ತಾಕತ್ತಿದ್ರೆ 370ನೇ ವಿಧಿ ಮತ್ತೆ ಜಾರಿ ಮಾಡಿ : ಮೋದಿ ಸವಾಲು

| Published : Apr 13 2024, 01:07 AM IST / Updated: Apr 13 2024, 04:18 AM IST

ಸಾರಾಂಶ

ಪ್ರತ್ಯೇಕತಾವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ಕೊಡುತ್ತಿದ್ದ ಕರೆಯಂಥ ಘಟನೆಗಳು ಇದೀಗ ಇತಿಹಾಸದ ಪುಟ ಸೇರಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದಶಕಗಳಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ.

ಉಧಂಪುರ: ಪ್ರತ್ಯೇಕತಾವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ಕೊಡುತ್ತಿದ್ದ ಕರೆಯಂಥ ಘಟನೆಗಳು ಇದೀಗ ಇತಿಹಾಸದ ಪುಟ ಸೇರಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದಶಕಗಳಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಗಡಿಯಾಚೆಗಿಂದ ಗುಂಡಿನ ದಾಳಿ, ಕಲ್ಲು ತೂರಾಟ, ಭಯೋತ್ಪಾದನೆಯ ದಾಳಿಯ ಭೀತಿ ಇಲ್ಲದೆಯೇ ಚುನಾವಣೆ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ರಾಜ್ಯದ ಜನರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನಿರ್ಮೂಲನೆ ಮಾಡುವ ಭರವಸೆಯನ್ನು ನಾನು ಈಡೇರಿಸಿದ್ದೇನೆ. ಧೈರ್ಯವಿದ್ದರೆ ಕಾಂಗ್ರೆಸ್‌ ಮತ್ತು ಇತರೆ ವಿಪಕ್ಷಗಳು, 2019ರಲ್ಲಿ ಬಿಜೆಪಿ ಸರ್ಕಾರ ರದ್ದು ಮಾಡಿದ್ದ ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡಲಿ’ ಎಂದು ಸವಾಲು ಹಾಕಿದರು. 

ಅಲ್ಲದೆ, ರಾಜ್ಯದಲ್ಲಿ ಶೀಘ್ರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಭರವಸೆ ನೀಡಿದರು.ನಾನು ಕಳೆದ 5 ದಶಕಗಳಿಂದಲೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದೇನೆ. 1992ರಲ್ಲಿ ಶ್ರೀನಗರದ ಲಾಲ್‌ಚೌಕ್‌ನಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು ಈಗಲೂ ನನಗೆ ನೆನಪಿದೆ. 2014ರಲ್ಲಿ ವೈಷ್ಣೋದೇವಿ ದೇಗುದಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದ ಬಳಿಕ ಇದೇ ಮೈದಾನದಲ್ಲಿ ನಾನು ನಿಮ್ಮನ್ನೆಲ್ಲಾ ಉದ್ದೇಶಿಸಿ ಮಾತನಾಡಿದ್ದೆ. ಈ ವೇಳೆ ತಲೆಮಾರುಗಳಿಂದ ಭಯೋತ್ಪಾದನೆಯ ಸಂಕಷ್ಟಕ್ಕೆ ಸಿಕ್ಕಿದ್ದ ನಿಮ್ಮನ್ನು ಅದರಿಂದ ಪಾರು ಮಾಡುವ ಭರವಸೆ ನೀಡಿದ್ದೆ. ಜನರ ಆಶೀರ್ವಾದದಿಂದ ಆ ಭರವಸೆಯನ್ನು ನಾನು ಈಡೇರಿಸಿದ್ದೇನೆ.

 ದಶಕಗಳ ಬಳಿಕ ರಾಜ್ಯದಲ್ಲಿ ಭಯೋತ್ಪಾದನೆ, ಕಲ್ಲುತೂರಾಟ, ಚುನಾವಣೆಯ ಬಹಿಷ್ಕಾರ, ಗಡಿಯಾಚೆಗಿನ ಗುಂಡಿನ ದಾಳಿ ಭೀತಿ ದೂರವಾಗಿ ಶಾಂತಿಯುತ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಈ ಸಂಗತಿಗಳ್ಯಾವುದೂ ಇದೀಗ ಚುನಾವಣೆಯ ವಿಷಯಗಳಲ್ಲ’ ಎಂದು ಮೋದಿ ಹೇಳಿದರು.

