ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಂವಿಧಾನದ ಆಶಯ ಮತ್ತು ಸ್ಫೂರ್ತಿಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಂವಿಧಾನದ ಆಶಯ ಮತ್ತು ಸ್ಫೂರ್ತಿಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಇಸಿ ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿ ಬೆನ್ನಲ್ಲೇ ವಿಪಕ್ಷ ಈ ಆರೋಪ ಮಾಡಿದೆ.

ಜೊತೆಗೆ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಗಂಭೀರ ಆರೋಪ ಕೇಳಿಬಂದಿರುವ ಹೊತ್ತಿನಲ್ಲೇ, ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸ ಮರುಸ್ಥಾಪಿಸುವ ಸುವರ್ಣ ಅವಕಾಶ ಸುಪ್ರೀಂಕೋರ್ಟ್‌ನ ಮುಂದಿದೆ ಎಂದು ಪಕ್ಷ ಹೇಳಿದೆ.

ಆಯೋಗಕ್ಕೆ ಸುಪ್ರೀಂ ನೋಟಿಸ್‌ ಪ್ರಜಾಪ್ರಭುತ್ವಕ್ಕೆ ಸಾಕ್ಷಿ: ಬಿಜೆಪಿ

ನವದೆಹಲಿ: ದೇಶದ ಎಲ್ಲಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ದೇಶ ಪ್ರಜಾಪ್ರಭುತ್ವ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂಬುದು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೀಡಿದ ನೋಟಿಸ್‌ ಸಾಕ್ಷಿ ಎಂದು ಬಿಜೆಪಿ ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಕ್ಷದ ವಕ್ತಾರ ಸಂಬಿತ್‌ ಪಾತ್ರ,‘ದೇಶವು ಪ್ರಜಾಪ್ರಭುತ್ವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಮಾತನಾಡುತ್ತಿದ್ದಾರೆ. ಇಲ್ಲಿ ಎಲ್ಲಾ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳನ್ನು ಪಾಲಿಸಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಒಳ್ಳೆಯ ಮಾದರಿ ಬೇರೆಲ್ಲಿ ಸಿಗಲು ಸಾಧ್ಯ? ನನ್ನ ಪ್ರಕಾರ ಭಾರತ ಪ್ರಜಾಪ್ರಭುತ್ವವನ್ನು ಸಂಭ್ರಮಿಸುತ್ತಿದೆ ಎಂದು ಪಾತ್ರ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ ಮುಂದೆ ಪಿಐಎಲ್‌ ಸಲ್ಲಿಸುವುದು ಹಾಗೂ ನ್ಯಾಯಾಲಯವು ಪ್ರತಿವಾದಿಗಳ ವಾದವನ್ನೂ ಆಲಿಸಲು ನೋಟಿಸ್‌ ನೀಡುವುದು ಪ್ರಮಾಣಿತ ಕಾರ್ಯವಿಧಾನವಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ಪ್ರಕ್ರಿಯೆ ಎರಡೂ ಆಗಿವೆ ಎಂದು ಹೇಳಿದ್ದಾರೆ.

ಇದು ದೇಶದಲ್ಲಿ ಎಲ್ಲಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದಕ್ಕೆ ಸಾಕ್ಷಿ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ದೇಶವು ಹಿಟ್ಲರ್‌ ಆಡಳಿತದಡಿ ಇದೆ, ದೇಶದಲ್ಲಿ ನಿರಂಕುಶಪ್ರಭುತ್ವವಿದೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ಅವರ ಆರೋಪಕ್ಕೆ ವಿರುದ್ಧವಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ವಾತಾವರಣ ಇದೆ. ಇನ್ನೊಮ್ಮೆ ಆ ರೀತಿಯ ಆರೋಪ ಮಾಡುವ ಮೊದಲು ಅವರಿನ್ನು ಎರಡೆರಡು ಬಾರಿ ಯೋಚನೆ ಮಾಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಪಕ್ಷಗಳ ಕಾಲೆಳೆದಿದ್ದಾರೆ ಪಾತ್ರ.

ಜ್ಞಾನೇಶ್‌ ಫಾರಂ 6 ಬದಲಾಯಿಸಿದ್ದು ಸಾಬೀತಾಗಿದೆ: ರಾಹುಲ್‌ ಗಾಂಧಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಫಾರಂ 6 ಅನ್ನು ಅಕ್ರಮವಾಗಿ ಹಾಗೂ ಏಕಪಕ್ಷೀಯವಾಗಿ ಬದಲಾವಣೆ ಮಾಡಿದ್ದಾರೆ ಎಂಬುದು ಇದೀಗ ಸಾಬೀತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಜತೆಗೆ ದೇಶದ ಪ್ರಜಾಪ್ರಭುತ್ವದ ಮೇಲಿನ ಈ ಕ್ರಿಮಿನಲ್‌ ದಾಳಿಯಲ್ಲಿ ಭಾಗಿಯಾದ ಮುಖ್ಯ ಚುನಾವಣಾ ಆಯುಕ್ತ ಸೇರಿ ಪ್ರತಿಯೊಬ್ಬರನ್ನೂ ಉತ್ತರದಾಯಿ ಮಾಡಲಾಗುವುದು ಎಂದು ತಿಳಿಸಿದರು.

ಫಾರಂ 6 ಪರಿಷ್ಕರಣೆಗೆ ತಾನು ಅನುಮತಿ ನೀಡಿಲ್ಲ ಎಂಬ ಸುಪ್ರೀಂ ಕೋರ್ಟ್‌ ಸ್ಪಷ್ಟೀಕರಣ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಾಹುಲ್‌ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಜ್ಞಾನೇಶ್‌ ಕುಮಾರ್‌ ಅವರು ಫಾರಂ 6 ಅನ್ನು ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ ಎಂಬುದು ಇದೀಗ ಸಾಬೀತಾಗಿದೆ. ಬಿಜೆಪಿಗೆ ನೆರವು ನೀಡಲು ಅವರು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಒಂದು ಉದಾಹರಣೆ ಅಷ್ಟೆ ಎಂದು ತಿಳಿಸಿದ್ದಾರೆ.