ಮೈಸೂರಿನ ಮುಡಾದಲ್ಲಿ ಸಾವಿರಾರು ಕೋಟಿ ಹಗರಣ-ಮುಖ್ಯಮಂತ್ರಿ ಕುಟುಂಬವೇ ಪಾಲುದಾರ: ಛಲವಾದಿ ಆರೋಪ

| Published : Aug 01 2024, 12:17 AM IST / Updated: Aug 01 2024, 05:32 AM IST

ಸಾರಾಂಶ

ಮೈಸೂರಿನ ಮುಡಾದಲ್ಲಿ ಸಾವಿರಾರು ಕೋಟಿ ರು. ಮೊತ್ತದ ಹಗರಣ ನಡೆದಿದೆ. ಮುಖ್ಯಮಂತ್ರಿ ಕುಟುಂಬವೇ ಅದರಲ್ಲಿ ಪಾಲುದಾರರು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಯಾದಗಿರಿ: ಮೈಸೂರಿನ ಮುಡಾದಲ್ಲಿ ಸಾವಿರಾರು ಕೋಟಿ ರು. ಮೊತ್ತದ ಹಗರಣ ನಡೆದಿದೆ. ಮುಖ್ಯಮಂತ್ರಿ ಕುಟುಂಬವೇ ಅದರಲ್ಲಿ ಪಾಲುದಾರರು. ಇನ್ನು, ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ವರ್ಗಗಳ 187 ಕೋಟಿ ರು.ಲೂಟಿ ಮಾಡಲಾಗಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾದ ಚಂದ್ರಶೇಖರ್ ಆತಂಕದಿಂದ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ, ಇದೆಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಅವರ ಬಳಿ ಉತ್ತರವೇ ಇಲ್ಲ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಯಾದಗಿರಿ ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಬುಧವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನ ಹಗರಣಗಳ ಬಗ್ಗೆ ನಾವು ಸುಮ್ಮನೆ ಕೂಡುವುದಿಲ್ಲ. ಉದ್ಧಟತನದ ಮಾತಿಗೆ ಜಗ್ಗುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್‌ ಪಕ್ಷ ದಲಿತರ ದಾರಿ ತಪ್ಪಿಸಿ ಮತ ಸೆಳೆದಿದ್ದು, ದಲಿತರಿಗೆ ಅಂಗೈಯಲ್ಲಿ ಆಕಾಶ ತೋರಿಸಿದೆ. ಕಾಂಗ್ರೆಸ್‌ನ್ನು ನಂಬಿ ದಲಿತರ ಮತ ನೀಡಿದರು. ಆದರೆ, ನಂಬಿದವರ ಚರ್ಮ ತೆಗೆದು ಸಿದ್ದರಾಮಯ್ಯನವರು ಚಪ್ಪಲಿ ಹಾಕಿ ಮೆರೆಯುತ್ತಿದ್ದಾರೆ ಎಂದು ದೂರಿದರು.