ಜಾತಿಗಣತಿ ವರದಿ ಮಂಡನೆ ದಿನಾಂಕ ಮತ್ತೆ ಮುಂದೂಡಿಕೆ - ಇಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಮಂಡನೆಯಾಗಬೇಕಿದ್ದ ವರದಿ

| Published : Jan 16 2025, 07:23 AM IST

Janata Curfew Vidhansoudha
ಜಾತಿಗಣತಿ ವರದಿ ಮಂಡನೆ ದಿನಾಂಕ ಮತ್ತೆ ಮುಂದೂಡಿಕೆ - ಇಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಮಂಡನೆಯಾಗಬೇಕಿದ್ದ ವರದಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಾಕಷ್ಟು ಪರ-ವಿರೋಧಕ್ಕೆ ಕಾರಣವಾಗಿರುವ ಬಹು ನಿರೀಕ್ಷಿತ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಮಂಡನೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.

ಬೆಂಗಳೂರು : ರಾಜ್ಯದಲ್ಲಿ ಸಾಕಷ್ಟು ಪರ-ವಿರೋಧಕ್ಕೆ ಕಾರಣವಾಗಿರುವ ಬಹು ನಿರೀಕ್ಷಿತ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಮಂಡನೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.

ಜಾತಿಗಣತಿ ವರದಿಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಮಂಡಿಸಲು ಉದ್ದೇಶಿಸಲಾಗಿತ್ತು. ಆದರೆ ಇದೀಗ ಗಣತಿ ವರದಿಯನ್ನು ಈ ಬಾರಿ ಮಂಡನೆ ಮಾಡದಿರಲು ತೀರ್ಮಾನಿಸಲಾಗಿದೆ. ತನ್ಮೂಲಕ ಜಾತಿಗಣತಿ ವರದಿ ಮಂಡನೆ ದಿನಾಂಕ ಮತ್ತೊಮ್ಮೆ ಮುಂದೂಡಲ್ಪಟ್ಟಂತಾಗಿದೆ.

ಜಾತಿಗಣತಿ ಮಂಡನೆ ವಿಷಯವನ್ನು ಜ.16ರ ಸಚಿವ ಸಂಪುಟ ಸಭೆಯ ಅಜೆಂಡಾದಲ್ಲೂ ಸೇರಿಸಲಾಗಿತ್ತು. ಮುಚ್ಚಿದ ಲಕೋಟೆಯನ್ನು ಸಂಪುಟ ಸದಸ್ಯರ ಸಮ್ಮುಖದಲ್ಲೇ ತೆರೆಯುವುದಾಗಿ ಹೇಳಲಾಗಿತ್ತು. ಆದರೆ ವರದಿ ಮಂಡನೆಗೆ ಲಿಂಗಾಯತ, ಒಕ್ಕಲಿಗರಂಥ ಪ್ರಮುಖ ಸಮುದಾಯಗಳಿಂದ ಹಾಗೂ ಸರ್ಕಾರದಲ್ಲಿ ಆಂತರಿಕವಾಗಿಯೂ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟಿಪ್ಪಣಿ ಮಂಡನೆ ವಿಳಂಬದ ಕಾರಣ ನೀಡಿ ಮಂಡನೆ ತೀರ್ಮಾನವನ್ನು ಮುಂದೂಡಲಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಖಚಿತಪಡಿಸಿದ್ದಾರೆ.

ಸುರ್ಜೇವಾಲ ಸಭೆಯಲ್ಲೂ ಪ್ರಸ್ತಾಪ:

ಕಳೆದ ಭಾನುವಾರ ಜಾತಿಗಣತಿ ವಿರೋಧಿಸಿ ಒಕ್ಕಲಿಗರ ಸಂಘ ಸಭೆ ನಡೆಸಲು ಮುಂದಾಗಿತ್ತು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಸಭೆ ಮುಂದೂಡಿ ಅನ್ಯಾಯವಾಗದಂತೆ ನಾನು ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಒಕ್ಕಲಿಗರ ಸಭೆ ಮುಂದೂಡಲ್ಪಟ್ಟಿತ್ತು.

