ರಾಜಕೀಯ ಲಾಭಕ್ಕಾಗಿ ಸಮುದಾಯದ ನಾಯಕರನ್ನು ತುಳಿಯುವ ಛಲವಾದಿ: ನಾರಾಯಣಸ್ವಾಮಿ ವಿರುದ್ಧ ಸುಂಡಹಳ್ಳಿ ಕಿಡಿ

| Published : Sep 01 2024, 01:49 AM IST / Updated: Sep 01 2024, 04:25 AM IST

Chalavadi Narayana Swamy
ರಾಜಕೀಯ ಲಾಭಕ್ಕಾಗಿ ಸಮುದಾಯದ ನಾಯಕರನ್ನು ತುಳಿಯುವ ಛಲವಾದಿ: ನಾರಾಯಣಸ್ವಾಮಿ ವಿರುದ್ಧ ಸುಂಡಹಳ್ಳಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧ ವಿಹಾರ ಟ್ರಸ್ಟ್‌ಗೆ ಸಿಎ ನಿವೇಶನ ನೀಡಿಕೆ ವಿವಾದದ ಕುರಿತು ನಾರಾಯಣಸ್ವಾಮಿ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕಾಗಿ ಪಕ್ಷ ಮತ್ತು ಸಿದ್ಧಾಂತ ಬದಲಾಯಿಸುವ ಗೋಸುಂಬೆ ರಾಜಕಾರಣಿ ಎಂದು ಟೀಕಿಸಿದ್ದಾರೆ.  

 ಮಂಡ್ಯ :  ಬುದ್ಧ ವಿಹಾರ ಟ್ರಸ್ಟ್‌ಗೆ ಸಿಎ ನಿವೇಶನ ನೀಡಿರುವ ಬಗ್ಗೆ ವಿವಾದ ಸೃಷ್ಟಿಸಿರುವ ಛಲವಾದಿ ನಾರಾಯಣಸ್ವಾಮಿ ಒಬ್ಬ ಸಮಯಸಾಧಕ ರಾಜಕಾರಣಿ. ಕೇವಲ ಅಧಿಕಾರಕ್ಕಾಗಿ ಪಕ್ಷ ಮತ್ತು ಸಿದ್ಧಾಂತ ಬದಲಾಯಿಸುವ ಗೋಸುಂಬೆ ರಾಜಕಾರಣಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಟೀಕಿಸಿದರು.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಕ್ರಮಗಳ ಬಗ್ಗೆ ಸಂವಿಧಾನಬದ್ಧವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರನ್ನು ನಾರಾಯಣಸ್ವಾಮಿಯಂತಹವರಿಗೆ ಅಧಿಕಾರದ ದಾಹ ತೋರಿಸಿ ಸಮುದಾಯದ ನಾಯಕರನ್ನು ತುಳಿಯುವ ಪ್ರಯತ್ನವನ್ನು ಬಿಜೆಪಿಯವರು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ನಾರಾಯಣಸ್ವಾಮಿ ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಬುದ್ಧ ವಿಹಾರ ಟ್ರಸ್ಟ್ ಬಗ್ಗೆ ತಿಳಿದಿದ್ದರೂ ಸಂಘ ಪರಿವಾರವನ್ನು ಮೆಚ್ಚಿಸಲು ಖರ್ಗೆ ಕುಟುಂಬವನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಬುದ್ಧ ವಿಹಾರ ಟ್ರಸ್ಟ್‌ಗೆ ನೀಡಿರುವ ನಿವೇಶನ ನೀಡಿರುವ ಕುರಿತು ಮಾತನಾಡುವವರು ಮೈಸೂರು ಹೆಬ್ಬಾಳದ ಎರಡನೇ ಹಂತದಲ್ಲಿ ಎರಡು ಎಕರೆ ಜಮೀನನ್ನು ಬೃಂದಾವನ ಸಾಫ್ಟ್‌ವೇರ್ ಹೆಸರಿನಲ್ಲಿ ೨೦೦೬ರಲ್ಲಿ ಪಡೆದಿರುವ ಇವರು ಇದುವರೆಗೂ ಯಾವುದೇ ಕೈಗಾರಿಕೆ ಚಟುವಟಿಕೆ ನಡೆಸದೆ ಮತ್ತೊಬ್ಬ ದಲಿತರಿಗೂ ಅವಕಾಶ ಸಿಗದಂತೆ ಮಾಡಿರುವುದು ಇವರಿಗಿರುವ ದಲಿತಪರ ಕಾಳಜಿಗೆ ಸಾಕ್ಷಿ ಎಂದು ಮೂದಲಿಸಿದರು.

ದಲಿತರ ಪರ ಕಾಳಜಿ ಇದ್ದರೆ, ಧೈರ್ಯವಿದ್ದರೆ ಆರ್‌ಎಸ್‌ಎಸ್ ಅಂಗ ಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ನೀಡಿರುವ ಐದು ಎಕರೆ ಜಮೀನು ಮತ್ತು ಚಾಣಕ್ಯ ವಿವಿಗೆ ೧೧೬ ಎಕರೆ ಭೂಮಿ ನೀಡಿರುವ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡಲಿ ಎಂದು ಸವಾಲು ಹಾಕಿದರು.

ಖರ್ಗೆ ಅವರ ಆಶೀರ್ವಾದದಿಂದ ಹೌಸಿಂಗ್ ಬೋರ್ಡ್ ನಿರ್ದೇಶಕರಾಗಿ, ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಅರಣ್ಯ ಅಬಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆ ಪಡೆದುಕೊಂಡು ಅಧಿಕಾರ ಅನುಭವಿಸಿ, ಗ್ರಾಪಂ ಚುನಾವಣೆಯಲ್ಲೂ ಗೆಲ್ಲದ ನಾರಾಯಣಸ್ವಾಮಿ ದಲಿತರ ಹೆಸರೇಳಿಕೊಂಡು ಹಿಂಬಾಗಿಲ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡಿರುವ ನಿಮಗೆ ಖರ್ಗೆ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜರಿದರು.

ಬಿಜೆಪಪಿ ಸೇರಿದ ಬಳಿಕ ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ವರ್ತಿಸುತ್ತಿರುವ ನಾರಾಯಣಸ್ವಾಮಿ ಒಮ್ಮೆ ಬುದ್ಧ ವಿಹಾರಕ್ಕೆ ಹೋದರೆ ಮನಃಪರಿವರ್ತನೆಯಾಗಬಹುದು ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಎಂ.ಎನ್.ಶ್ರೀಧರ್, ಸಿದ್ದಲಿಂಗಯ್ಯ, ಬಿ.ಟಿ.ಗುರುರಾಜ್, ಎಂ.ಹೊಂಬಯ್ಯ, ಹರೀಶ್, ವಿಜಯ್‌ಕುಮಾರ್ ಇತರರಿದ್ದರು.