ಪಕ್ಷ ವಿರೋಧಿ ಚಟುವಟಿಕೆಗಳು ನನ್ನ ಕಿಚ್ಚು ಹೆಚ್ಚಿಸುತ್ತವೆ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈವಿ

| Published : Nov 28 2024, 12:32 AM IST / Updated: Nov 28 2024, 05:13 AM IST

BY vijayendraa

ಸಾರಾಂಶ

ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ಮಾತ್ರ ನಿಲ್ಲುತ್ತಿಲ್ಲ. ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವಧಿಯಲ್ಲೂ ಬಣ ರಾಜಕೀಯ ಕಡಮೆ ಏನಿರಲಿಲ್ಲ. ಈಗ ಅವರ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾಗಲೂ ಬಣ ರಾಜಕೀಯದ ಕಾವು ದಿನೇ ದಿನೇ ಏರತೊಡಗಿದೆ. 

ವಿಜಯ್ ಮಲಗಿಹಾಳ

 ಬೆಂಗಳೂರು

- ಪಕ್ಷದ ಹಿರಿಯ ನಾಯಕರಿಗೆ ಇರಿಸುಮುರುಸು ಉಂಟುಮಾಡುವುದೇ ಯತ್ನಾಳ್‌ ಸಾಧನೆ: ಬಿಜೆಪಿ ರಾಜ್ಯಾಧ್ಯಕ್ಷ

- ಬಿಎಸ್‌ವೈಗೆ ಕಲ್ಲು ಹೊಡೆದರೆ ಬಿಜೆಪಿಗೆ ಡ್ಯಾಮೇಜ್‌ । ಯತ್ನಾಳ್‌ ವಿರುದ್ಧ ಶಾ ಕ್ರಮ ನಾನು ತಡೆದಿದ್ದೇ ತಪ್ಪು

*ನೀವು ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಕಳೆದರೂ ನಿಮ್ಮ ನಾಯಕತ್ವದ ಕುರಿತ ಅಪಸ್ವರ ನಿಂತಿಲ್ಲ?

- ಹಿಂದೆ ನಾನು ಪಕ್ಷದಲ್ಲಿ ಬೆಂಗಳೂರು ನಗರದ ಕಾರ್ಯದರ್ಶಿಯಾಗಿದ್ದೆ. ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ನಂತರ ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಹಲವು ಉಪಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ಗಮನಿಸಿ ವರಿಷ್ಠರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೂ ಪಕ್ಷದಲ್ಲಿ ಗೊಂದಲ ಇತ್ತು. ಕೆಲವರು ಅವರ ನಾಯಕತ್ವ ಒಪ್ಪಿರಲಿಲ್ಲ. ಈ ಅಪಸ್ಪರ ಎನ್ನುವುದು ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಇದನ್ನು ನಿಭಾಯಿಸಿಕೊಂಡು ಹೋಗಬೇಕು ಅಷ್ಟೇ. ಸ್ವಂತ ಬಲದಿಂದ ಪಕ್ಷ ಅಧಿಕಾರಕ್ಕೆ ತರುವ ಕಿಚ್ಚು ನನ್ನಲ್ಲಿದೆ.

*ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿ ಒಂದು ವರ್ಷ ಪೂರೈಸಿದ್ದೀರಿ. ಹೇಗಿತ್ತು ಪಯಣ?

-ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಕಳೆದಿದೆ. ಹಿರಿಯರು ಇಂಥ ಮಹತ್ವದ ಜವಾಬ್ದಾರಿ ವಹಿಸಿದಾಗ ಸಂತೋಷವಾಗಿತ್ತು. ಒಂದು ವಾರದ ಬಳಿಕ ಈ ಜವಾಬ್ದಾರಿ ನಿಭಾಯಿಸಲು ನನ್ನಿಂದ ಸಾಧ್ಯವೇ ಎಂಬ ಆತಂಕವೂ ಆಗಿತ್ತು. ಆದರೆ, ಈ ಒಂದು ವರ್ಷದಲ್ಲಿ ಕಾರ್ಯಕರ್ತರ ನಡುವಿನ ಒಡನಾಟ, ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ಹೋರಾಟ, ಕಾರ್ಯಕರ್ತರ ಸ್ಪಂದನೆ, ಬೆಂಗಳೂರು-ಮೈಸೂರು ಪಾದಯಾತ್ರೆ ಈ ಎಲ್ಲವೂ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿವೆ. ಈ ಹೋರಾಟಗಳಿಂದ ಕಾರ್ಯಕರ್ತರಿಗೆ ಮತ್ತಷ್ಟು ಹತ್ತಿರವಾಗಿದ್ದೇನೆ.

*ನಿಮ್ಮ ಅಧಿಕಾರಾವಧಿ ಸಮಾಧಾನ ತಂದಿದೆ ಎಂದಾಯಿತು?

-ನನಗೆ ಇನ್ನೂ ಸಮಾಧಾನವಿಲ್ಲ. ಏಕೆಂದರೆ, ಸಾಕಷ್ಟು ಅನುಭವ ಇರುವ ಅನೇಕ ಹಿರಿಯರು ಪಕ್ಷದಲ್ಲಿ ಇದ್ದಾರೆ. ಅವರೆಲ್ಲರ ಸಲಹೆ ಪಡೆದು ಟೀಂ ವರ್ಕ್‌ ಮಾಡಬೇಕು. ಮುಂಬರುವ ದಿನಗಳಲ್ಲಿ ಆ ಕೆಲಸವನ್ನೂ ಯಶಸ್ವಿಯಾಗಿ ಮಾಡುವ ವಿಶ್ವಾಸವಿದೆ.

*ಚಿಕ್ಕ ವಯಸ್ಸಿಗೆ ಪಕ್ಷದ ಜವಾಬ್ದಾರಿ ತೆಗೆದುಕೊಂಡಿದ್ದೀರಿ. ನಿಭಾಯಿಸುವುದು ದೊಡ್ಡ ಸವಾಲು ಎನಿಸುತ್ತಿಲ್ಲವೇ?

-ಸಣ್ಣಪುಟ್ಟ ಗೊಂದಲಗಳ ನಡುವೆ ಕಾರ್ಯಕರ್ತರಲ್ಲಿ ನನ್ನ ಬಗ್ಗೆ ನಿರೀಕ್ಷೆ ಹೆಚ್ಚಿದೆ. ನಾನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ದೊಡ್ಡ ಗುರಿ ಇರಿಸಿಕೊಂಡು ಹೊರಟ್ಟಿದ್ದೇನೆ. ಈ ಗುರಿ ಸಾಧಿಸಬೇಕಾದರೆ ಸಮಾಜದ ಎಲ್ಲ ವರ್ಗಗಳ ನಾಯಕರನ್ನು ಗುರುತಿಸಬೇಕು. ಕೇವಲ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಮತ ಪಡೆದು ಗುರಿ ಸಾಧಿಸಲು ಸಾಧ್ಯವಿಲ್ಲ. ಆ ಭ್ರಮೆಯೂ ನನಗಿಲ್ಲ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಎಲ್ಲಾ ವರ್ಗಗಳ ನಾಯಕತ್ವ ಗುರುತಿಸಬೇಕು. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಹಳೇ ಮೈಸೂರು ಭಾಗದಲ್ಲಿ ಕಳೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಎಲ್ಲಡೆ ಪ್ರವಾಸ ಮಾಡಿ ಎಲ್ಲಾ ವರ್ಗಗಳ ಜನರನ್ನು ಗುರುತಿಸಿ, ನಾಯಕತ್ವ ನೀಡಿ ಪಕ್ಷವನ್ನು ಮುನ್ನಡೆಸಬೇಕು. ಆ ದೊಡ್ಡ ಸವಾಲು ನನ್ನ ಮುಂದಿದೆ. ಬರುವ ದಿನಗಳಲ್ಲಿ ಆ ಕೆಲಸಕ್ಕೆ ಒತ್ತು ನೀಡುತ್ತೇನೆ.

