ಸಿ.ಎಸ್.ಪುಟ್ಟರಾಜುಗೆ ಟೆಂಪಲ್ ರನ್ ಮಾಡಿಸಿ ಟಿಕೆಟ್ ತಪ್ಪಿಸಿದ್ದಾರೆ: ಸಚಿವ ಚಲುವರಾಯಸ್ವಾಮಿ

| Published : Mar 27 2024, 01:01 AM IST

ಸಿ.ಎಸ್.ಪುಟ್ಟರಾಜುಗೆ ಟೆಂಪಲ್ ರನ್ ಮಾಡಿಸಿ ಟಿಕೆಟ್ ತಪ್ಪಿಸಿದ್ದಾರೆ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೋ ಇಬ್ಬರು ಹೇಳಿದ್ರು ಅಂತ ನೆಪವೊಡ್ಡಿ ಪುಟ್ಟರಾಜುಗೆ ಟಿಕೆಟ್ ತಪ್ಪಿಸಿ, ಈಗ ಅವರೇ ಬರ್ತಾರಂತೆ. ಸಿ.ಎಸ್. ಪುಟ್ಟರಾಜು ಏನಾದರೂ ಆ ಪಕ್ಷದಿಂದ ಹೊರಗೆ ಬಂದ್ರೆ ಮುಗಿದೇಹೋಯ್ತು. ಪುಟ್ಟರಾಜು ಬರ್ತಾರೋ ಅಥವಾ ಬಿಡ್ತಾರೋ ನನಗೆ ಗೊತ್ತಿಲ್ಲ. ಆದರೆ, ಅವನು ನನಗಿಂತ ಹೆಚ್ಚು ನೋವು ಅನುಭವಿಸುತ್ತಿದ್ದಾನೆ. ಆದರೆ, ಮಕ್ಕಳಿಗೋಸ್ಕರ, ತಮ್ಮ ಕುಟುಂಬಕ್ಕೋಸ್ಕರ ಬಿಜೆಪಿ ಜೊತೆ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಟೆಂಪಲ್ ರನ್ ಮಾಡಿಸಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಟಿಕೆಟ್ ಸಿಗುತ್ತದೆ ಎಂದು ಸಿ.ಎಸ್.ಪುಟ್ಟರಾಜು ಆದಿಚುಂಚನಗಿರಿ, ಅಯೋಧ್ಯೆ, ಧರ್ಮಸ್ಥಳ ಎಲ್ಲಾ ಕಡೆಗೂ ಕಳುಹಿಸಿದರು. ಕೊನೆಗೆ ಟಿಕೆಟ್ ಕೈತಪ್ಪಿಸಿದರು ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ಯಾರೋ ಇಬ್ಬರು ಹೇಳಿದ್ರು ಅಂತ ನೆಪವೊಡ್ಡಿ ಪುಟ್ಟರಾಜುಗೆ ಟಿಕೆಟ್ ತಪ್ಪಿಸಿ, ಈಗ ಅವರೇ ಬರ್ತಾರಂತೆ. ಸಿ.ಎಸ್. ಪುಟ್ಟರಾಜು ಏನಾದರೂ ಆ ಪಕ್ಷದಿಂದ ಹೊರಗೆ ಬಂದ್ರೆ ಮುಗಿದೇಹೋಯ್ತು. ಪುಟ್ಟರಾಜು ಬರ್ತಾರೋ ಅಥವಾ ಬಿಡ್ತಾರೋ ನನಗೆ ಗೊತ್ತಿಲ್ಲ. ಆದರೆ, ಅವನು ನನಗಿಂತ ಹೆಚ್ಚು ನೋವು ಅನುಭವಿಸುತ್ತಿದ್ದಾನೆ. ಆದರೆ, ಮಕ್ಕಳಿಗೋಸ್ಕರ, ತಮ್ಮ ಕುಟುಂಬಕ್ಕೋಸ್ಕರ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿಕೆ ಕಾಲೆಳೆದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮತ್ತು ನಾನು ಒಂದೇ ಪಕ್ಷದಲ್ಲಿದ್ದವರು. ಜೊತೆಯಲ್ಲಿ ಕೆಲಸ ಮಾಡಿದವರು. ನನ್ನ ವಿರುದ್ಧ ಮಾತನಾಡಿದರೆ ಆ ಪಕ್ಷದ ನಾಯಕರು ಹತ್ತಿರಕ್ಕೆ ತೆಗೆದುಕೊಳ್ಳುತ್ತಾರೆಂದು ಮಾತಾಡುತ್ತಿದ್ದಾನೆ. ಪುಟ್ಟರಾಜು ಬಗ್ಗೆ ಪಾಪ ನಾನು ಏನೂ ಮಾತಾಡಲ್ಲ ಎಂದರು.

