ಸಾರಾಂಶ
ಬೆಂಗಳೂರು ವ್ಯಾಪ್ತಿಯಲ್ಲಿ 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆಗೆ (ಪೆರಿಫೆರಲ್ ರಿಂಗ್ ರಸ್ತೆ) ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ ನಾಲ್ಕು ರೀತಿಯ ಪರಿಹಾರ ಆಯ್ಕೆ ನೀಡಲಾಗಿದೆ.
ಬೆಂಗಳೂರು : ಬೆಂಗಳೂರು ವ್ಯಾಪ್ತಿಯಲ್ಲಿ 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆಗೆ (ಪೆರಿಫೆರಲ್ ರಿಂಗ್ ರಸ್ತೆ) ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ ನಾಲ್ಕು ರೀತಿಯ ಪರಿಹಾರ ಆಯ್ಕೆ ನೀಡಲಾಗಿದೆ. ಜತೆಗೆ ಎರಡು ವರ್ಷದಲ್ಲಿ ಈ ಟೋಲ್ ರಸ್ತೆ ನಿರ್ಮಾಣ ಮಾಡಲು ಮಹತ್ವದ ತೀರ್ಮಾನ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಭೂ ಪರಿಹಾರಕ್ಕೆ ಹಣ ಹೊಂದಿಸುವಲ್ಲಿ ಆಗುತ್ತಿರುವ ಸಮಸ್ಯೆ ನಿವಾರಿಸಲು ರಸ್ತೆಯ ವಿಸ್ತೀರ್ಣವನ್ನು 100 ಮೀಟರ್ ಬದಲಿಗೆ 65 ಮೀಟರ್‌ಗೆ ಪರಿಷ್ಕರಣೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಉಳಿದ 35 ಮೀಟರ್ ಜಾಗವನ್ನು ಆಯಾ ಜಮೀನು ಮಾಲೀಕರಿಗೆ ಪರಿಹಾರದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ.
ಜತೆಗೆ, ಟಿಡಿಆರ್ ಹಾಗೂ ಎಫ್‌ಎಆರ್ ಪರಿಹಾರ ನೀಡಲು ನಿರ್ಧರಿಸಿದ್ದು, 27,000 ಕೋಟಿ ರು. ವೆಚ್ಚದ ಯೋಜನೆಯಲ್ಲಿ ಸುಮಾರು 10,000 ಕೋಟಿ ರು.ಗಳಷ್ಟು ಹೊರೆ ಕಡಿಮೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಮೊದಲ ಹಂತದಲ್ಲಿ ಉತ್ತರ ಭಾಗದಲ್ಲಿ ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು. ರಸ್ತೆಯು ಟೋಲ್ ರಸ್ತೆಯಾಗಿರಲಿದ್ದು, ಟೋಲ್ ಶುಲ್ಕದ ಪ್ರಮಾಣವನ್ನು ಮುಂದೆ ತಾಂತ್ರಿಕ ಸಮಿತಿ ನಿರ್ಧರಿಸಲಿದೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ರಾಜ್ಯ ಸರ್ಕಾರ ದೊಡ್ಡ ತೀರ್ಮಾನ ಕೈಗೊಂಡಿದ್ದು, ಈ ಹಿಂದಿನ ಸರ್ಕಾರ ಉದ್ದೇಶಿಸಿದ್ದ ಪೆರಿಫೆರಲ್ ರಿಂಗ್ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ 117 ಕಿ.ಮೀ. ಉದ್ದದ ರಸ್ತೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ತುಮಕೂರು ರಸ್ತೆಯಿಂದ ಆರಂಭವಾಗಿ ಯಲಹಂಕ, ವೈಟ್ ಫೀಲ್ಡ್, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ ಮೂಲಕ ಮೈಸೂರು ರಸ್ತೆ ಮಾರ್ಗವಾಗಿ ಬೆಂಗಳೂರನ್ನು ಸುತ್ತುವರೆದು ಮತ್ತೆ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಎಕ್ಸಿಬಿಷನ್ ಸೆಂಟರ್ ಬಳಿ ಸಂಪರ್ಕ ಸಾಧಿಸಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ. ಮೊದಲ ಹಂತದಲ್ಲಿ ಉತ್ತರ ಭಾಗದಲ್ಲಿ ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದರು.
ಈ ಹಿಂದಿನ ಸರ್ಕಾರ ಈ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿತ್ತಾದರೂ ಅದನ್ನು ಹಿಂಪಡೆದಿರಲಿಲ್ಲ. ಈಗ ಬೆಂಗಳೂರಿನಲ್ಲಿ ನೈಸ್ ರಸ್ತೆಗೆ ಪರ್ಯಾಯ ರಸ್ತೆ ಅಗತ್ಯವಿದೆ. ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್ ಮಾಡಬಾರದು ಎಂದು ಈ ಯೋಜನೆ ಕೈಗೊತ್ತಿಕೊಂಡಿದ್ದೇವೆ. ಈ ಯೋಜನೆಗೆ ಸರ್ಕಾರದ ಖಾತರಿಯೊಂದಿಗೆ ಹುಡ್ಕೋ ಮೂಲಕ 27 ಸಾವಿರ ಕೋಟಿ ಸಾಲ ಪಡೆಯಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
65 ಮೀ. ಅಗಲದ ರಸ್ತೆಗೆ ತೀರ್ಮಾನ:
ಈ ಯೋಜನೆಗಾಗಿ 100 ಮೀ. ಅಗಲದ ರಸ್ತೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಬೆಂಗಳೂರು ಮೈಸೂರು ಹೆದ್ದಾರಿ ಗಾತ್ರ (65 ಮೀ.) ಇದ್ದು ಇದೇ ಅಗಲದ ರಸ್ತೆ ಮಾಡಲು ತೀರ್ಮಾನಿಸಿದೆ. ರಸ್ತೆಯ ಎರಡೂ ಭಾಗದಲ್ಲಿ ಸರ್ವೀಸ್ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್ ರಸ್ತೆಯಾಗಲಿದೆ.