*ವಿಜಯೇಂದ್ರ ಒಬ್ಬರೇ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತು ಓಡಾಡಿದರೆ ಸಾಧ್ಯವೇ? ಉಳಿದ ನಾಯಕರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಲ್ಲವೇ?

-ಬೆಂಗಳೂರು-ಮೈಸೂರು ಪಾದಯಾತ್ರೆ ಯಶಸ್ವಿಯಾಯಿತು. ಅದು ನನ್ನೊಬ್ಬನಿಂದ ಸಾಧ್ಯವಾಗಲಿಲ್ಲ. ಪಕ್ಷದ ಎಲ್ಲಾ ಹಿರಿಯರು, ಮುಖಂಡರು ಸಹಕಾರ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರುದ್ಧದ ಹೋರಾಟಕ್ಕೆ ಜಿಲ್ಲೆಗಳ ಹಾಗೂ ರಾಜ್ಯದ ನಾಯಕರು ಸಹಕಾರ ನೀಡಿದ್ದಾರೆ. ಸಣ್ಣಪುಟ್ಟ ಗೊಂದಲ ಇರುವುದರಿಂದ ಅದು ಕಣ್ಣಿಗೆ ಕಾಣುತ್ತಿಲ್ಲ. ಒಬ್ಬನಿಂದ ಯಾವುದೇ ಹೋರಾಟ ಸಾಧ್ಯವಿಲ್ಲ. ಒಬ್ಬನೇ ಹೋರಾಟ ಮಾಡಿದರೆ ಅದು ನಾಯಕತ್ವದ ಗುಣ ಅಲ್ಲ. ಇದೊಂದು ಟೀಮ್‌ ಪ್ರಯತ್ನ. ಈ ನಿಟ್ಟಿನಲ್ಲಿ ಇನ್ನೂ ಮುಂದೆಯೂ ಯಶಸ್ವಿಯಾಗಿ ಹೋರಾಟ ಮಾಡುತ್ತೇವೆ.

*ರಾಜ್ಯಾಧ್ಯಕ್ಷರಾದ ಆರಂಭದಲ್ಲಿ ನಿಮ್ಮನ್ನು ಯಡಿಯೂರಪ್ಪ ಅವರ ಮಗ ಎಂದು ಗುರುತಿಸಲಾಗುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಇದರಿಂದ ಹೊರಗೆ ಬಂದಿದ್ದೀರಾ?