ಈ ನಡುವೆ ಸೋಮವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಮ್ಮಖದಲ್ಲಿ ನಡೆದ ಸಭೆಯಲ್ಲೂ ಜಾತಿಗಣತಿ ವರದಿ ಚರ್ಚೆಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ವರದಿ ಮಂಡನೆ ಮತ್ತೊಮ್ಮೆ ಮುಂದೂಡಿರುವುದು ಕುತೂಹಲ ಮೂಡಿಸಿದೆ.

2014ರಲ್ಲಿ ಚಾಲನೆ:

ಜಾತಿಗಣತಿ ನಡೆಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ (2014) ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್. ಕಾಂತರಾಜು ಅವರನ್ನು ನೇಮಿಸಿದ್ದರು. 169 ಕೋಟಿ ರು. ವೆಚ್ಚ ಮಾಡಿ ಹತ್ತು ವರ್ಷಗಳ ಬಳಿಕ ಕಳೆದ ವರ್ಷ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗ್ಡೆ ಮೂಲಕ ಮುಖ್ಯಮಂತ್ರಿಗಳಿಗೆ ಈ ಕುರಿತ ವರದಿ ಸಲ್ಲಿಕೆಯಾಗಿದೆ.

ಈಗಾಗಲೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದ ಈ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ. ಸ್ವಪಕ್ಷೀಯರೇ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವರದಿ ವೈಜ್ಞಾನಿಕವಾಗಿಲ್ಲ, ಮನೆ-ಮನೆಗೆ ಹೋಗಿ ಸಮೀಕ್ಷೆ ನಡೆಸಿಲ್ಲ ಎಂಬ ಆಕ್ಷೇಪ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಂದ ಕೇಳಿಬಂದಿವೆ. ಇದಲ್ಲದೆ ಮೂಲ ವರದಿ ನಾಪತ್ತೆಯಾಗಿದ್ದು, ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇಲ್ಲ ಎಂಬೆಲ್ಲ ಆರೋಪಗಳೂ ಕೇಳಿ ಬಂದಿದ್ದವು. ಹೀಗಾಗಿ ವರದಿ ಮಂಡನೆ ಮಹತ್ವ ಪಡೆದುಕೊಂಡಿದೆ.

ಪದೇ ಪದೇ ವರದಿ ಮಂಡನೆ ಮುಂದೂಡಿಕೆ

2024 ಅಕ್ಟೋಬರ್‌ನಲ್ಲಿ ಬಿಜೆಪಿ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಸೇರಿ ಹಿಂದುಳಿದ ವರ್ಗಗಳ 30 ಮಂದಿ ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿ ಅನುಷ್ಠಾನಕ್ಕೆ ಮನವಿ ಮಾಡಿದ್ದರು. ಈ ವೇಳೆ ಅ.18 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಅ.15 ರಂದು ಸಿದ್ದರಾಮಯ್ಯ ಹೇಳಿದ್ದರು. ಬಳಿಕ ಅ.25ರ ಸಂಪುಟದಲ್ಲಿ ಮಂಡಿಸುವುದಾಗಿ ಮುಂದೂಡಿದರು. ಇದರ ಬೆನ್ನಲ್ಲೇ ಉಪ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದರಿಂದ ಸಿದ್ದರಾಮಯ್ಯ ತಟಸ್ಥರಾದರು. ಜನವರಿ ಮೊದಲ ವಾರದಲ್ಲಿ ಮತ್ತೆ ಮುನ್ನೆಲೆಗೆ ಬಂದ ಚರ್ಚೆಯಲ್ಲಿ ಜ.16ರಂದು ಮಂಡನೆ ಮಾಡುವುದಾಗಿ ಹೇಳಲಾಗಿತ್ತು. ಇದೀಗ ಮತ್ತೆ ವರದಿ ಮಂಡನೆ ಮುಂದೂಡಿಕೆಯಾಗಿದೆ.