಶ ನಡೆಸಿ ಜನಜಾಗೃತಿ ಮೂಡಿಸಿದ ಯತ್ನಾಳ್ ನೇತೃತ್ವದ ತಂಡ, ಇದೇ ವೇಳೆ ಸಾರ್ವಜನಿಕರಿಂದ ಅಹವಾಲನ್ನೂ ಸ್ವೀಕರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಯಾತ್ನಾಳ್, ತಮ್ಮ ನೇತೃತ್ವದಲ್ಲಿ ನಡೆದಿರುವ ಈ ಹೋರಾಟ ಪಕ್ಷ ವಿರೋಧಿಯಲ್ಲ, ನಾನೇನು ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟು ಈ ಹೋರಾಟ ಶುರು ಮಾಡಿಲ್ಲ ಎಂದು ಸ್ಪಷ್ಪಪಡಿಸಿದರು.ವಕ್ಪ್ ಹೋರಾಟ ಈಗ ಜನಾಂದೋಲನ ಸ್ವರೂಪ ಪಡೆಯುತ್ತಿದೆ, ಇಂತಹ ಹೋರಾಟ ಪಕ್ಷ ವಿರೋಧಿ ಚಟುವಟಿಕೆ ಹೇಗಾಗುತ್ತದೆ? ನಮ್ಮ ಹೋರಾಟಕ್ಕೆ ಬಿಜೆಪಿಯ ಹಲವು ಮೋರ್ಚಾ ಪ್ರಮುಖರು, ಶಾಸಕರು ಬರುತ್ತಿದ್ದಾರೆ. ಪ್ರಧಾನಿ ಮೋದಿಯವರು ಮಂಡಿಸಲು ಹೊರಟಿರುವ ವಕ್ಫ್ ಕಾನೂನಿಗೆ ನಮ್ಮ ಬೆಂಬಲವಿದೆ, ವಕ್ಫ್ ಬಗ್ಗೆ ಅಧ್ಯಯನ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ ನಮ್ಮೆಲ್ಲ ಮಾಹಿತಿ ನೀಡುತ್ತೇವೆ. ಇದು ಪಕ್ಷ ಬಲಪಡಿಸುವ ಕೆಲಸವಲ್ಲವೇ? ನಮ್ಮ ಹೋರಾಟಕ್ಕೆ ಸಾಕಷ್ಟು ರೈತರು, ಸಾರ್ವಜನಿಕರು, ಮಠಾಧೀಶರು ಸೇರುತ್ತಿದ್ದಾರೆ ಎಂದರು.
ಬುಧವಾರ ಯಾದಗಿರಿ, ರಾಯಚೂರು, ನಂತರ ಬಾಗಲಕೋಟೆ ಮಾರ್ಗವಾಗಿ ಸಾಗಿ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದೇವೆಂದರು. ಬೀದರ್‌ನಲ್ಲೂ ಬಿಜೆಪಿ ಸಾಕಷ್ಟು ಜನ ಪ್ರತ್ಯಕ್ಷ, ಪರೋಕ್ಷವಾಗಿ ಈ ಹೋರಾಟಕ್ಕೆ ಬೆಂಬಲಿಸಿದ್ದಾರೆಂದ ಅವರು, ಅನಾಮಿಕರು ಅಂತ ನಮ್ಮನ್ನು ಗುರಿಯಾಗಿಸಿ ಹಲವರು ಮಾತನಾಡಿದ್ದಾರೆ. ಇದಕ್ಕೆಲ್ಲ ಕಾಲವೇ ಉತ್ತರಿಸುತ್ತದೆ ಎಂದರು.ಸ್ಥಳೀಯ ಬಿಜೆಪಿ ಮುಖಂಡರ ಗೈರು: ಯತ್ನಾಳ್ ಬಣದ ಹೋರಾಟದಲ್ಲಿ ಬೀದರ್ ರೀತಿ ಕಲಬುರಗಿಯಲ್ಲೂ ಬಿಜೆಪಿಯ ನಗರ, ಜಿಲ್ಲಾ ಅಧ್ಯಕ್ಷರು, ವಿವಿಧ ಮೋರ್ಚಾಗಳ ಮುಖಂಡರು, ಹಾಲಿ, ಮಾಜಿ ಶಾಸಕರು, ಎಂಎಲ್ಸಿಗಳು ಅಂತರ ಕಾಯ್ದುಕೊಂಡಿದ್ದರು. ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾತ್ರ ಉಪಸ್ಥಿತರಿದ್ದರು.
ಜನಜಾಗೃತಿ ಭಾಗವಾಗಿ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬೃಹತ್ ಪ್ರತಿಭಟನೆ ರ್‍ಯಾಲಿ ನಡೆಸಲಾಯಿತು. ರ್‍ಯಾಲಿಯುದ್ದಕ್ಕೂ ವಕ್ಫ್ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ನಂತರ ಚಿಂಚೋಳಿ ಪಟ್ಟಣದ ವೈಜನಾಥ ಪಾಟೀಲ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.
ಪಕ್ಷದಲ್ಲಿ ಒಡಕು ಮೂಡಿಸುತ್ತಿದ್ದಾರೆ
ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ಪಕ್ಷದ ಕೇಂದ್ರದ ನಾಯಕರಿಗೆ ಬಿಟ್ಟದ್ದು. ಬಿಜೆಪಿಯಲ್ಲಿ ಕೆಲವರು ಒಡಕುಂಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರ ಕೇಂದ್ರದ ವರಿಷ್ಠರಿಗೂ ಗೊತ್ತಿದೆ.
- ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