ಕೇಂದ್ರ ಬರಗಾಲ ಪರಿಹಾರದ ಹಣ ಕೂಡಲಿ

| Published : Nov 16 2023, 01:16 AM IST

ಸಾರಾಂಶ

ಕೇಂದ್ರ ಬರಗಾಲ ಪರಿಹಾರದ ಹಣ ಕೂಡಲಿ

ಬಿಡುಗಡೆ ಮಾಡಲು ಸಚಿವ ಶರಣಪ್ರಕಾಶ ಪಾಟೀಲ್ ಒತ್ತಾಯ । ಡಿಸಿ ಮೂಲಕ ಶೀಘ್ರದಲ್ಲಿ ಬೆಳೆಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಸಿಂಧನೂರು

ರಾಜ್ಯದಾದ್ಯಂತ ತೀವ್ರ ಬರಗಾಲ ಇದೆ. ಸಿಂಧನೂರು ತಾಲೂಕನ್ನು ಕೇಂದ್ರ ಸರ್ಕಾರ ಮೂರನೇ ಹಂತದಲ್ಲಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರ ಕೂಡಲೇ ರಾಜ್ಯದಾದ್ಯಂತ ಎಲ್ಲ ಬರಗಾಲ ಪ್ರೀಡಿತ ಪ್ರದೇಶಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಬರಗಾಲ ಹಾಗೂ ಅಕಾಲಿಕ ಮಳೆಯಿಂದ ಒಟ್ಟು 29304 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ 5100 ಹೆಕ್ಟೇರ್ ಭತ್ತವು ನೆಲಕಚ್ಚಿದೆ. ಬರಗಾಲದಿಂದ 13126 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 1277 ಹೆಕ್ಟೇರ್ ಹತ್ತಿ, 1698 ಹೆಕ್ಟೇರ್ ಸಜ್ಜಿ ಬೆಳೆ ನಷ್ಟ ಉಂಟಾಗಿದೆ ಎಂದರು.

ಇತ್ತೀಚಿಗೆ ಬಿದ್ದ ಮಳೆಗಾಳಿ, ಮಳೆಯಿಲ್ಲದೆ ಹಾಗೂ ಕಾಲುವೆಯ ನೀರು ಸಿಗದೆ ಬೆಳೆ ನಷ್ಟವಾಗಿರುವ ಕುರಿತು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಿದ್ದು, ಜಿಲ್ಲಾಧಿಕಾರಿಗಳ ಮೂಲಕ ಶೀಘ್ರದಲ್ಲಿ ಬೆಳೆಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಬರ ಪರಿಹಾರ ವಿಷಯದಲ್ಲಿ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ. ಈಗಾಗಲೇ ಕಂದಾಯ ಸಚಿವರು ಸೇರಿ ನಾಲ್ಕು ಜನ ಸಚಿವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಮನವಿ ಮಾಡಿದ್ದು, ಇಲ್ಲಿಯವರೆಗೆ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಪರಿಹಾರ ಪ್ರಕ್ರಿಯೆಯಲ್ಲಿ ಹಿನ್ನಡೆಯಾಗಿದೆ. ಆದಾಗ್ಯೂ ಸಹ ರಾಜ್ಯ ಸರ್ಕಾರದಿಂದ ಬರ ನಿರ್ವಹಣೆ ಹಿನ್ನೆಲೆಯಲ್ಲಿ ರು. 17 ಸಾವಿರ ಕೋಟಿ ಮಂಜೂರಾಗಿದ್ದು, ರು. 800 ಕೋಟಿ ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಬರ ಸೇರಿ, ಬೆಳೆ ನಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಳೆದ 20 ದಿನಗಳ ಹಿಂದೆಯೇ ರಾಯಚೂರಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಿದೆ. ತಾಲೂಕಿನಲ್ಲಿ ಶಾಸಕರು ಕೂಡ ಟಾಸ್ಕ್‌ಫೋರ್ಸ್ ಸಭೆ ನಡೆಸಿ, ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಫಸಲ್‌ ಭೀಮಾ ಯೋಜನೆ ರೈತರಿಗೆ ನೆರವಾಗಿಲ್ಲ. ಹಿಂದಿನ ಸರ್ಕಾರ ಕಮಿಷನ್ ಹಣದ ಆಸೆಗೆ ಖಾಸಗಿ ಕಂಪನಿಗಳಿಗೆ ವಹಿಸಿಕೊಟ್ಟಿರುವುದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ವಿವರಿಸಿದರು.

ಈ ಹಿಂದಿನ ಸರ್ಕಾರದಲ್ಲಿ ಗೊತ್ತುಗುರಿ ಇಲ್ಲದೆ ಯೋಜನೆ ರೂಪಿಸಿ, ಯೆಥೇಚ್ಛವಾಗಿ ಅನುದಾನ ಬಳಕೆ ಮಾಡಿಕೊಂಡಿರುವುದರಿಂದ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಕೂಡಲೇ ಸರಿಪಡಿಸಿ, ಕಾಮಗಾರಿ ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ಹಾಗೂ ಮರಳು ದಂಧೆಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಸೂಚಿಸಿರುವುದಾಗಿ ತಿಳಿಸಿದರು.

ಶಾಸಕರಾದ ಹಂಪನಗೌಡ ಬಾದರ್ಲಿ, ಆರ್. ಬಸನಗೌಡ ತುರ್ವಿಹಾಳ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ತಹಸೀಲ್ದಾರ್‌ ಅರುಣ್ ದೇಸಾಯಿ, ಡಿವೈಎಸ್ಪಿ ಎಸ್.ಬಿ.ತಳವಾರ ಇದ್ದರು.

- - -15ಕೆಪಿಎಸ್ಎನ್ಡಿ01:

ಸಿಂಧನೂರು ತಾಲೂಕಿನ ಗೊರೇಬಾಳ ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಗೆ ನಷ್ಟ ಹೊಂದಿದ ಭತ್ತದ ಹೊಲಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಭೇಟಿ ನೀಡಿ, ವೀಕ್ಷಿಸಿದರು.