-ನಾನು ಯಡಿಯೂರಪ್ಪ ಅವರ ಮಗ ಎಂಬುದು ಅನುಕೂಲ ಮತ್ತು ಅನನುಕೂಲ ಎರಡೂ ಹೌದು. ಕಾರ್ಯಕರ್ತರು ಹಾಗೂ ಜನಸಾಮಾನ್ಯರು ನಾನು ಯಡಿಯೂರಪ್ಪನ ಮಗ ಎಂದು ಅಭಿಮಾನದಿಂದ ಮಾತನಾಡಿಸುತ್ತಾರೆ. ಆದರೆ, ಈ ವಿಚಾರದಲ್ಲಿ ಪಕ್ಷದ ಕೆಲ ಹಿರಿಯರಿಗೆ ಅಸಮಾಧಾನ ಇದೆ. ಅದಕ್ಕೆ ಕಾರಣಗಳು ಸಾಕಷ್ಟಿವೆ. ಅದನ್ನು ನಾನು ತಪ್ಪು ಎನ್ನುವುದಿಲ್ಲ. ಯಡಿಯೂರಪ್ಪ ನನಗೆ ತಂದೆಯೂ ಹೌದು, ಗುರುವೂ ಹೌದು. ಕಳೆದ 20 ವರ್ಷಗಳಿಂದ ಅವರ ಜತೆಯಲ್ಲೇ ಇದ್ದು ಹತ್ತಿರದಿಂದ ನೋಡಿ ಸಾಕಷ್ಟು ಅನುಭವ ಪಡೆದಿದ್ದೇನೆ. ನಾನು ಮೊದಲ ಬಾರಿಗೆ ಶಾಸಕ, ಮೊದಲ ಬಾರಿಗೆ ರಾಜ್ಯಾಧ್ಯಕ್ಷ ಆಗಿರಬಹುದು. ಅಂದರೆ, ನನಗೆ ರಾಜಕೀಯ ಹೊಸದಲ್ಲ. 1999ರಿಂದಲೂ ಪಕ್ಷದ ಕಾರ್ಯಕರ್ತರ ಒಡನಾಟದಲ್ಲಿದ್ದೇನೆ. ರಾಜ್ಯಾಧ್ಯಕ್ಷನಾಗಿ ಕಳೆದ ಒಂದು ವರ್ಷದಲ್ಲಿ ಯಾವುದೂ ನನಗೆ ಕಷ್ಟ, ಅಸಾಧ್ಯ ಎನಿಸಲಿಲ್ಲ. ಏಕೆಂದರೆ, ತಂದೆ ಅವರು ರಾಜಕೀಯ ಏಳು-ಬೀಳು ಎದುರಿಸಿದ ರೀತಿ ನನಗೆ ಪಾಠವೇ ಆಗಿದೆ. ಸಮಸ್ಯೆಗಳು ಎದುರಾದರೇ ನಾನು ಓಡಿ ಹೋಗುವುದಿಲ್ಲ. ಆತಂಕ ಪಡುವುದಿಲ್ಲ. ಏನೇ ಸಮಸ್ಯೆಗಳು ಎದುರಾದರೂ ಸಮಾಧಾನದಿಂದ ಎದುರಿಸುತ್ತೇನೆ.

*ನಿಮ್ಮ ಪಕ್ಷದ ಬಸನಗೌಡ ಪಾಟೀಲ ಯತ್ನಾಳ್‌ ಸೇರಿದಂತೆ ಕೆಲವರು ನಿಮ್ಮನ್ನು ಸತತವಾಗಿ ಟಾರ್ಗೆಟ್‌ ಮಾಡಿ ಇರಿಸು ಮುರುಸಾಗುವ ಹೇಳಿಕೆ ನೀಡುತ್ತಿದ್ದಾರೆ?

-ಯತ್ನಾಳ್‌ ಅವರ ನಡವಳಿಕೆ ದುರದೃಷ್ಟಕರ. ಅವರ ಈ ನಡವಳಿಕೆ ನಿನ್ನೆ-ಮೊನ್ನೆಯದಲ್ಲ. ವಾಜಪೇಯಿ ಕಾಲದಿಂದಲೂ ಪಕ್ಷದ ಹಿರಿಯ ನಾಯಕರಿಗೆ ಇರಿಸು ಮುರುಸು ಉಂಟು ಮಾಡುವುದೇ ಅವರ ಸಾಧನೆ. ಯಡಿಯೂರಪ್ಪ ಅವರನ್ನು ಪಂಚಮಸಾಲಿ ವಿರೋಧಿ ಎನ್ನುತ್ತಾರೆ. ಎಲ್ಲಿ ವಿರೋಧಿಯಾಗಿದ್ದಾರೆ? ಪಂಚಮಸಾಲಿ 3ಬಿಗೆ ಸೇರಿಸಿದ್ದೂ ಯಡಿಯೂರಪ್ಪ. ಯತ್ನಾಳ್‌ ಅವರು ಒಂದು ಸುಳ್ಳನ್ನು ನೂರು ಬಾರಿ ಹೇಳುತ್ತಾರೆ. ಯಡಿಯೂರಪ್ಪನಿಗೆ ಕಲ್ಲು ಹೊಡೆದರೆ ರಾಜ್ಯದಲ್ಲಿ ಪಕ್ಷಕ್ಕೆ ಡ್ಯಾಮೇಜ್‌ ಆಗುತ್ತದೆ ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತೇನೆ. ಯಡಿಯೂರಪ್ಪ ಆಲದ ಮರ ಇದ್ದಂತೆ. ಎಲ್ಲ ವರ್ಗದ ಜನರು ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಅಭಿಮಾನದಿಂದ ಕಾಣುತ್ತಾರೆ. ಯತ್ನಾಳ್‌ ಅವರ ಬ್ಯಾಡ್‌ ಟೈಮೋ ಆಥವಾ ಏನೋ ಗೊತ್ತಿಲ್ಲ. ಅವರ ಈ ರೀತಿಯ ಹೇಳಿಕೆಗಳು ಅವರ ದೃಷ್ಟಿ ಹಾಗೂ ಪಕ್ಷದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅವರು ಸುಧಾರಿಸಬಹುದು ಎಂದು ಕಾಯುತ್ತಿದ್ದೇವೆ. ಆದರೆ, ಅವರಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ.