ನಮ್ಮದು ಜಾತ್ಯತೀತ ಪಕ್ಷ ಎಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಇಡೀ ಒಕ್ಕಲಿಗ ಸಮುದಾಯದ ಸ್ವಾಭಿಮಾನವನ್ನು ಪ್ರಧಾನಿ ಮೋದಿ ಅವರ ಪಾದಕ್ಕೆ ಅರ್ಪಿಸಿರುವ ಕೀರ್ತಿ ಮಾಜಿ ಸಿಎಂ ಕುಮಾರಸ್ವಾಮಿಗೆ ಸಲ್ಲುತ್ತದೆ ಎಂದು ಕುಟುಕಿದರು.

ಕಳೆದ ವಿಧಾನಸಭಾ ಚುನಾವಣೆಗಿಂತ ಅತ್ಯಂತ ಕಠಿಣ ದೊಡ್ಡಸವಾಲು ಈಗ ನನ್ನ ಮುಂದಿದೆ. ನಿಮಗೆ ಸ್ವಾಭಿಮಾನವಿದ್ದರೆ, ಚಲುವರಾಯಸ್ವಾಮಿ ಗೌರವ ಉಳಿಸಲು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುರನ್ನು ಗೆಲ್ಲಿಸಿಕೊಡಿ ಎಂದು ಗದ್ಗದಿತರಾದರು.

ತಾಲೂಕಿನ ಪ್ರತಿ ಬೂತ್‌ಗಳಲ್ಲಿ ಕನಿಷ್ಠ 100ಕ್ಕಿಂತ ಅಧಿಕ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬರದಿದ್ದೆರೆ ನಾನು ಸತ್ಯವಾಗಿಯೂ ಅಂತಹ ಬೂತ್‌ ವ್ಯಾಪ್ತಿಯ ಮುಖಂಡರ ಮುಖವನ್ನು ನೋಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಮಾಜಿ ಎಂಎಲ್‌ಸಿ ಎನ್.ಅಪ್ಪಾಜಿಗೌಡ ಮಾತನಾಡಿ, ಅಪ್ಪಾಜಿಗೌಡ 2 ಕೋಟಿಗೆ ಸೇಲ್ ಆದ್ರು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಎಲ್ಲ ನಾಯಕರಿಗೆ ನಾನು ಸಹಾಯ ಮಾಡಿದ್ದೇನೆ ಹೊರತು, ನನ್ನ ಜೀವಮಾನದಲ್ಲಿ ಯಾರಿಂದಲೂ ನಯಾಪೈಸೆ ಪಡೆದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಗುಡುಗಿದರು.

ಸಮಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮತಯಾಚಿಸಿದರು. ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಶಾಸಕ ಕೆ.ಬಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಮುಖಂಡರಾದ ಎನ್.ಲಕ್ಷ್ಮೀಕಾಂತ್, ಎಂ.ಹುಚ್ಚೇಗೌಡ, ಎಂ.ಪ್ರಸನ್ನ, ಎಚ್.ಟಿ.ಕೃಷ್ಣೇಗೌಡ, ತಿಮ್ಮರಾಯಿಗೌಡ, ಸುನಿಲ್‌ಲಕ್ಷ್ಮೀಕಾಂತ್, ಎನ್.ಕೆ.ವಸಂತಮಣಿ, ನೀಲಾಶಿವಮೂರ್ತಿ ಸೇರಿದಂತೆ ಹಲವರಿದ್ದರು.