ಉಪ ಚುನಾವಣೆ ಗೆಲುವಿಗಾಗಿ ಹರಕೆ ಕಟ್ಟಿಕೊಂಡ ಸಿ.ಪಿ.ಯೋಗೇಶ್ವರ್...!

| Published : Nov 05 2024, 12:42 AM IST / Updated: Nov 05 2024, 12:43 AM IST

ಉಪ ಚುನಾವಣೆ ಗೆಲುವಿಗಾಗಿ ಹರಕೆ ಕಟ್ಟಿಕೊಂಡ ಸಿ.ಪಿ.ಯೋಗೇಶ್ವರ್...!
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲಕ್ಕೆ ಬೆಳಗ್ಗೆ 8 ಗಂಟೆ ಸುಮಾರಿಗೆ ಏಕಾಂಗಿಯಾಗಿ ಧಾವಿಸಿದ ಅಭ್ಯರ್ಥಿ ಯೋಗೇಶ್ವರ್ ತಮ್ಮ ಎರಡು ಹಸ್ತದಲ್ಲಿ ಒಂದೂಕಾಲು ರುಪಾಯಿ ನಾಣ್ಯ ಹಿಡಿದು ಮೂಲ ವಿಗ್ರಹದ ಗರ್ಭಗುಡಿ ಮುಂದೆ ಸುಮಾರು 20 ನಿಮಿಷಗಳ ಕಾಲ ಕುಳಿತು ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲಕ್ಕೆ ಬೆಳಗ್ಗೆ 8 ಗಂಟೆ ಸುಮಾರಿಗೆ ಏಕಾಂಗಿಯಾಗಿ ಧಾವಿಸಿದ ಅಭ್ಯರ್ಥಿ ಯೋಗೇಶ್ವರ್ ತಮ್ಮ ಎರಡು ಹಸ್ತದಲ್ಲಿ ಒಂದೂಕಾಲು ರುಪಾಯಿ ನಾಣ್ಯ ಹಿಡಿದು ಮೂಲ ವಿಗ್ರಹದ ಗರ್ಭಗುಡಿ ಮುಂದೆ ಸುಮಾರು 20 ನಿಮಿಷಗಳ ಕಾಲ ಕುಳಿತು ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಅರ್ಚನೆ, ಪೂಜಾ ಕೈಂಕರ್ಯಗಳನ್ನು ಸಲ್ಲಿಸಿದ ನಂತರ ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಹಾಗೂ ಸಹ ಅರ್ಚಕ ಸುರೇಶ್ ಆಚಾರ್ಯ ಅವರು ಶ್ರೀಆಂಜನೇಯಸ್ವಾಮಿ ಭಾವಚಿತ್ರವಿರುವ ಫೋಟೋ ನೀಡಿ ಹಾಗೂ ಶೇಷವಸ್ತ್ರಹೊದಿಸಿ ಅಭಿನಂದಿಸಿದರು.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮತ್ತೊಂದು ದಿನ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದಾಗಿ ಹರಕೆ ಕಟ್ಟಿಕೊಂಡರು.

ಹೊಳೇ ಆಂಜನೇಯಸ್ವಾಮಿ ದೇವರಲ್ಲಿ ಹರಕೆ ಕಟ್ಟಿಕೊಂಡರೆ ತಮ್ಮ ಇಷ್ಟಾರ್ಥ ನೆರವೇರುತ್ತದೆಂಬ ಪ್ರತೀತಿ ಇದೆ. ಹೀಗಾಗಿ ಬಹಳ ದಿನಗಳಿಂದ ದೇವರ ದರ್ಶನಕ್ಕೆ ಬರಬೇಕೆಂದುಕೊಂಡಿದ್ದೆ. ಸಾಧ್ಯವಾಗಿರಲಿಲ್ಲ ಎಂದರು.

ಚುನಾವಣೆ ವೇಳೆ ಜನರ ಮಧ್ಯೆ ಇರುವುದು ಹಾಗೂ ದೇವರ ಮೊರೆ ಹೋಗುವುದು ಸಹಜ. ಆದ್ದರಿಂದ ಈಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮತದಾರರು ಅತಿ ಹೆಚ್ಚಿನ ಮತಗಳ ಅಂತರದಿಂದ ನನಗೆ ಗೆಲುವು ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎಚ್ಡಿಕೆಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಯೋಜನಾತ್ಮಕ ಕೊಡುಗೆ ಇಲ್ಲ: ಚಲುವರಾಯಸ್ವಾಮಿ

ಮದ್ದೂರು:

ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಲ್ಲಿ ಬುದ್ಧಿವಂತರು, ಕ್ಷೇತ್ರದ ಅಭಿವೃದ್ಧಿಯಲ್ಲಿ ಯೋಜನಾತ್ಮಕ ಕೊಡುಗೆ ಇಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ದೂರಿದರು.

ತಾಲೂಕಿನ ಕದಲೂರು ಗ್ರಾಮದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿ, ಚನ್ನಪಟ್ಟಣ ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿ ಮಾಡುವಂತೆ ಜೆಡಿಎಸ್ ಬೆಂಬಲಿಗರೇ ಹೇಳಿಕೊಳ್ಳುತ್ತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗುವ ಆಸೆಯಿಂದ ಚನ್ನಪಟ್ಟಣ ಕ್ಷೇತ್ರ ತ್ಯಜಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಟುಕಿದರು.

ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸಿ ನಿಖಿಲ್ ಸೋತಿಲ್ಲ. ಒಮ್ಮೆ ಮಂಡ್ಯ, ಮತ್ತೊಮ್ಮೆ ರಾಮನಗರದಲ್ಲಿ ನಿಂತು ಸೋತಿದ್ದಾರೆ. ಆದರೆ, ಎರಡು ಬಾರಿ ಸೋತು ಅನ್ಯಾಯವಾಗಿದೆ ಎಂದು ನಿಖಿಲ್ ಹೇಳುತಿದ್ದಾರೆ. ಅವರು ಸ್ಥಳೀಯರು ಅಲ್ಲ ಅನ್ನೋದನ್ನು ಜನರು ತಿಳಿದಿದ್ದಾರೆ. ಆ ಕ್ಷೇತ್ರದ ಜನತೆ ಉತ್ತರ ನೀಡಲಿದ್ದಾರೆ ಎಂದರು.

ಯೋಗೇಶ್ವರ್ ಚನ್ನಪಟ್ಟಣದಲ್ಲೇ ಎರಡು ಬಾರಿ ಸೋತಿದ್ದಾರೆ. ಇವರು ಸ್ಥಳೀಯರು. ಕ್ಷೇತ್ರದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿದ್ದಾರೆ. ಯೋಗಿಶ್ವರ್ ಗೆದ್ದು ಮೂರುವರೆ ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.