*ಯತ್ನಾಳ್‌ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ ‘ಜಾಣ’ ಮೌನ ವಹಿಸಿದೆಯೇ?

-ಹೈಕಮಾಂಡ್‌ಗೆ ಕರ್ನಾಟಕ ಒಂದೇ ರಾಜ್ಯವಲ್ಲ. ದೇಶದ ಎಲ್ಲ ರಾಜ್ಯಗಳನ್ನೂ ಸಂಭಾಳಿಸಬೇಕು. ಹಾಗಂತ ಕರ್ನಾಟಕವನ್ನು ಹೈಕಮಾಂಡ್‌ ನಿರ್ಲಕ್ಷಿಸಿಲ್ಲ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಕೇಂದ್ರದ ನಾಯಕ ಅಮಿತ್‌ ಶಾ ಅವರು ಯತ್ನಾಳ್‌ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದರು. ಈ ವೇಳೆ ನಾನೇ ಮಧ್ಯ ಪ್ರವೇಶಿಸಿ ಇನ್ನೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ತಕ್ಷಣಕ್ಕೆ ಕ್ರಮ ಕೈಗೊಂಡರೆ, ರಾಜ್ಯಾಧ್ಯಕ್ಷನಾಗಿರುವ ನನ್ನ ಮೇಲೆ ಆಪಾದನೆ ಬರಲಿದೆ ಎಂದು ಹೇಳಿದ್ದೆ. ಯತ್ನಾಳ್‌ ವಿಚಾರದಲ್ಲಿ ನಾನು ಆಗ ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದೆ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಚುನಾವಣೆ ಮುಗಿದಿದೆ. ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ನೋಡೋಣ.

*ಸದಾ ಯಡಿಯೂರಪ್ಪ ಮತ್ತು ನಿಮ್ಮ ವಿರುದ್ಧ ಹರಿಹಾಯುವ ಯತ್ನಾಳ್‌ ಜತೆಗೆ ಮುಖಾಮುಖಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೀರಾ?

-ಹಿಂದೆ ಪಕ್ಷದ ನಾಯಕರಾದ ರವಿಕುಮಾರ್‌, ಅಭಯ ಪಾಟೀಲ್‌ ಹಾಗೂ ಚರಂತಿಮಠ ಅವರನ್ನು ಯತ್ನಾಳ್‌ ಬಳಿಗೆ ಕಳುಹಿಸಿದ್ದೆ. ನನ್ನ ಬಗ್ಗೆ ಇರುವ ತಪ್ಪು ಅಭಿಪ್ರಾಯ ಸರಿಪಡಿಸಲು ಪ್ರಯತ್ನಿಸಿದ್ದೆ. ಅವರು ಎಲ್ಲಿಗೆ ಕರೆದರೂ ಮುಖಾಮುಖಿ ಕುಳಿತು ಚರ್ಚಿಸಲು ಸಿದ್ಧನಿದ್ದೆ. ಆದರೆ, ಯತ್ನಾಳ್‌ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಯತ್ನಾಳ್‌ ಅವರು ಹಿರಿಯ ನಾಯಕರು. ಅವರು ಹಿರಿತನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಯಡಿಯೂರಪ್ಪ ಅವರನ್ನು ಬೈದರೆ ದೊಡ್ಡ ಲೀಡರ್‌ ಆಗುತ್ತೇನೆ ಎಂಬ ಭ್ರಮೆಯಲ್ಲಿ ಇದ್ದರೆ ಯಾರೂ ಒಪ್ಪುವುದಿಲ್ಲ. ಅದರಲ್ಲೂ ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ.

