ಸಾರಾಂಶ
ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಹೆಚ್ಚು ಆಸ್ಪದ ಕೊಡದೆ ಹಾಗೂ ಕೇವಲ ಸಮೀಕ್ಷೆಗಳನ್ನೇ ಆಧಾರವಾಗಿ ಇಟ್ಟುಕೊಳ್ಳದೆ ಸ್ಥಳೀಯ ನಾಯಕರ ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು ಎಂಬ ಮನವಿಯನ್ನು ಬಿ.ಎಸ್.ಯಡಿಯೂರಪ್ಪ ಅವರು ವರಿಷ್ಠರ ಮುಂದಿಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಬಾರಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಹೆಚ್ಚು ಆಸ್ಪದ ಕೊಡದೆ ಹಾಗೂ ಕೇವಲ ಸಮೀಕ್ಷೆಗಳನ್ನೇ ಆಧಾರವಾಗಿ ಇಟ್ಟುಕೊಳ್ಳದೆ ಸ್ಥಳೀಯ ನಾಯಕರ ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು ಎಂಬ ಮನವಿಯನ್ನು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ವರಿಷ್ಠರ ಮುಂದಿಟ್ಟಿದ್ದಾರೆ.
ಮಂಗಳವಾರ ರಾತ್ರಿಯೇ ದೆಹಲಿಗೆ ತಲುಪಿರುವ ಯಡಿಯೂರಪ್ಪ ಅವರು ಈ ಬಗ್ಗೆ ಪಕ್ಷದ ವರಿಷ್ಠರಿಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ರವಾನಿಸಿದ್ದು, ಗೆಲ್ಲುವ ಮಾನದಂಡಕ್ಕೆ ಹೆಚ್ಚು ಒತ್ತು ನೀಡಬೇಕೆ ಹೊರತು ಹೊಸ ಪ್ರಯೋಗಕ್ಕಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕರ ಅಭಿಪ್ರಾಯಗಳನ್ನು ಕಡೆಗಣಿಸಿ ಕೇವಲ ಸಮೀಕ್ಷೆ ಆಧರಿಸಿದ್ದಲ್ಲದೆ ತಳಮಟ್ಟದ ಮಾಹಿತಿಯಿಲ್ಲದ ನಾಯಕರ ಅಭಿಮತವನ್ನು ನೆಚ್ಚಿಕೊಂಡು ಟಿಕೆಟ್ ನೀಡಿದ್ದರಿಂದ ಪಕ್ಷಕ್ಕೆ ಹೀನಾಯ ಸೋಲುಂಟಾಯಿತು.
ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಅದೇ ಪುನರಾವರ್ತನೆಯಾದರೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಇದೇ ಅಭಿಪ್ರಾಯವನ್ನು ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಬುಧವಾರ ರಾತ್ರಿ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲೂ ಪ್ರಸ್ತಾಪಿಸಿದರು ಎನ್ನಲಾಗಿದೆ.
ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾ ಕೋರ್ ಕಮಿಟಿಗಳ ಮೂಲಕ ಶಿಫಾರಸುಗೊಂಡ ಬಳಿಕ ರಾಜ್ಯ ಕೋರ್ ಕಮಿಟಿ ಎರಡು ದಿನಗಳ ಕಾಲ ಸುದೀರ್ಘ ಸಭೆ ನಡೆಸಿ ಚರ್ಚಿಸಿ ಹೆಸರುಗಳನ್ನು ರಾಷ್ಟ್ರೀಯ ಘಟಕಕ್ಕೆ ಶಿಫಾರಸು ಮಾಡಿತ್ತು.
ಆದರೆ, ಅದರಲ್ಲಿ ಅನೇಕ ಹೆಸರುಗಳನ್ನು ಬದಲಾಯಿಸಿ ಹೊಸ ಪ್ರಯೋಗದ ಹೆಸರಿನಲ್ಲಿ ಬೇರೆಯವರಿಗೆ ಟಿಕೆಟ್ ನೀಡಿದ್ದರಿಂದ ಸಾಕಷ್ಟು ಗೊಂದಲಗಳು ಉದ್ಭವಿಸಿದವು. ಅಂತಿಮವಾಗಿ ಫಲಿತಾಂಶದಲ್ಲಿ ಅದರ ಪರಿಣಾಮ ವ್ಯಕ್ತವಾಯಿತು.
ಹೀಗಾಗಿ, ಇದನ್ನು ಸರಿಪಡಿಸಿಕೊಂಡು ಟಿಕೆಟ್ ಹಂಚಿಕೆ ಮಾಡಬೇಕು ಎಂಬ ಮಾತನ್ನು ಯಡಿಯೂರಪ್ಪ ಆದಿಯಾಗಿ ಹಲವು ರಾಜ್ಯ ನಾಯಕರು ಹೇಳಿದರು ಎಂದು ತಿಳಿದು ಬಂದಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದರಿಂದಲೇ ದಾಖಲೆ ಎಂಬಂತೆ 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು.
ಇನ್ನೊಂದು ಮಂಡ್ಯದಲ್ಲಿ ನಮ್ಮ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ಗೆದ್ದರು. ಈ ಬಾರಿಯ ಚುನಾವಣೆಯಲ್ಲೂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಮ್ಮ ಮಾತಿಗೆ ಮನ್ನಣೆ ನೀಡಿದರೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಿದೆ.
ರಾಜ್ಯ ನಾಯಕತ್ವವನ್ನು ನಿರ್ಲಕ್ಷಿಸಿ ನಿಮ್ಮದೇ ಮಾನದಂಡ ಮುಂದಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಫಲಿತಾಂಶದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ತೀಕ್ಷ್ಣವಾಗಿಯೇ ಸಂದೇಶ ರವಾನಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಹೀಗಾಗಿ, ಅಂತಿಮವಾಗಿ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ವೇಳೆ ಯಡಿಯೂರಪ್ಪ ನೇತೃತ್ವದ ರಾಜ್ಯ ನಾಯಕತ್ವದ ಕೈಮೇಲಾಗುತ್ತದೆಯೋ ಅಥವಾ ಹೈಕಮಾಂಡ್ ಕೈಮೇಲಾಗುತ್ತದೆಯೋ ಎಂಬುದು ಕುತೂಹಲಕರವಾಗಿದೆ.