ಈ ರಸ್ತೆಯ ಮಧ್ಯೆ ಮೆಟ್ರೋ ಯೋಜನೆ ರೂಪಿಸಲು ಜಾಗ (5 ಮೀ.) ಕಲ್ಪಿಸಲಾಗುವುದು. ಉಳಿದ 35 ಮೀ. ಜಾಗವನ್ನು ರೈತರಿಗೆ ಪರಿಹಾರ ರೂಪದಲ್ಲಿ ಮರಳಿ ನೀಡಲು ತೀರ್ಮಾನಿಸಿದ್ದೇವೆ. ಇದು ವಾಣಿಜ್ಯ ಉದ್ದೇಶಕ್ಕೆ ನೆರವಾಗಲಿರುವ ಹಿನ್ನೆಲೆಯಲ್ಲಿ ರೈತರ ಮನವಿ ಮೇರೆಗೆ ಜಾಗವನ್ನು ಅವರಿಗೆ ನೀಡುವ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.
ಪರಿಹಾರ ಪಡೆಯಲು ನಾಲ್ಕು ಆಯ್ಕೆ:
ಸರ್ಕಾರ ಹಾಗೂ ಬಿಡಿಎ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ರೀತಿಯಲ್ಲಿ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಮಾರುಕಟ್ಟೆ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರುಪಟ್ಟು ನಗದು ಪರಿಹಾರ ಅಥವಾ ಟಿಡಿಆರ್ ಅಥವಾ ಎಫ್ಎಆರ್ ಅಥವಾ 35% ವಾಣಿಜ್ಯ ಭೂಮಿ ಪಡೆಯುವ ಅವಕಾಶ ನೀಡಲಾಗಿದೆ.
ಒಂದು ವೇಳೆ ವಾಣಿಜ್ಯ ಭೂಮಿ ಬೇಡ ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಬಿಡಿಎ ವತಿಯಿಂದ ರೂಪಿಸಲಾಗಿರುವ ನೂತನ ಬಡಾವಣೆಗಳಲ್ಲಿ 40% ಜಾಗ ನೀಡಲಾಗುವುದು. ಬಿಡಿಎ ಕಾಯ್ದೆಯಲ್ಲಿ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ರೈತರಿಗೆ ನೆರವಾಗಲು ಸರ್ಕಾರ ಮಹತ್ವದ ತೀರ್ಮಾನ ಮಾಡಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ಈ ಜಾಗವನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ. ಸಂಚಾರ ದಟ್ಟಣೆಯಿಂದ ಬೆಂಗಳೂರಿನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ಯೋಜನೆ ಅಗತ್ಯ. ಈ ಯೋಜನೆಯಿಂದ 1900 ಕುಟುಂಬಗಳಿಗೆ ಪರಿಣಾಮ ಬೀರುತ್ತದೆಯಾದರೂ ಬೆಂಗಳೂರು ನಗರಕ್ಕೆ ದೊಡ್ಡ ಮಟ್ಟದ ನಿರಾಳತೆ ನೀಡಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಮಹತ್ತರ ತೀರ್ಮಾನ ಕೈಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್.ಕೆ. ಪಾಟೀಲ್ ಹಾಜರಿದ್ದರು.
20 ಗುಂಟೆಗಿಂತ ಒಳಗಿರುವ ಜಮೀನಿಗೆ ನಗದು ಪರಿಹಾರ:
ಪರಿಹಾರದಲ್ಲಿ ರೈತರಿಗೆ ಒಂದು ಆಯ್ಕೆ ಮಾತ್ರ ಮಾಡಬೇಕಾ ಅಥವಾ ಬಹು ಆಯ್ಕೆ ಮಾಡುವ ಅವಕಾಶವಿದೆಯೇ? ಎಂದು ಕೇಳಿದಾಗ, 20 ಗುಂಟೆಗಿಂತ ಒಳಗಿರುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಭೂಮಿ ಕಳೆದುಕೊಳ್ಳುವವರಿಗೆ ನಾಲ್ಕು ಆಯ್ಕೆಗಳೂ ಅನ್ವಯಿಸಲಿವೆ. ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಬಹುದು ಎಂದು ಡಿ.ಕೆ ಶಿವಕುಮಾರ್ ಹೇಳಿದರು.- ನಗದು, ಟಿಡಿಆರ್, ಎಫ್ಎಆರ್, 35% ವಾಣಿಜ್ಯ/40% ವಸತಿ ಪ್ರದೇಶದ ಭೂಪರಿಹಾರ- ಪರಿಹಾರ ನಿರಾಕರಿಸಿದರೆ ನ್ಯಾಯಾಲಯದಲ್ಲಿ ಠೇವಣಿ ಕಟ್ಟಿ ಯೋಜನೆ ಮುಂದುವರಿಕೆ- ಬಿಡಿಎ ಕಾಯ್ದೆಯಲ್ಲಿ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ- ಆದರೂ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