ಹಿಂದೆಲ್ಲಾ ಅಮರನಾಥ ಮತ್ತು ವೈಷ್ಣೋದೇವಿ ಯಾತ್ರೆ ವೇಳೆ ಭದ್ರತೆಯ ದೊಡ್ಡ ಆತಂಕದ ವಿಷಯವಾಗಿತ್ತು. ಆದರೆ ಇದೀಗ ಆ ಪರಿಸ್ಥಿತಿ ಇಲ್ಲ. ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಮತ್ತು ಸರ್ಕಾರದ ಕಡೆಗಿನ ಜನರ ವಿಶ್ವಾಸ ಮತ್ತಷ್ಟು ದೃಢವಾಗಿದೆ ಎಂದು ಪ್ರಧಾನಿ ಹೇಳಿದರು.

ವಂಶಪಾರಂಪರ್ಯ ರಾಜಕೀಯ ನಡೆಸುವ ಕುಟುಂಬಗಳು ಇತರೆ ಯಾವುದೇ ವಿಷಯಕ್ಕಿಂತ ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಹಾನಿ ಮಾಡಿವೆ. ಈ ಪಕ್ಷಗಳೆಲ್ಲಾ ಕುಟುಂಬದಿಂದ, ಕುಟುಂಬಕ್ಕಾಗಿ ಮತ್ತು ಕುಟುಂಬಕ್ಕೋಸಕ್ಕರ ರಾಜಕೀಯ ಮಾಡುವಂಥವು. ಈ ಪಕ್ಷಗಳೇ, ರಾಜ್ಯದಲ್ಲಿ ಸಂವಿಧಾನದ 370ನೇ ವಿಧಿಯ ತಡೆಗೋಡೆ ನಿರ್ಮಿಸಿದ್ದು. 370ನೇ ವಿಧಿಯಿಂದ ರಾಜ್ಯವನ್ನು ರಕ್ಷಿಸಬಹುದು ಎಂಬ ಭ್ರಮೆಯನ್ನು ಅವು ಜನರಲ್ಲಿ ಮೂಡಿಸಿದ್ದವು. ನಿಮ್ಮೆಲ್ಲರ ಆಶೀರ್ವಾದದಿಂದ ಮೋದಿ ಆ ಗೋಡೆಯನ್ನು ಒಡೆದು ಹಾಕಿದ್ದೂ ಅಲ್ಲದೆ ಅದರ ಅವಶೇಷಗಳನ್ನು ಹೂತುಹಾಕಿದ್ದಾರೆ. 

ನಾನು ವಿಪಕ್ಷಗಳಿಗೆ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ಗೆ ಸವಾಲು ಹಾಕುತ್ತೇನೆ, ನೀವು ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡುತ್ತೇವೆ ಎಂದು ಘೋಷಿಸಿ. ದೇಶ ನಿಮ್ಮ ಮುಖವನ್ನೂ ನೋಡಲಾಗದು ಎಂದು ಮೋದಿ ಹೇಳಿದರು.ನಮ್ಮ ಯೋಧರ ತಾಯಂದಿರು ಇದೀಗ ಕಲ್ಲು ತೂರಾಟದ ಘಟನೆ ಬಗ್ಗೆ ಆತಂಕ ಹೊಂದಿಲ್ಲ. ಕಣಿವೆ ರಾಜ್ಯದ ತಾಯಂದಿರು ತಮ್ಮ ಮಕ್ಕಳು ತಪ್ಪುಹಾದಿಯಲ್ಲಿ ಸಾಗುವ ಆತಂಕದಿಂದ ಪಾರಾಗಿ ನೆಮ್ಮದಿಯ ನಿದ್ದೆ ಮಾಡುತ್ತಿದ್ದಾರೆ ಮತ್ತು ಇದಕ್ಕಾಗಿ ನನ್ನನ್ನು ಅಭಿನಂದಿಸುತ್ತಿದ್ದಾರೆ. ಈಗ ರಾಜ್ಯದಲ್ಲಿ ಸೇತುವೆಗಳಿಗೆ ಬೆಂಕಿ ಹಾಕುತ್ತಿಲ್ಲ. ಹೊಸ ಸುರಂಗಗಳು, ವಿಸ್ತಾರವಾದ ರಸ್ತೆ , ಹೊಸ ರೈಲುಗಳ ಜೊತೆಗೆ ರಾಜ್ಯಕ್ಕೆ ಏಮ್ಸ್‌, ಐಐಟಿ, ಐಐಎಂಗಳು ಆಗಮಿಸುತ್ತಿವೆ ಎಂದು ಪ್ರಧಾನಿ ಹೇಳಿದರು.