*ನಿಮಗೆ ಜೈಕಾರ ಹಾಕುವವರನ್ನೇ ಪದಾಧಿಕಾರಿಗಳನ್ನಾಗಿ ಮಾಡಿಕೊಂಡಿದ್ದೀರಿ ಎಂಬ ಆರೋಪವಿದೆ?

-ಇದು ತಪ್ಪು. ಪದಾಧಿಕಾರಿಗಳ ನೇಮಕ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭಿಪ್ರಾಯ ಪಡೆದಿದ್ದೇನೆ. ಈ ಹಿಂದೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೇಶ್‌ಗೆ ಜವಾಬ್ದಾರಿ ನೀಡಿ ಹಿರಿಯರ ಸಲಹೆ ಪಡೆಯಲು ಸೂಚಿಸಿದ್ದೆ. ಅದಕ್ಕಾಗಿ ಒಂದು ವಾರ ಸಮಯ ಸಹ ನೀಡಿದ್ದೆ. ಬಳಿಕ ಸಲಹೆ ಪಡೆದು ಪದಾಧಿಕಾರಿಗಳ ಆಯ್ಕೆ ಮಾಡಿದ್ದೇವೆ. ನನ್ನ ಎಡ-ಬಲ ಇದ್ದವರಿಗೆ ಮಣೆ ಹಾಕಿಲ್ಲ. ಶಾಸಕ ಸುನೀಲ್‌ ಕುಮಾರ್‌ ಯಡಿಯೂರಪ್ಪನ ಶಿಷ್ಯರಾ ಅಥವಾ ನನ್ನ ಶಿಷ್ಯರಾ? 

ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡಿದ್ದೇವೆ. ಬೈರತಿ ಬಸವರಾಜು ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಕುಡಚಿ ರಾಜೀವ್‌ಗೆ ಅವಕಾಶ ನೀಡಿದ್ದೇವೆ. ಸಮಾಜವಾರು ಪ್ರಾತಿನಿಧ್ಯ ನೀಡಿದ್ದೇವೆ. ಅಭಿಪ್ರಾಯ ಕೇಳಿದಾಗ ಅಭಿಪ್ರಾಯ ನೀಡದಿದ್ದರೆ ನನ್ನ ತಪ್ಪಾ? ದೇವರು ಮೆಚ್ಚುವ ರೀತಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಸಲಹೆಗಳು ಇದ್ದರೆ ಕೊಡಲಿ. ಡಿಸೆಂಬರ್‌ ಕಳೆದ ಬಳಿಕ ಕೆಲವು ಬದಲಾವಣೆ ತರುತ್ತೇವೆ. ಪಕ್ಷ ಸಂಘಟನೆಯ ದುಡಿದಿರುವ ಅನೇಕ ಹಿರಿಯರಿಗೂ ಅವಕಾಶ ಕಲ್ಪಿಸುತ್ತೇವೆ.

*ಸಣ್ಣ ಸಮಸ್ಯೆಗಳನ್ನು ಮುಂದಿರಿಸಿ ನಿಮ್ಮ ಕಾಲು ಎಳೆಯುತ್ತಿರುವುದಕ್ಕೆ ಬೇಸರ ಉಂಟಾಗುವುದಿಲ್ಲವೇ?

-ಇಂತಹ ಘಟನಾವಳಿಗಳು ನಡೆದಾಗ, ಯತ್ನಾಳ್ ಅವರಂಥ ನಾಯಕರ ಹೇಳಿಕೆಗಳು, ಪಕ್ಷ ವಿರೋಧಿ ಚಟುವಟಿಕೆಗಳು ನನ್ನಲ್ಲಿ ಕಿಚ್ಚು ಮತ್ತು ಉತ್ಸಾಹ ಹೆಚ್ಚಿಸುತ್ತವೆ. ಇದನ್ನು ತಂದೆಯಿಂದ ನೋಡಿ ಕಲಿತಿದ್ದೇನೆ. ಯಡಿಯೂರಪ್ಪ ಮಗ ಎಂದು ರೆಡ್‌ ಕಾರ್ಪೆಟ್‌ ಹಾಕಿ ಬಹುಪರಾಕ್‌ ಎಂದರೆ ನನಗೆ ಉತ್ಸಾಹ ಬರುವುದಿಲ್ಲ. ಇಂತಹ ಘಟನೆಗಳು ನನಗೆ ಇನ್ನೂ ಎಚ್ಚರಿಕೆಯಿಂದ ಕೆಲಸ ಮಾಡಲು ಉತ್ಸಾಹ ಹೆಚ್ಚಿಸುತ್ತವೆಯೇ ಹೊರತು ಉತ್ಸಾಹ ಕುಂದಿಸಲು ಸಾಧ್ಯವಿಲ್ಲ. ಆಂತರಿಕ ಕಚ್ಚಾಟದಿಂದ ಕಾರ್ಯಕರ್ತರದಲ್ಲಿ ಉತ್ಸಾಹ ಕುಂದಿದೆ. ಇದಕ್ಕೆಲ್ಲ ಶೀಘ್ರದಲ್ಲೇ ಇತಿಶ್ರೀ ಹಾಡಬೇಕು. ಈ ನಿಟ್ಟಿನಲ್ಲಿ ನಾನು ಯಶಸ್ವಿಯಾಗುತ್ತೇನೆ.

*ಹಗರಣಗಳ ವಿರುದ್ಧದ ಬಿಜೆಪಿ ಹೋರಾಟ ನಡುವೆಯೂ ಉಪಚುನಾವಣೆಯಲ್ಲಿ ಜನಾಭಿಪ್ರಾಯ ತಮ್ಮ ಪರ ಬಂದಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ?

-ಉಪಚುನಾವಣೆಯಲ್ಲಿ ಜನಾಭಿಪ್ರಾಯ ತಮ್ಮ ಪರ ಬಂದಿದೆ ಎಂದರೆ ಅದು ಕಾಂಗ್ರೆಸ್‌ನ ಮೂರ್ಖತನ. ಉಪಚುನಾವಣೆ ಫಲಿತಾಂಶ ಸರ್ಕಾರದ ಆಡಳಿತಕ್ಕೆ ಮಾನದಂಡವಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸುಳ್ಳಾ? ಚಂದ್ರಶೇಖರ್ ಆತ್ಮಹತ್ಯೆ ಸುಳ್ಳಾ? ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರು. ಹಗರಣ ನಡೆದಿದೆ ಎಂದು ಇದೇ ಸಿದ್ಧರಾಮಯ್ಯ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಸಚಿವರು ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದರು. ಇದೆಲ್ಲಾ ಸುಳ್ಳಾ? ಮುಡಾ ಹಗರಣದಲ್ಲಿ ತಪ್ಪು ಮಾಡದಿದ್ದಲ್ಲಿ ಏಕೆ 14 ನಿವೇಶನ ವಾಪಸ್‌ ನೀಡಿದರು? ಸಿದ್ಧರಾಮಯ್ಯ ಬಗ್ಗೆ ನನಗೆ ವೈಯಕ್ತಿಕ ದ್ವೇಷವಿಲ್ಲ. ತಪ್ಪು ಮಾಡಿದಾಗ ಎತ್ತಿ ತೋರಿಸುವುದು ವಿರೋಧ ಪಕ್ಷದ ಕರ್ತವ್ಯ. ಆ ಕೆಲಸವನ್ನು ವಿರೋಧ ಪಕ್ಷವಾಗಿ ಬಿಜೆಪಿ ಪ್ರಾಮಾಣಿಕವಾಗಿ ಮಾಡುತ್ತಿದೆ.

*ನೀವು ಏನೆಲ್ಲ ಗಂಭೀರ ಆರೋಪ ಮಾಡಿದರೂ ನಡುವೆಯೂ ಸಿದ್ದರಾಮಯ್ಯ ಜಗ್ಗಲ್ಲ, ಬಗ್ಗಲ್ಲ ಎನ್ನುತ್ತಿದ್ದಾರೆ?

-ಇದು ಭಂಡತನದ ಪರಮಾವಧಿ. ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಅವರು ತಪ್ಪು ಮಾಡಿಲ್ಲ ಎಂದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ವಾಲ್ಮೀಕಿ ನಿಗಮದ ಹಗರಣದಲ್ಲಿ ಜೈಲಿಗೆ ಹೋಗಿ ಬಂದಿರುವ ನಾಗೇಂದ್ರನನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬಾರದು.

*ಜಾರಿ ನಿರ್ದೇಶನಾಲಯ (ಇ.ಡಿ.) ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿ ಪ್ರಯತ್ನಿಸುತ್ತಿದೆಯಂತೆ?

-ತಪ್ಪು ಆಗದಿದ್ದರೆ, ಅಧಾರ ಇಲ್ಲದೆ ಇಡಿ ತನಿಖೆ ಮಾಡಲು ಸಾಧ್ಯವಿಲ್ಲ. ಈ ದೇಶದಲ್ಲಿ ಹೈಕೋರ್ಟ್‌, ಸುಪ್ರೀಂಕೋರ್ಟ್‌ ನ್ಯಾಯಾಂಗ ವ್ಯವಸ್ಥೆ ಇದೆ. ಕೇಂದ್ರ ಸರ್ಕಾರ ಅಥವಾ ಇ.ಡಿ. ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ. ಇವೆಲ್ಲ ಕೇವಲ ರಾಜಕೀಯ ಆರೋಪಗಳು ಅಷ್ಟೇ.

*ವಕ್ಫ್‌ ವಿಚಾರವಾಗಿ ಬಿಜೆಪಿಯಲ್ಲಿ ಅಧಿಕೃತವಾಗಿ ಮೂರು ಮತ್ತು ಯತ್ನಾಳ್ ನೇತೃತ್ವದಲ್ಲಿ ಅನಧಿಕೃತಾಗಿ ಮತ್ತೊಂದು ತಂಡ ರಚನೆಯಾಗಿದೆಯಲ್ಲ?

-ಅವರಿಗೆ ಒಳ್ಳೆಯದಾಗಲಿ. ನಾನು ಕೆಟ್ಟದು ಬಯಸುವುದಿಲ್ಲ. ರೈತರ ವಿಚಾರವಾಗಿ ಯಾರಾದರೂ ಹೋರಾಟ ಮಾಡಬಹುದು. ಆದರೆ, ಅವರ ನಡವಳಿಕೆ ಸರಿಯಿಲ್ಲ. ಅವರ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದರ ಬಗ್ಗೆ ನನ್ನ ತಕರಾರಿಲ್ಲ. ಜನ ಹಾಗೂ ಕಾರ್ಯಕರ್ತರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಮ್ಮ ಕಚ್ಚಾಟಗಳು, ನಡವಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗುತ್ತಿದೆ. ಕಾರ್ಯಕರ್ತರು ಏನು ಪಾಪ ಮಾಡಿದ್ದಾರೆ. ಕಾರ್ಯಕರ್ತರಿಗೆ ನೋವು ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ನನ್ನನ್ನೂ ಸೇರಿದಂತೆ ಎಲ್ಲರೂ ನಡೆದುಕೊಳ್ಳಬೇಕು. ಇಲ್ಲವಾದರೆ, ಕಾರ್ಯಕರ್ತರು ನಮ್ಮನ್ನು ಕ್ಷಮಿಸುವುದಿಲ್ಲ.